100% ವಿತ್ಡ್ರಾಯಲ್ ಸೇರಿ ಇಪಿಎಫ್ಒದಿಂದ ಹೊಸ ನಿಯಮಗಳ ಜಾರಿಗೆ ಚಿಂತನೆ; ಕಾರ್ಮಿಕರಿಗೆ ನೆಮ್ಮದಿ!

ನವದೆಹಲಿ: ಇಪಿಎಫ್ ನಿಯಮಗಳಲ್ಲಿ ಗಮನಾರ್ಹ ಸುಧಾರಣೆಗಳಾಗುತ್ತಿದ್ದು, ನಿಯಮಗಳು ಸರಳಗೊಳ್ಳುತ್ತಿವೆ. ಉದ್ಯೋಗಿಗಳು ತಮ್ಮ ಇಪಿಎಫ್ ಫಂಡ್ ಅನ್ನು ಹೆಚ್ಚು ಸುಲಭವಾಗಿ ವಿತ್ಡ್ರಾ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್ಒನ ಕೇಂದ್ರೀಯ ಟ್ರಸ್ಟೀ ಮಂಡಳಿ ಈ ಸುಧಾರಣೆಗಳಿಗೆ ಅನುಮೋದನೆ ನೀಡಿದೆ. ಸಿಬಿಟಿ ಸಭೆ ಅಕ್ಟೋಬರ್ 13ರಂದು ನಡೆದಿತ್ತು. ಈ ಸಭೆಯಲ್ಲಿ ಕೆಲ ಗಮನಾರ್ಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಶೇ. 25ರಷ್ಟು ಕನಿಷ್ಠ ಬ್ಯಾಲನ್ಸ್ ಉಳಿಸಿಕೊಳ್ಳುವುದು
ಇಪಿಎಫ್ ಸದಸ್ಯರು ತಮ್ಮ ಕೊಡುಗೆಯಲ್ಲಿ ಶೇ. 25ರಷ್ಟನ್ನು ಮಿನಿಮಮ್ ಬ್ಯಾಲನ್ಸ್ ಆಗಿ ಹೊಂದಿರುವುದು ಕಡ್ಡಾಯ. ಅಂದರೆ, ಈ ಶೇ. 25ರಷ್ಟು ಮೊತ್ತವನ್ನು ವಿತ್ಡ್ರಾ ಮಾಡಲು ಆಗುವುದಿಲ್ಲ. ಉದ್ಯೋಗಿಗಳು ನಿವೃತ್ತರಾದಾಗ ಈ ಇಪಿಎಫ್ ಕಾರ್ಪಸ್ ಸಹಾಯಕ್ಕೆ ಬರುತ್ತದೆ. ವರ್ಷಕ್ಕೆ ಶೇ. 8.25ರಷ್ಟು ಬಡ್ಡಿಯೂ ಸಿಗುತ್ತಿರುತ್ತದೆ.
ನೂರಕ್ಕೆ ನೂರು ಹಣ ವಿತ್ಡ್ರಾ
ಇಪಿಎಫ್ ಸದಸ್ಯರು ತಮ್ಮ ಅರ್ಹ ಪಿಎಫ್ ಫಂಡ್ ಬ್ಯಾಲನ್ಸ್ ಅನ್ನು ಸಂಪೂರ್ಣವಾಗಿ ವಿತ್ಡ್ರಾ ಮಾಡಲು ಅವಕಾಶ ಇದೆ. ಇಲ್ಲಿ ಅರ್ಹ ಪಿಎಫ್ ಬ್ಯಾಲನ್ಸ್ ಏನು ಎಂದು ನಿರ್ದಿಷ್ಟಪಡಿಸಲಾಗಿಲ್ಲ. ಈ ನಿಯಮಗಳನ್ನು ಜಾರಿಗೆ ತರುವಾಗ ಸ್ಪಷ್ಟತೆ ಸಿಗಬಹುದು.
