700 ವರ್ಷಗಳ ಬಳಿಕ ಕೊಲೆ ರಹಸ್ಯ ಭೇದಿಸಿದ ಇಂಗ್ಲೆಂಡ್! ಪಾದ್ರಿ ಜಾನ್ ಫೋರ್ಡ್ ಕೊಲೆ ಹಿಂದೆ ಮಹಿಳೆಯ ಸೇಡು?

ಲಂಡನ್: ಬರೋಬ್ಬರಿ 700 ವರ್ಷಗಳ ಬಳಿಕ ಇಂಗ್ಲೆಂಡಿನಲ್ಲಿ ( Murder Mystery) ನಡೆದ ಕೊಲೆ ಪ್ರಕರಣವೊಂದು ಬಗೆಹರಿದಂತೆ ಕಾಣಿಸುತ್ತಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಪರಾಧಶಾಸ್ತ್ರ ಸಂಸ್ಥೆಯ ಮಧ್ಯಕಾಲೀನ ಕೊಲೆ ನಕ್ಷೆಗಳ ಯೋಜನೆಯ ಸಂಶೋಧನಾ ತಂಡವು ಪಾದ್ರಿ ಜಾನ್ ಫೋರ್ಡ್ ಅವರ ಕೊಲೆ ಪ್ರಕರಣದ ವಿವರಗಳನ್ನು ಕಲೆ ಹಾಕಿ ಅವರ ಕೊಲೆಗೆ ಕಾರಣವೇನಿರಬಹುದು ಎಂಬುದನ್ನು ಕಂಡು ಹಿಡಿದಿದೆ.
1337 ರಲ್ಲಿ ಕೆಲವು ಆಕ್ರಮಣಕಾರರು ಜನನಿಬಿಡ ನಗರದ ಬೀದಿಯಲ್ಲಿ ಪಾದ್ರಿಯ ಕತ್ತು ಸೀಳಿ ಕೊಲೆ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಕೊಲೆಯ ರಹಸ್ಯ ನಿಗೂಢವಾಗಿಯೇ ಉಳಿದಿತ್ತು.
ಫೋರ್ಡ್ ಅವರ ಕೊಲೆಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಮತ್ತು ಇದು ಒಬ್ಬ ಗಣ್ಯ ಮಹಿಳೆಯ ಸೇಡಿನ ಕೃತ್ಯ ಎಂದು ಸಂಶೋಧನಾ ತಂಡವು ಕಂಡುಹಿಡಿದಿದೆ. ಮಧ್ಯಕಾಲೀನ ಕೊಲೆ ನಕ್ಷೆಗಳ ಯೋಜನೆಯು 14 ನೇ ಶತಮಾನದಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಅಸ್ವಾಭಾವಿಕ ಸಾವುಗಳ ಡೇಟಾಬೇಸ್ ಆಗಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಪರಾಧಶಾಸ್ತ್ರಜ್ಞರಾಗಿರುವ ಮ್ಯಾನುಯೆಲ್ ಐಸ್ನರ್ ಇತ್ತೀಚೆಗೆ ಸುಮಾರು ಏಳು ಶತಮಾನಗಳ ನಂತರ ಪ್ರಕರಣದ ಪುನರಾರಂಭ ಎಂದು ಹೇಳಬಹುದಾದ ವಿವರಗಳನ್ನು ಅಧ್ಯಯನ ಮಾಡಿದರು.
ಸಂಶೋಧನೆಗಳ ಪ್ರಕಾರ, ಎಲಾ ಫಿಟ್ಜ್ಪೇನ್ ಎಂಬ ಮಹಿಳೆಯ ಮೇಲೆ ಫೋರ್ಡ್ ಜೊತೆಗಿನ ಸಂಬಂಧ ಸೇರಿದಂತೆ ಹಲವು ಪ್ರಕರಣಗಳ ಆರೋಪ ಹೊರಿಸಲಾಗಿತ್ತು. ಅವರಿಗೆ ಸ್ಯಾಲಿಸ್ಬರಿ ಕ್ಯಾಥೆಡ್ರಲ್ನಾದ್ಯಂತ ಬರಿಗಾಲಿನಲ್ಲಿ ನಡೆಯುವ ಶಿಕ್ಷೆಯನ್ನು ವಿಧಿಸಲಾಗಿತ್ತು. ಚಿನ್ನ, ಮುತ್ತುಗಳು ಅಥವಾ ಅಮೂಲ್ಯ ವಸ್ತುಗಳನ್ನು ಧರಿಸುವುದನ್ನು ನಿಷೇಧ ಹೇರಲಾಗಿತ್ತು. ಫಿಟ್ಜ್ಪೇನ್ ತನ್ನ ಪತಿ ಮತ್ತು ಜಾನ್ ಫೋರ್ಡ್ ಜೊತೆಗೂಡಿ ಸುಲಿಗೆಕೋರರ ಗ್ಯಾಂಗ್ ಅನ್ನು ಮುನ್ನಡೆಸಲು ಸಂಚು ರೂಪಿಸಿದ್ದರು ಎಂದು ಐಸ್ನರ್ ಮತ್ತೊಂದು ದಾಖಲೆಯಲ್ಲಿ ಕಂಡುಕೊಂಡಿದ್ದಾರೆ. ಈ ಆರೋಪಗಳು ಬಂದ ಸಮಯದಲ್ಲಿ ಇದು ಸಂಭವಿಸಿದೆ. ಗ್ಯಾಂಗ್ ಚರ್ಚ್ ಪ್ರಿಯರಿ ಮೇಲೆ ದಾಳಿ ಮಾಡಿ ಕಟ್ಟಡಗಳಿಗೆ ದರೋಡೆ ಮಾಡಿದೆ ಎಂದು ಹೇಳಲಾಗುತ್ತದೆ.
ನಂತರ ಅದೇ ಗುಂಪಿನ ನಡುವೆ ಭಿನ್ನಾಭಿಪ್ರಾಯಗಳು ಬಂದಿದ್ದವು. ಇದೇ ಕಾರಣವೇ ಪಾದ್ರಿಯ ಕೊಲೆಗೆ ಕಾರಣವಾಗಿದೆ ಎಂದು ಅಧ್ಯಯನ ತಿಳಿಸಿದೆ. ಬರೋಬ್ಬರಿ 700 ವರ್ಷಗಳ ಬಳಿಕ ಕೊಲೆಗೆ ಇದೇ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.