ಮೊಟ್ಟೆ ಬೆಲೆ ಏರಿಕೆ: ಶಿಕ್ಷಕರಿಗೆ ತಲೆನೋವಾದ ಸರ್ಕಾರಿ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣಾ ಯೋಜನೆ!

ಮಂಗಳೂರು: ಸರಕಾರಿ ಶಾಲೆಯ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಸರಕಾರ ವಾರದ 6 ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುತ್ತಿದೆ. ಇದನ್ನು ಶಾಲೆಯವರೇ ವ್ಯವಸ್ಥೆ ಮಾಡಬೇಕಿದೆ. ಸರಕಾರ ನಿಗದಿತ ಮೊತ್ತವನ್ನಷ್ಟೇ ನೀಡುತ್ತಿದೆ. ಮೊಟ್ಟೆಯ ಬೆಲೆ ಏರಿಕೆಯಿಂದಾಗಿ ಈ ಮೊತ್ತಕ್ಕೆ ಮೊಟ್ಟೆ ಸಿಗದೆ ಶಿಕ್ಷಕರು ಕಂಗಾಲಾಗಿದ್ದಾರೆ!

ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸಲು ತಲಾ ಒಂದು ವಿದ್ಯಾರ್ಥಿಗೆ 1 ದಿನಕ್ಕೆ 6 ರೂ. ಸರಕಾರದಿಂದ ಸಿಗುತ್ತಿದೆ. ಇದರಲ್ಲಿ 5 ರೂ. ಮಾತ್ರ ಮೊಟ್ಟೆ ಖರೀದಿ ವೆಚ್ಚ. ಉಳಿದ 1 ರೂ.ನಲ್ಲಿ ಮೊಟ್ಟೆ ಬೇಯಿಸಲು ಗ್ಯಾಸ್ ಬಳಕೆಗೆ 50 ಪೈಸೆ, 1 ಮೊಟ್ಟೆಯ ಸಿಪ್ಪೆ ತೆಗೆದವರಿಗೆ 30 ಪೈಸೆ ಹಾಗೂ 20 ಪೈಸೆ ಸಾಗಾಣಿಕೆ ವೆಚ್ಚ ಎಂದು ನಿಗದಿ ಮಾಡಲಾಗಿದೆ.
ಕೆಲವು ಶಾಲೆಯವರು ರಖಂ ಆಗಿ ಮೊಟ್ಟೆ ಖರೀದಿ ಮಾಡಿದರೆ, ಗ್ರಾಮಾಂತರ ಭಾಗ ಸಹಿತ ಹಲವು ಕಡೆ ಚಿಲ್ಲರೆಯಾಗಿ ಸ್ಥಳೀಯವಾಗಿ ಅಂಗಡಿಗಳಿಂದ ಮೊಟ್ಟೆ ಖರೀದಿ ಮಾಡುತ್ತಾರೆ. ಆದರೆ ಮೊಟ್ಟೆ ದರ ಇದೀಗ ದಿನದಿಂದ ದಿನಕ್ಕೇರುತ್ತಿದೆ. ರಖಂನಲ್ಲಿ ಕೆಲವರಿಗೆ 6.50 ರೂ.ಗಳಿಗೆ ಸಿಕ್ಕಿದರೆ, ಚಿಲ್ಲರೆಯಾಗಿ 7 ರೂ. ಆಸುಪಾಸಿನಲ್ಲಿದೆ. ಪರಿಣಾಮವಾಗಿ ಪ್ರತೀ ಶಾಲೆಯಲ್ಲಿ ಮೊಟ್ಟೆಯ ಹೆಸರಿನಲ್ಲಿ ಒಬ್ಬೊಬ್ಬ ವಿದ್ಯಾರ್ಥಿಯ ತಲಾ ಒಂದೂವರೆ ರೂ. ಹೆಚ್ಚುವರಿ ಮೊತ್ತ ಈಗ ಶಿಕ್ಷಕರಿಗೆ ಹೊರೆಯಾಗುತ್ತಿದೆ.
