ಪಾಕಿಸ್ತಾನಕ್ಕೆ ಗುಪ್ತಚರ ಸಹಾಯ: ಭಾರತೀಯ ಸಿಮ್ ಪೂರೈಕೆಯಿಂದ ಪಾಕ್ ಪರ ಏಜೆಂಟ್ ಬಂಧನ

ಬೆಂಗಳೂರು: ಬೇಹುಗಾರಿಕೆ ಚಟುವಟಿಕೆಗಳಿಗಾಗಿ ಭಾರತೀಯ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಪೂರೈಸುತ್ತಾ, ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಪಾಕ್ ಪರ ಬೇಹುಗಾರನನ್ನ ದೆಹಲಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಬಂಧಿಸಿದ್ದಾರೆ.

ರಾಜಸ್ಥಾನದ ದೀಗ್ ಜಿಲ್ಲೆಯ ಗಂಗೋರಾ ಗ್ರಾಮದ ನಿವಾಸಿ ಕಾಸಿಮ್ (34) ಬಂಧಿತ ಬೇಹುಗಾರ. ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಈತನನ್ನ ಬಂಧಿಸಲಾಗಿದೆ.
ಪಾಕಿಸ್ತಾನಕ್ಕೆ 2024ರ ಆಗಸ್ಟ್ ಮತ್ತು 2025ರ ಮಾರ್ಚ್‌ನಲ್ಲಿ 2 ಬಾರಿ ಭೇಟಿ ನೀಡಿದ್ದ ಕಾಸಿಮ್ 90 ದಿನಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದ. ಈ ಸಮಯದಲ್ಲಿ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಅಧಿಕಾರಿಗಳನ್ನೂ ಭೇಟಿ ಮಾಡಿದ್ದ ಎಂದು ಶಂಕಿಸಲಾಗಿದೆ. ಇಂದು ಬೆಳಗ್ಗೆ ಕಾಸಿಮ್‌ನನ್ನ ಬಂಧಿಸಿದ್ದು, ಪೊಲೀಸ್ ರಿಮ್ಯಾಂಡ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಳಿವು ಸಿಕ್ಕಿದ್ದು ಹೇಗೆ?
2024ರ ಸೆಪ್ಟೆಂಬರ್‌ನಲ್ಲಿ ಭಾರತೀಯ ಸೇನೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ್ದ ಸೂಕ್ಷ್ಮ ಮಾಹಿತಿಯನ್ನ ಸಂಗ್ರಹಿಸಲು ಪಾಕ್ ಗುಪ್ತಚರ ಅಧಿಕಾರಿಗಳು ಭಾರತೀಯ ಮೊಬೈಲ್ ಸಂಖ್ಯೆಗಳನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರ ಎಂಬ ಮಾಹಿತಿ ಭಾರತೀಯ ಗುಪ್ತಚರ ಅಧಿಕಾರಿಗಳಿಗೆ ಬಂದಿತ್ತು. ಭಾರತದಲ್ಲೇ ಸಿಮ್ ಕಾರ್ಡ್‌ಗಳನ್ನ ಖರೀದಿಸಿ, ಇಲ್ಲಿನವರ ಸಹಾಯದಿಂದಲೇ ಗಡಿಯಾಚೆಗೆ ಪೂರೈಸಲಾಗಿದೆ ಎಂದು ಹೇಳಲಾಗಿತ್ತು.
ಈ ಸಿಎಮ್ ಕಾರ್ಡ್‌ಗಳನ್ನೇ ಬಳಸಿಕೊಂಡು ಐಎಸ್‌ಐ ಅಧಿಕಾರಿಗಳು ಭಾರತೀಯರನ್ನ ಸೋಷಿಯಲ್ ಮೀಡಿಯಾಗಳ ಮೂಲಕ ಸಂಪರ್ಕಿಸುತ್ತಿದ್ದರು, ಜೊತೆಗೆ ಸೂಕ್ಷ್ಮ ಮಾಹಿತಿಯನ್ನ ಹೊರತೆಗೆಯಲು ಯತ್ನಿಸುತ್ತಿದ್ದರು. ಈ ಕುರಿತು ತನಿಖೆ ನಡೆಸಿದಾಗ ಕಾಸಿಮ್ ಹೆಸರು ಹೊರಬಂದಿತು. ಕೂಡಲೇ ಆತನನ್ನ ಬಂಧಿಸಲಾಗಿದೆ ಎಂದು ಅಧಿಕಾರಿ ಮೂಲಗಳಿಂದ ತಿಳಿದುಬಂದಿದೆ.
ಸದ್ಯ ಕಾಸಿಮ್ ಹಿನ್ನೆಲೆ, ಪಾಕ್‌ಗೆ ಭೇಟಿ ನೀಡಿದ ಪ್ರಯಾಣ ವಿವರ ಹಾಗೂ ಈತನ ಸಂಪರ್ಕದಲ್ಲಿ ಯಾರ‍್ಯಾರು ಇದ್ದಾರೆ ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ.