ಊಟದ ಬಿಲ್ ಕೇಳಿದ್ದಕ್ಕೆ ಮಾಜಿ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ: ಸಿಸಿಟಿವಿ ಧ್ವಂಸ

ಧಾರವಾಡದಲ್ಲಿ ಮಾಜಿ ಸೈನಿಕನೊಬ್ಬನ ಮೇಲೆ ಪೊಲೀಸರು ನಡೆಸಿದ ಮಾರಣಾಂತಿಕ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಸಪ್ತಾಪೂರ ಬಡಾವಣೆಯ ವಿವೇಕಾನಂದ ಸರ್ಕಲ್‌ನಲ್ಲಿ ನಿನ್ನೆ ರಾತ್ರಿ ಸುಮಾರು 11 ಗಂಟೆಯ ಸುಮಾರಿಗೆ ನಡೆದಿದೆ. ಹಲ್ಲೆಯ ಪರಿಣಾಮವಾಗಿ ಮಾಜಿ ಸೈನಿಕ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೆ. ಪೋಲಿಸರು ಮಾಜಿ ಸೈನಿಕನ ಮೇಲೆ ಹೆಲ್ಮೆಟ್ ಮತ್ತು ಪೊಲೀಸ್ ಲಾಠಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮನಸ್ಸೋ ಇಚ್ಚೆ ಓರ್ವ ಎಎಸ್ ಐ ಮತ್ತು ನಾಲ್ವರು ಪೇದೆಗಳು ಹಿಗ್ಗಾಮುಗ್ಗಾ ಹಲ್ಲೆ ಮಾಡಿದ್ದಾರೆ. ಉಕ್ಕಲಿ ಗ್ರಾಮದ ಮೂಲದ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರು ಧಾರವಾಡದಲ್ಲಿ ಸೈನಿಕ ಮೆಸ್ ಎಂಬ ಹೆಸರಿನಲ್ಲಿ ಊಟದ ಅಂಗಡಿ ನಡೆಸುತ್ತಿದ್ದರು. ಈ ಮೆಸ್‌ನಲ್ಲಿ ಊಟ ಮಾಡಿದ ಪೊಲೀಸ್ ಸಿಬ್ಬಂದಿ ಬಿಲ್ ಪಾವತಿಸದೇ ಹೋದ ಕಾರಣಕ್ಕೆ ವಾಗ್ವಾದ ಉಂಟಾಯಿತು. ಬಿಲ್ ಕೇಳಿದ ವೇಳೆ ಪೊಲೀಸರು ಅಸಮಾಧಾನಗೊಂಡು, ಅಂಗಡಿ ತಡವಾಗಿ ಮುಚ್ಚುತ್ತಿದ್ದೀಯ ಎಂದು ಮಾಜಿ ಸೈನಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಒಬ್ಬ ಎಎಸ್‌ಐ ಸುಬೇದಾರ ಹಾಗೂ ನಾಲ್ವರು ಪೇದೆಗಳು ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳು ಹೆಲ್ಮೆಟ್ ಮತ್ತು ಲಾಠಿಗಳಿಂದ ರಾಮಪ್ಪ ನಿಪ್ಪಾಣಿಯ ಮೇಲೆ ಹಲ್ಲೆ ನಡೆಸಿ, ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂಬ ದೂರು ದಾಖಲಾಗಿದೆ.

ಸಿಸಿಟಿವಿ ಧ್ವಂಸ
ಹಲ್ಲೆ ಮಾಡಿರುವುದು ಮಾತ್ರವಲ್ಲ ಮೆಸ್‌ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆರೋಪಿಗಳು ಕಿತ್ತೆಸೆದು, ಯಾವುದೇ ಕುರುಹುಗಳು ಸಿಗದಂತೆ ಡಿವಿಆರ್ ಯಂತ್ರವನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಘಟನೆಯ ದೃಢವಾದ ದಾಖಲೆಗಳು ಲಭ್ಯವಾಗದೇ ಹೋಗಿವೆ. ಗಂಭೀರ ಗಾಯಗೊಂಡಿರುವ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೇ ವೇಳೆ ಎಎಸ್‌ಐ ಸುಬೇದಾರರಿಗೂ ಗಲಾಟೆಯಲ್ಲಿ ಗಾಯಗಳಾಗಿದ್ದು, ಆತನನ್ನು ಖಾಸಗಿ ಆಸ್ಪತ್ರೆ ಕೀಮ್ಸ್ ಗೆ ದಾಖಲಿಸಲಾಗಿದೆ.
ಮಾಜಿ ಸೈನಿಕನ ಪತ್ನಿ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿ, “ನನ್ನ ಗಂಡನನ್ನು ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನನಗೂ ಅವಮಾನ ಮಾಡಿದ್ದಾರೆ. ಮೂರು ದಿನಗಳಿಂದ ನಾವು ಹೆದರಿಕೆಯಲ್ಲಿ ಇದ್ದೇವೆ” ಎಂದು ಕಣ್ಣೀರಿಟ್ಟಿದ್ದಾರೆ.
ಈ ಘಟನೆ ಧಾರವಾಡ ನಗರದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಪೊಲೀಸರ ದುರ್ನಡತೆಯನ್ನು ಖಂಡಿಸಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಊಟ ಮಾಡಿ ಬಿಲ್ ಪಾವತಿಸದೆ ಗಲಾಟೆ ಮಾಡಿದ ಪ್ರಕರಣದಲ್ಲಿ ಕಾನೂನು ರಕ್ಷಕರು ತಾವೇ ಕಾನೂನು ಉಲ್ಲಂಘಿಸಿರುವುದಕ್ಕೆ ನಾಗರಿಕರು ತೀವ್ರ ಅಸಮಾಧಾನಗೊಂಡಿದ್ದಾರೆ.
ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಸಂಬಂಧ ತನಿಖೆ ಆರಂಭವಾಗಿದ್ದು, ಅಧಿಕಾರಿಗಳು ಸತ್ಯಾಂಶ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ. ಆದರೆ ಸಿಸಿಟಿವಿ ದೃಶ್ಯಗಳನ್ನು ನಾಶಪಡಿಸಿರುವುದರಿಂದ ಸಾಕ್ಷ್ಯ ಸಂಗ್ರಹಣೆಯಲ್ಲಿ ಅಡಚಣೆ ಎದುರಾಗುವ ಸಾಧ್ಯತೆ ಇದೆ. ಈ ಹಲ್ಲೆ ಪ್ರಕರಣವು ಪೋಲೀಸರ ಶಿಸ್ತು, ಜವಾಬ್ದಾರಿ ಮತ್ತು ಜನರ ಮೇಲಿನ ನಡವಳಿಕೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
