ಕ್ರಿಕೆಟ್‌ಗಿಂತ ಚಿತ್ರಕಲೆಯಲ್ಲಿ ಹೆಚ್ಚು ಹಣ ಗಳಿಸಿದ ಇಂಗ್ಲೆಂಡ್‌ನ ಮಾಜಿ ವಿಕೆಟ್ ಕೀಪರ್ ಜಾಕ್ ರಸೆಲ್!

ಲಂಡನ್: ಇಂಗ್ಲೆಂಡ್ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ಜಾಕ್ ರಸೆಲ್ ಇದೀಗ ಚಿತ್ರ ಕಲಾವಿದರಾಗಿ ವರ್ಣಚಿತ್ರಗಳನ್ನು ಬಿಡಿಸುವುದರಲ್ಲಿ ಬಿಜಿಯಾಗಿದ್ದಾರೆ. ಅಲ್ಲದೆ ಕ್ರಿಕೆಟ್ಗಿಂತ ತಾನು ಚಿತ್ರ ಕಲಾವಿದನಾಗಿಯೇ ಹೆಚ್ಚು ಹಣ ಸಂಪಾದಿಸಿರುವೆ ಎಂದು 61 ವರ್ಷದ ಜಾಕ್ ರಸೆಲ್ ಹೇಳಿಕೊಂಡಿದ್ದಾರೆ.

1987ರಿಂದ 1998ರ ನಡುವೆ ಇಂಗ್ಲೆಂಡ್ ಪರ 54 ಟೆಸ್ಟ್ ಮತ್ತು 40 ಏಕದಿನ ಪಂದ್ಯಗಳನ್ನು ಆಡಿರುವ ಜಾಕ್ ರಸೆಲ್, 2 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಟೆಸ್ಟ್ನಲ್ಲಿ 2 ಶತಕಗಳನ್ನು ಸಿಡಿಸಿದ್ದಾರೆ. ಕೀಪರ್ ಆಗಿ ಒಟ್ಟಾರೆ 200ಕ್ಕೂ ಅಧಿಕ ಬಲಿಗಳನ್ನು ಪಡೆದಿದ್ದಾರೆ. 1996ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಆಡಿದ್ದರು ಮತ್ತು ಸನ್ಗ್ಲಾಸ್ ಧರಿಸಿಯೇ ಕೀಪಿಂಗ್ ಮಾಡುವ ಮೂಲಕ ಗಮನಸೆಳೆದಿದ್ದರು. ಅವರು ಕೌಂಟಿ ಕ್ರಿಕೆಟ್ನಿಂದಲೂ ನಿವೃತ್ತಿ ಹೊಂದಿ 20 ವರ್ಷಗಳೇ ಕಳೆದಿವೆ. ಆದರೆ ತನ್ನ ಪೇಂಟಿಂಗ್ಗಳ ಮೂಲಕ ಅವರು ಈಗಲೂ ಕ್ರಿಕೆಟ್ ಜತೆಗೆ ಸಂಪರ್ಕ ಹೊಂದಿದ್ದಾರೆ.
ತನ್ನ ಚಿತ್ರಕಲೆಗೆ ಭಾರತದಲ್ಲೂ ಅಭಿಮಾನಿಗಳನ್ನು ಹೊಂದಿರುವ ಜಾಕ್ ರಸೆಲ್, ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಮೊದಲ ಭಾರತೀಯ ರಣಜಿತ್ಸಿನ್ಹಾಜಿ ಅವರ ಭಾವಚಿತ್ರವೊಂದನ್ನು ಬಿಡಿಸಿದ್ದರು. ‘ಕಳೆದ 20 ವರ್ಷಗಳನ್ನು ನಾನು ಪೇಂಟಿಂಗ್ನಲ್ಲೇ ಕಳೆದಿರುವೆ ಮತ್ತು ಸಮಯ ಹೋಗಿದ್ದೇ ಗೊತ್ತಾಗಿಲ್ಲ. ನಾನು ಪ್ರತಿದಿನವೂ ಚಿತ್ರ ಬಿಡಿಸುತ್ತಿರುತ್ತೇನೆ. ಈಗ ಅದೇ ನನ್ನ ಕೆಲಸ. ಒಟ್ಟಾರೆಯಾಗಿ ನಾನು 35-36 ವರ್ಷಗಳಿಂದ ಪೇಟಿಂಗ್ ಮಾಡುತ್ತಿರುವೆ. ಅಂದರೆ ಕ್ರಿಕೆಟ್ಗಿಂತ ಹೆಚ್ಚಿನ ಸಮಯವನ್ನು ಇದರಲ್ಲೇ ಕಳೆದಿರುವೆ’ ಎಂದು ಜಾಕ್ ರಸೆಲ್ ತಿಳಿಸಿದ್ದಾರೆ.
ಜಾಕ್ ರಸೆಲ್ ಬಿಡಿಸುವ ಚಿತ್ರಗಳು ದುಬಾರಿ ಬೆಲೆಗೂ ಮಾರಾಟವಾಗುತ್ತವೆ. 2019ರಲ್ಲಿ ಅವರು ಬಿಡಿಸಿದ ಆಶಸ್ ಸರಣಿಯ ಕೆಲ ಚಿತ್ರಗಳು 28-29 ಲಕ್ಷ ರೂ.ಗಳಿಗೂ ಮಾರಾಟವಾಗಿದ್ದವು. ‘ಕ್ರಿಕೆಟ್ ಆಡುವ ದಿನಗಳಲ್ಲಿ ನನಗೆ ಉತ್ತಮ ವೇತನವೇ ಲಭಿಸಿತ್ತು. ಆದರೆ ಅದು ಈಗ ನಾನು ಚಿತ್ರ ಕಲಾವಿದನಾಗಿ ದುಡಿಯುವಷ್ಟು ಅಲ್ಲ. ಕ್ರಿಕೆಟ್ಗಿಂತ ಹೆಚ್ಚು ಇದರಲ್ಲೇ ಹಣ ಸಂಪಾದಿಸಿರುವೆ. ಆದರೆ ನಾನೀಗ ಹಣಕ್ಕಾಗಿ ಚಿತ್ರ ಬಿಡಿಸುತ್ತಿಲ್ಲ. ಇದು ನನ್ನ ಪ್ರೀತಿ. ನನ್ನ ನೆಚ್ಚಿನ ಎರಡೂ ಕೆಲಸಗಳನ್ನು ನಿರ್ವಹಿಸುವ ಅವಕಾಶ ಲಭಿಸಿದೆ’ ಎಂದು ಜಾಕ್ ರಸೆಲ್ ವಿವರಿಸಿದ್ದಾರೆ.