ಗ್ಯಾಸ್ ದರ ಕೂಡ ಏರಿಕೆ ಆಗುತ್ತಿರುವುದು ಮೊಟ್ಟೆಯ ಕಾರಣದಿಂದ ಶಾಲೆಯವರಿಗೆ ತಲೆಬಿಸಿ ತಂದಿದೆ. ಇನ್ನು, ಮೊಟ್ಟೆ ಸಿಪ್ಪೆ ತೆಗೆಯುವ ಅಡುಗೆಯವರಿಗೆ ಕೆಲವೆಡೆ ಹಣ ಕೊಟ್ಟರೂ ಇನ್ನೂ ಕೆಲವೆಡೆ ಅವರಿಗೆ ಆ ಹಣ ಸಿಗುತ್ತಲೇ ಇಲ್ಲ!
ದಿನಕ್ಕೆ 312 ರೂ. ನಷ್ಟ!
“ನಮ್ಮ ಸರಕಾರಿ ಶಾಲೆಯಲ್ಲಿ 240 ಮಕ್ಕಳು ಮೊಟ್ಟೆ ತಿನ್ನುವವರಿದ್ದಾರೆ. ಪ್ರತೀ ದಿನ ಇವರಿಗೆ ಮೊಟ್ಟೆ ನೀಡಲಾಗುತ್ತದೆ. ಸರಕಾರ ನೀಡುವ ದರಕ್ಕಿಂತ ಖರೀದಿ ಮೊಟ್ಟೆ ದರ ಹೆಚ್ಚಿದೆ. ಪ್ರತೀ ದಿನ ಪ್ರತೀ ವಿದ್ಯಾರ್ಥಿಯ ಮೇಲೆ 1.30 ರೂ. ಹೆಚ್ಚುವರಿ ಹಣ ವ್ಯಯವಾಗುತ್ತಿದೆ. ಹೀಗಾಗಿ ದಿನಕ್ಕೆ 312 ರೂ. ಹೆಚ್ಚುವರಿ ವ್ಯಯಿಸಬೇಕು. ಅದರಂತೆ, ತಿಂಗಳಲ್ಲಿ 25 ದಿನಕ್ಕೆ 7,800 ರೂ. ಹೆಚ್ಚುವರಿ ವೆಚ್ಚವಾಗುತ್ತಿದೆ. ಈ ಹಣವನ್ನು ನೀಡುವವರು ಯಾರು? ಮುಖ್ಯ ಶಿಕ್ಷಕರು, ಶಿಕ್ಷಕರು ತಮ್ಮ ಕೈಯಿಂದ ಹಣ ನೀಡಬೇಕಾಗುತ್ತಿದೆ’ ಎನ್ನುತ್ತಾರೆ ಮಂಗಳೂರಿನ ಸರಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕಿ. ಬಹುತೇಕ ಎಲ್ಲ ಶಾಲೆಯಲ್ಲಿಯೂ ಹೆಚ್ಚುಕಮ್ಮಿ ಇದೇ ಸ್ಥಿತಿ.
“ಮೊಟ್ಟೆ ಖರೀದಿ ಮಾಡಿರುವುದನ್ನು ಪ್ರತೀದಿನ ಅಪ್‌ಡೇಟ್ ಮಾಡಿ; ಸರಕಾರ ಇದನ್ನು ಮುಂಬರುವ ದಿನದಲ್ಲಿ ಪರಿಗಣಿಸಲಿದೆ’ ಎಂದು ಇಲಾಖೆಯ ಮೇಲಧಿಕಾರಿಗಳು ತಿಳಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಈ ಹಣ ಬಂದಿಲ್ಲ. ಮೊಟ್ಟೆ ಕೊಡಲಾಗುತ್ತಿದೆಯೇ? ಎಂದು ಪರಿಶೀಲಿಸಲು ಅಧಿಕಾರಿಗಳು ನಿಯಮಿತವಾಗಿ ಶಾಲೆಗೆ ಬರುತ್ತಾರೆ; ಹೆಚ್ಚುವರಿ ಹಾಕಿದ ಹಣ ಕೊಡುವ ಬಗ್ಗೆ ಅವರಲ್ಲಿ ಕೇಳಿದರೆ ಮೌನ ವಹಿಸುತ್ತಾರೆ’ ಎಂಬುದು ಶಿಕ್ಷಕರ ಅಳಲು.

