ಹರಪ್ಪಾ ನಾಗರಿಕತೆಗೂ ಹಿಂದಿನ ಪುರಾವೆ ಪತ್ತೆ: ಗುಜರಾತ್‌ನ ಕಛ್‌ನಲ್ಲಿ 9,500 ವರ್ಷ ಹಳೆಯ ಮಾನವ ವಾಸದ ಕುರುಹು

ಗಾಂಧಿನಗರ: ಗುಜರಾತ್‌ನ (Gujarat) ಕಛ್‌ನಲ್ಲಿ (Kachchh) ಪುರಾತತ್ವ ಶಾಸ್ತ್ರದ (Archeology) ಸಂಶೋಧಕರು ಬರೋಬ್ಬರಿ 9,000 ರಿಂದ 9,500 ವರ್ಷಗಳ ಹಿಂದಿನ ಮಾನವ ಉಪಸ್ಥಿತಿಯ ಪುರಾವೆಗಳನ್ನು ಪತ್ತೆ ಮಾಡಿದೆ. ಇದು ಹರಪ್ಪಾ ನಾಗರಿಕತೆಗೂ ಹಿಂದಿನ ಮಾನವನ ಜೀವನದ ಉಪಸ್ಥಿತಿಯನ್ನು ಬಹಿರಂಗಪಡಿಸುತ್ತದೆ.

ಐಐಟಿ-ಗಾಂಧಿನಗರ, ಐಐಟಿ-ಕಾನ್ಪುರ, ಇಂಟರ್ ಯೂನಿವರ್ಸಿಟಿ ಆಕ್ಸಿಲರೇಟರ್ ಸೆಂಟರ್ (ದೆಹಲಿ) ಮತ್ತು ಪಿಆರ್‌ಎಲ್-ಅಹಮದಾಬಾದ್‌ನ ಸಹಯೋಗದೊಂದಿಗೆ ಗುಜರಾತ್‌ನ ಕಛ್‌ನಲ್ಲಿ ನಡೆಸಿದ ಸಂಶೋಧನೆಯಲ್ಲಿ ಈ ಪ್ರಾಚೀನ ನಾಗರಿಕತೆಯ ಪುರಾವೆಗಳು ಪತ್ತೆಯಾಗಿವೆ.
ಐಐಟಿ ಗಾಂಧಿನಗರದ ಭೂ ವಿಜ್ಞಾನ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ವಿ.ಎನ್. ಪ್ರಭಾಕರ್ ಈ ಬಗ್ಗೆ ಮಾಹಿತಿ ನೀಡಿ, ನಮ್ಮ ಸಹೋದ್ಯೋಗಿಗಳಲ್ಲಿ ಒಬ್ಬರು ಧೋಲಾವಿರದಿಂದ 10 ಕಿಲೋಮೀಟರ್ ದೂರದಲ್ಲಿರುವ ಬಂಭಾಂಕದಲ್ಲಿ ಅನೇಕ ಮುರಿದ ಚಿಪ್ಪುಗಳನ್ನು ಪತ್ತೆ ಮಾಡಿದ್ದರು. ಅದು ಸುಮಾರು 6,000 ವರ್ಷಗಳಷ್ಟು ಹಳೆಯದು ಎಂದು ಕಂಡುಬಂದಿದೆ. ನಾನು 2020 ರಲ್ಲಿ ಇಲ್ಲಿ ಐಐಟಿಗೆ ಸೇರಿದಾಗ, ಅವರು ನನಗೆ ಸಂಶೋಧನೆಗಳನ್ನು ತೋರಿಸಿದರು. ನಾನು ಅದನ್ನು ತಕ್ಷಣ ಗುರುತಿಸಿದೆ ಎಂದು ತಿಳಿಸಿದ್ದಾರೆ.