ವಿತ್ಡ್ರಾ ಮಾಡಲು ನೀಡಬೇಕಾದ ಕಾರಣಗಳಲ್ಲಿ ಬದಲಾವಣೆ
ಇಪಿಎಫ್ ಅಕೌಂಟ್ನಿಂದ ಹಣ ವಿತ್ಡ್ರಾ ಮಾಡಲು ಸದ್ಯ 13 ಕಾರಣಗಳನ್ನು ನಮೂದಿಸಲಾಗಿದೆ. ಇವುಗಳ ಬದಲು ಮೂರು ಕಾರಣಗಳನ್ನು ಮಾತ್ರ ನೀಡಲಾಗಿದೆ. ಅನಾರೋಗ್ಯ, ಶಿಕ್ಷಣ, ಮದುವೆಯಂತಹ ಪ್ರಮುಖ ಅಗತ್ಯತೆಗಳು, ಮನೆ ನಿರ್ಮಾಣ ಮತ್ತು ವಿಶೇಷ ಸಂದರ್ಭ ಈ ಮೂರು ಕೆಟಗರಿಯನ್ನು ಮಾತ್ರ ತರಲಾಗುತ್ತದೆ.
ಹೆಚ್ಚು ಬಾರಿ ವಿತ್ಡ್ರಾ ಸಾಧ್ಯ
ಭಾಗಶಃ ಪಿಎಫ್ ವಿತ್ಡ್ರಾ ಮಾಡಲು 3 ಬಾರಿ ಮಾತ್ರ ಅವಕಾಶ ಇತ್ತು. ಈಗ ಹೆಚ್ಚಿನ ಅವಕಾಶ ನೀಡಲಾಗುತ್ತದೆ. ಶಿಕ್ಷಣಕ್ಕಾಗಿ ನೀವು ವಿವಿಧ ಹಂತಗಳಲ್ಲಿ 10 ಬಾರಿ ವಿತ್ಡ್ರಾ ಮಾಡಬಹುದು. ಮದುವೆಗಾಗಿ 5 ಬಾರಿ ವಿತ್ಡ್ರಾ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ.
ಕನಿಷ್ಠ ಸೇವಾವಧಿ 12 ತಿಂಗಳು
ಭಾಗಶಃ ಪಿಎಫ್ ವಿತ್ಡ್ರಾಯಲ್ಗೆ ನಿಮ್ಮ ಕನಿಷ್ಠ ಸೇವಾವಧಿ 12 ತಿಂಗಳಾಗಿರುತ್ತದೆ
ವಿಶೇಷ ಸಂದರ್ಭಕ್ಕೆ ಭಾಗಶಃ ಪಿಎಫ್ ವಿತ್ಡ್ರಾ
ಪಿಎಫ್ ವಿತ್ಡ್ರಾ ಮಾಡಲು ಇರುವ ಮೂರು ಕೆಟಗರಿಯಲ್ಲಿ ವಿಶೇಷ ಸಂದರ್ಭವೂ ಒಂದು. ಭಾಗಶಃ ಪಿಎಫ್ ಹಣ ಹಿಂಪಡೆಯುವಾಗ ಈ ಕೆಟಗರಿ ಆಯ್ದುಕೊಂಡು ಅದರಲ್ಲಿ ನೈಸರ್ಗಿಕ ವಿಕೋಪ, ನಿರುದ್ಯೋಗ ಇತ್ಯಾದಿ ನಿರ್ದಿಷ್ಟ ಕಾರಣ ನೀಡಬೇಕಿತ್ತು. ಈ ಹಂತದಲ್ಲಿ ಕ್ಲೇಮ್ ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿತ್ತು. ಈಗ ಅದನ್ನು ಸರಳಗೊಳಿಸಲಾಗುತ್ತಿದೆ. ಈ ಕೆಟಗರಿಯಲ್ಲಿ ಯಾವುದೇ ಕಾರಣ ನೀಡದೇ ಪಿಎಫ್ಗೆ ಕ್ಲೇಮ್ ಸಲ್ಲಿಸಬಹುದು.