ಚಿಕ್ಕಿ ನೆರವಾಗುತ್ತಿತ್ತು!
ಕಳೆದ ವರ್ಷ ಮಕ್ಕಳಿಗೆ “ಚಿಕ್ಕಿ’ ನೀಡಲಾಗುತ್ತಿತ್ತು. ಆಗ ಇದರಲ್ಲಿ ಸುಮಾರು ಒಂದು ರೂ.ವನ್ನು ಕೆಲವರು ಉಳಿತಾಯ ಮಾಡಿ ಮೊಟ್ಟೆ ನಿರ್ವಹಣೆ ಮಾಡುತ್ತಿದ್ದರು. ಆದರೆ ಚಿಕ್ಕಿಯನ್ನು ಈಗ ಸಂಪೂರ್ಣ ನಿಲ್ಲಿಸಿದ ಕಾರಣದಿಂದ ಈ ವರ್ಷಮೊಟ್ಟೆಯ ಹಣ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂಬುದು ಕೆಲವರ ವಾದ.
ಮೊಟ್ಟೆ ಒಡೆದರೆ…
1ರಿಂದ 10ನೇ ತರಗತಿಯ ಪ್ರತೀ ವಿದ್ಯಾರ್ಥಿಗೆ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುತ್ತದೆ. 2 ದಿನ ಸರಕಾರದ ಅನುದಾನ ಬಂದರೆ, ಉಳಿದ 4 ದಿನ ಅಜೀಂ ಫ್ರೇಮ್‌ಜೀ ವತಿಯಿಂದ ನೀಡಲಾಗುತ್ತದೆ. ಎರಡೂ ಕಡೆಯ ಅನುದಾನದಲ್ಲಿ 1 ಮೊಟ್ಟೆಗೆ 6 ರೂ. ಮಾತ್ರ ಸಿಗುತ್ತಿದೆ. ಮತ್ತೂಂದೆಡೆ ನೂರಾರು ಮೊಟ್ಟೆ ಶಾಲೆಗೆ ತರುವಾಗ ಅದರಲ್ಲಿ ಹಲವು ಮೊಟ್ಟೆಗಳು ಒಡೆದು ಹಾಳಾಗಿರುತ್ತದೆ. ಅದು ಕೂಡ ಮುಖ್ಯ ಶಿಕ್ಷಕರಿಗೆ ಮತ್ತೊಂದು ನಷ್ಟ.
ಸರಕಾರದ ಗಮನ ಸೆಳೆಯಲಾಗಿದೆ
ಎಲ್ಲ ವಿದ್ಯಾರ್ಥಿಗಳು ಮೊಟ್ಟೆ ತಿನ್ನುವುದಿಲ್ಲ. ಶೇ. 65 ಮಕ್ಕಳು ಮೊಟ್ಟೆ ತಿನ್ನುವವರಿದ್ದರೆ, ಶೇ.35ರಷ್ಟು ಮಕ್ಕಳು ಬಾಳೆಹಣ್ಣು ತಿನ್ನುತ್ತಾರೆ. ಆ ಎರಡರದ್ದೂ ಎಲ್ಲ ಸೇರಿಸಿದಾಗ ಘಟಕ ವೆಚ್ಚ 6 ರೂ. ಮೀರಬಾರದು ಎಂಬುದು ಸರಕಾರದ ಲೆಕ್ಕಾಚಾರ. ಆದರೆ ಮೊಟ್ಟೆ ದರ ಏರಿಕೆ ಆಗಿ ಸಮಸ್ಯೆ ಆಗುತ್ತಿರುವ ಬಗ್ಗೆ ಶಾಲೆಗಳಿಂದ ದೂರು ಇದೆ. ಈ ಬಗ್ಗೆ ಸರಕಾರದ ಗಮನಸೆಳೆಯಲಾಗಿದೆ.
-ಜ್ಞಾನೇಶ್,
ಸಹಾಯಕ ನಿರ್ದೇಶಕರು
ಅಕ್ಷರದಾಸೋಹ, ಜಿ.ಪಂ