ಅವುಗಳಲ್ಲಿ ಹೆಚ್ಚಿನವು ಚೂಪಾದ ಹಾಗೂ ಮುರಿದ ಚಿಪ್ಪುಗಳಿದ್ದವು. ಮಾನವರು ಮುರಿದ ಚಿಪ್ಪುಗಳನ್ನು ಒಂದೇ ಸ್ಥಳದಲ್ಲಿ ಸಂಗ್ರಹಿಸಲ್ಪಟ್ಟಲ್ಲಿ, ಪುರಾತತ್ತ್ವಜ್ಞರು ಅದನ್ನು ಶೆಲ್ ಮಿಡೆನ್‌ಗಳು ಅಥವಾ ಶೆಲ್ ಸ್ಕ್ಯಾಟರ್‌ಗಳು ಎಂದು ಕರೆಯುತ್ತಾರೆ. ಹಳೆಯ ಕಾಲದಲ್ಲಿ ಅಂದಿನ ಜನರು ಅವರು ಬಳಸಿದ್ದಿರಬೇಕಾದ ಕೆಲವು ಕಲ್ಲಿನ ಉಪಕರಣಗಳನ್ನು ಸಹ ನಾವು ಕಂಡುಕೊಂಡಿದ್ದೇವೆ. ಇವುಗಳನ್ನು ಸಂಯೋಜಿತ ಉಪಕರಣಗಳು ಎಂದು ಕರೆಯಲಾಗುತ್ತದೆ.
ಕನಿಷ್ಠ 15-16 ಸ್ಥಳಗಳಲ್ಲಿ ಶೆಲ್ ಮಿಡೆನ್‌ನ ಪುರಾವೆಗಳನ್ನು ನಾವು ಕಂಡುಕೊಂಡಿದ್ದೇವೆ. ಇವುಗಳಲ್ಲಿ ನಾವು ಸುಮಾರು 10 ಮಾದರಿಗಳ ದಿನಾಂಕವನ್ನು ಪತ್ತೆ ಮಾಡಿದ್ದೇವೆ. ಅವು ಕ್ರಿ.ಪೂ.7,500 ಯಿಂದ ಕ್ರಿ.ಪೂ. 4,000 ವರೆಗೆ ಇರಬಹುದು ಎಂದು ನಾವು ಕಂಡುಕೊಂಡಿದ್ದೇವೆ. ಅಷ್ಟೊಂದು ಹಳೆಯ ಕಾಲದಲ್ಲಿ ಜನರು ಅಲ್ಲಿ ಬೇಟೆಗಾಗಿ ಇಂತಹ ವಸ್ತುಗಳನ್ನು ಸಂಗ್ರಹಿಸಿ ಇಡುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಮತ್ತೊಂದು ಮುಖ್ಯ ವಿಷಯವೆಂದರೆ ಇದು ಹರಪ್ಪಾ ನಾಗರಿಕತೆಯ ಆಗಮನಕ್ಕೂ ಬಹಳ ಹಿಂದಿನ ನಾಗರಿಕತೆ ಎನ್ನಬಹುದು. ಮಾತ್ರವಲ್ಲದೇ ಈ ಜನರು ಸ್ಥಳೀಯ ಪರಿಸರವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು ಎಂದಿದ್ದಾರೆ.
ಈ ಸಂಶೋಧನಾ ಯೋಜನೆಯು ಭೂ ವಿಜ್ಞಾನ ಸಚಿವಾಲಯದ ಪ್ರಾಯೋಜಿತ ಯೋಜನೆಯಾಗಿದೆ. ಇದು ಐಐಟಿ ಕಾನ್ಪುರ ಮತ್ತು ಐಐಟಿ ಗಾಂಧಿನಗರದ ಸಹಯೋಗದ ಯೋಜನೆಯಾಗಿದೆ. ನಾವು ಪುರಾತತ್ತ್ವ ಶಾಸ್ತ್ರ ಮತ್ತು ಅಲ್ಲಿ ವಾಸಿಸುತ್ತಿದ್ದ ಮಾನವರನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು ಇದರ ಪರಿಣಾಮವಾಗಿ ನಮಗೆ ಉತ್ತಮ ಪುರಾವೆಗಳು ಸಿಕ್ಕಿವೆ. ನಾವು ಈ ಸಂಶೋಧನೆಯನ್ನು ಇತರ ದ್ವೀಪಗಳು ಮತ್ತು ಕಛ್‌ನ ಮುಖ್ಯ ಭೂಭಾಗದಲ್ಲಿಯೂ ಮತ್ತಷ್ಟು ವಿಸ್ತರಿಸಲಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.