ಮಂಡ್ಯದಲ್ಲಿ ಮೊಟ್ಟೆ ವಿತರಣೆ ವಿವಾದ: ಸರ್ಕಾರಿ ಶಾಲೆ ತೊರೆದ 70ಕ್ಕೂ ಹೆಚ್ಚು ಮಕ್ಕಳು

ಮಂಡ್ಯ:: ಮೊಟ್ಟೆ ಕೊಡುತ್ತಿರುವುದನ್ನು ವಿರೋಧಿಸಿ 70 ವಿದ್ಯಾರ್ಥಿಗಳು ಸರ್ಕಾರಿ ಶಾಲೆ (government School) ತೊರೆದ ಘಟನೆ ಮಂಡ್ಯ (Mandya) ತಾಲೂಕಿನ ಆಲಕೆರೆ ಗ್ರಾಮದಲ್ಲಿ ನಡೆದಿದೆ. ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವ ವಿಚಾರದಲ್ಲಿ ಪರ ವಿರೋಧ ಚರ್ಚೆ ಸೃಷ್ಟಿಯಾಗಿತ್ತು.

ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಶಾಲೆ ಬಿಡಿಸುವುದಾಗಿ ಹೆಚ್ಚಿನ ಪೋಷಕರು ಈ ಹಿಂದೆಯೇ ತಿಳಿಸಿದ್ದರು. ಕೆಲವೇ ಸಂಖ್ಯೆಯ ಪೋಷಕರು ಮೊಟ್ಟೆ ನೀಡುವಂತೆ ಆಗ್ರಹಿಸಿದ್ದರು. ಹೀಗಾಗಿ ಇಕ್ಕಟ್ಟಿಗೆ ಸಿಲುಕಿದ್ದ ಅಧಿಕಾರಿಗಳು ನಿಯಮದಂತೆ ಮೊಟ್ಟೆ ವಿತರಣೆ ಆರಂಭಿಸಿದ್ದರು. ಇದರ ಬೆನ್ನಲ್ಲೇ ಮಕ್ಕಳು ಸಾಮೂಹಿಕವಾಗಿ ಶಾಲೆ ತೊರದಿದ್ದಾರೆ.
ಶಾಲೆಯಲ್ಲಿ ಒಟ್ಟಾರೆಯಾಗಿ 124 ಮಕ್ಕಳು ಓದುತ್ತಿದ್ದು ಆ ಪೈಕಿ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೀಗ ಶಾಲೆ ತೊರೆದಿದ್ದಾರೆ. ನಮ್ಮ ಧಾರ್ಮಿಕ ಭಾವನೆಗೆ ಬೆಲೆ ಸಿಗದ ಜಾಗದಲ್ಲಿ ಓದುವುದು ಬೇಡ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.
ಮಂಡ್ಯ ಆಲಕೆರೆ ಶಾಲೆ ಮೊಟ್ಟೆ ವಿತರಣೆ ವಿವಾದದ ಹಿನ್ನೆಲೆ
ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡುವ ವಿಚಾರವಾಗಿ ಕಳೆದ ತಿಂಗಳು ಪರ-ವಿರೋಧ ವ್ಯಕ್ತವಾಗಿತ್ತು. ಶಾಲೆ ಬಳಿ ವೀರಭದ್ರೇಶ್ವರ ಸ್ವಾಮಿ ದೇಗುಲ ಇರುವುದರಿಂದ ಮೊಟ್ಟೆ ವಿತರಣೆ ಮಾಡಬಾರದು. ದೇಗುಲದ ಸುತ್ತಮುತ್ತ ಮಾಂಸಾಹಾರ, ಮೊಟ್ಟೆಯನ್ನು ಸ್ಥಳೀಯರ ಇಚ್ಛೆಯಂತೆ ನಿಷೇಧಿಸಲಾಗಿದೆ ಎಂದು ಕೆಲವು ಮಂದಿ ಪೋಷಕರು ಆಗ್ರಹಿಸಿದ್ದರು. ಈ ಕಾರಣಕ್ಕೆ ಶಾಲೆಯಲ್ಲಿ ಕೂಡ ಮೊಟ್ಟೆ ವಿತರಿಸದಿರಲು ಎಸ್ಡಿಎಂಸಿ ನಿರ್ಧರಿಸಿತ್ತು. ಮೊಟ್ಟೆ ಬದಲಿಗೆ ಬಾಳೆಹಣ್ಣು ಅಥವಾ ಮಿಠಾಯಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಮತ್ತೆ ಮೊಟ್ಟೆ ವಿತರಣೆ ಮಾಡಲು ಮುಂದಾಗಿದ್ದು ಹೆಚ್ಚಿನ ಪೋಷಕರ ವಿರೋಧಕ್ಕೆ ಗುರಿಯಾಗಿತ್ತು.
ಮೊಟ್ಟೆ ವಿತರಣೆ ಬಗ್ಗೆ ಪೋಷಕರು ಹೇಳಿದ್ದೇನು?
ಮೊಟ್ಟೆ ತಿನ್ನುವ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ. ಆದರೆ ಈ ಪ್ರದೇಶದಲ್ಲಿ ದೇಗುಲ ಇರುವುದರಿಂದ ಬೇಡ. ಮೊಟ್ಟೆ ಬೇಕು ಎನ್ನುವ ಮಕ್ಕಳ ಮನೆಗೇ ಅದನ್ನು ತಲುಪಿಸಿಬಿಡಿ. ದೇಗುಲದ ಆವರಣವಾಗಿರುವುದರಿಂದ ಶಾಲೆಯಲ್ಲಿ ಮೊಟ್ಟೆ ಬೇಯಿಸುವುದು ಬೇಡ. ನಮ್ಮ ಧಾರ್ಮಿಕ ಭಾವನೆಗೆ ಬೆಲೆ ನೀಡಬೇಕು. ಇಲ್ಲವಾದಲ್ಲಿ ಟಿಸಿ ಕೊಟ್ಟುಬಿಡಿ ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತೇವೆ ಎಂದು ಕಳೆದ ತಿಂಗಳು ಹೆಚ್ಚಿನ ಮಕ್ಕಳ ಪೋಷಕರು ಹೇಳಿದ್ದರು.
ಆದರೆ, ಮತ್ತೊಂದು ವರ್ಗದ ಪೋಷಕರು ಮೊಟ್ಟೆ ನೀಡಲೇಬೇಕು ಎಂದು ಹಠ ಹಿಡಿದಿದ್ದರಿಂದ, ಅಧಿಕಾರಿಗಳು ಹಾಗೂ ಶಿಕ್ಷಕರು ಇಕ್ಕಟ್ಟಿಗೆ ಸಿಲುಕಿದ್ದರು. ಅಂತಿಮವಾಗಿ ಮೊಟ್ಟೆ ವಿತರಣೆ ಆರಂಭಿಸಲಾಗಿತ್ತು. ಅದರ ಬೆನ್ನಲ್ಲೇ ಇದೀಗ ವಿದ್ಯಾರ್ಥಿಗಳು ಸಾಮೂಹಿಕವಾಗಿ ಶಾಲೆ ತೊರೆದಿದ್ದಾರೆ
