ನಾಯಿಗಳಿಗೆ ಎಗ್ ಬಿರಿಯಾನಿ?ಬಿಬಿಎಂಪಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತರಾಟೆ

ಬೆಂಗಳೂರು: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಚಿಕನ್ ಬಿರಿಯಾನಿ ಮತ್ತು ಎಗ್ ಬಿರಿಯಾನಿ ಸೇರಿದಂತೆ ಕ್ಯಾಲೋರಿಯುಕ್ತ ಆಹಾರ ನೀಡುವ ಬಿಬಿಎಂಪಿಯ ಯೋಜನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಯೋಜನೆಗೆ ಸಂಬಂಧಿಸಿದಂತೆ ‘ಟಿವಿ9 ಕನ್ನಡ ಡಿಜಿಟಲ್’ ಸಾಮಾಜಿಕ ಮಾಧ್ಯಮಗಳಲ್ಲಿ ಜನರ ಅಭಿಪ್ರಾಯ ಕೋರಿತ್ತು. ಇದಕ್ಕೆ ನೂರಾರು ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳು ಬಂದಿವೆ. ದುಡ್ಡು ಮಾಡುವುದಕ್ಕಾಗಿ ಬಿಬಿಎಂಪಿ ಮತ್ತು ಕಾಂಗ್ರೆಸ್ ಸರಕಾರ ಹಮ್ಮಿಕೊಂಡ ಹೊಸ ಯೋಜನೆ ಇದು ಎಂದು ಅನೇಕ ಬಳಕೆದಾರರು ಪ್ರತಿಕ್ರಿಯೆಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಮಂದಿ ಪ್ರಾಣಿ ಪ್ರಿಯರಿಂದ ಯೋಜನೆಗೆ ಬೆಂಬಲ ಕೊಡ ವ್ಯಕ್ತವಾಗಿದೆ. ಆದರೆ, ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ದುಡ್ಡು ಹೊಡೆಯುವ ಮತ್ತೊಂದು ಯೋಜನೆ ಇದಾಗಬಾರದು ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಏನಿದು ಬೀದಿ ನಾಯಿಗಳಿಗೆ ಆಹಾರ ನೀಡುವ ಯೋಜನೆ?
ಬಿಬಿಎಂಪಿ 8 ವಲಯಗಳಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಮೂಲಕ ಅವುಗಳ ಆಕ್ರಮಣಕಾರಿ ಪ್ರವೃತ್ತಿಯನ್ನು ಕಡಿಮೆ ಮಾಡುವುದಕ್ಕಾಗಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ. ಇದಕ್ಕಾಗಿ 2.80 ಕೋಟಿ ರೂಪಾಯಿ ಟೆಂಡರ್ ಕೂಡ ಕರೆಯಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ
ಇಂತಹ ಯೋಜನೆಗಳು ಕಾಂಗ್ರೆಸ್ನವರಿಗೆ ಮಾತ್ರ ಬರುವುದು ಎಂದು ಕಾಣುತ್ತದೆ, ಬೆಂಗಳೂರು ಬಿಟ್ಟು ಬೇರೆ ಊರಿನ ನಾಯಿಗಳು ಏನು ಪಾಪ ಮಾಡಿದ್ದೆವೋ ಎಂಬಿತ್ಯಾದಿ ವ್ಯಂಗ್ಯದ ಪ್ರತಿಕ್ರಿಯೆಗಳು ಅನೇಕ ಬಂದಿವೆ.
‘‘ಪ್ರತಿ ಬಿಬಿಎಂಪಿ ವಾರ್ಡ್ಗಳಿಗೂ ಒಂದು ನಾಯಿಗಳ ಪಾರ್ಕ್ ಸ್ಥಾಪಿಸಿ. ಫೈವ್ ಸ್ಟಾರ್ ಹೋಟೆಲ್ಗಳಿಂದ ಹಿಡಿದು ತಳ್ಳುಗಾಡಿಯವರೆಗೂ ಬೆಂಗಳೂರಿನ ಎಲ್ಲಾ ಹೋಟೆಲ್ಗಳು ಮಿಕ್ಕಿದ ಊಟಗಳನ್ನು ಅಲ್ಲಿಗೆ ತಂದು ಕೊಡಿ ಎಂದು ಹೇಳಿದರೆ, ಅದೇ ಬೇಕಾದಷ್ಟು ಆಗುತ್ತದೆ. ಈ ಯೋಜನೆ ಸರಿ ಇಲ್ಲ. ಸುಮ್ಮನೆ ದುಡ್ಡು ಮಾಡುವ ಬಿಬಿಎಂಪಿ ರವರಿಗೆ ಮತ್ತೊಂದು ಅವಕಾಶ ನೀಡಿದಂತಾಗಿದೆ’’ ಎಂದು ಕಿಶೋರ್ ಭರಣಿ ಎಂಬವರು ಸಲಹೆ ನೀಡಿದ್ದಾರೆ.
‘‘ಬೀದಿ ನಾಯಿಗಳಿಗೆ ಮಾಂಸಾಹಾರ ಕೊಡುವುದು ತಪ್ಪು. ರುಚಿ ಕಂಡ ನಾಯಿಗಳು ಏನೂ ಸಿಗದೇ ಇದ್ದಾಗ ಮನುಷ್ಯರನ್ನು, ಅದರಲ್ಲೂ ಮಕ್ಕಳನ್ನು ಅಟ್ಯಾಕ್ ಮಾಡುತ್ತವೆ. ಈ ಕಾಂಗ್ರೆಸ್ ಸರ್ಕಾರ ಎಲ್ಲದರಲ್ಲೂ ಲಂಚ ಹೊಡೆಯುವುದರಲ್ಲಿ ಮುಂದಿದೆ. ಮೊದಲು ನಾಲ್ಕು ದಿನ ಕೊಟ್ಟು ನಂತರ ನಿಲ್ಲಿಸಿದರೆ ಮ್ಸನುಷ್ಯರನ್ನು ಅಟ್ಯಾಕ್ ಮಾಡುತ್ತವೆ. ಮೊದಲು ನಿಲ್ಲಿಸಿ ನಿಮ್ಮ ಕಳ್ಳಾಟ’’ ಎಂದು ಚೂಡಾಮಣಿ ಕುರುದಿ ಗಿರಿಯಾಚಾರ ಎಂಬವರು ಫೇಸ್ಬುಕ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಬಿಬಿಎಂಪಿಗೆ, ಸಂತಾನಹರಣ ಶಸ್ತ್ರ ಚಿಕಿತ್ಸೆಯಿಂದ ಬೀದಿ ನಾಯಿ ಸಂತತಿ ಕಡಿಮೆ ಮಾಡಿ ಅಂದರೆ ಚಿಕನ್ ಬಿರಿಯಾನಿ, ಎಗ್ ರೈಸ್ ಕೊಟ್ಟು ಸಂತತಿ ಹೆಚ್ಚು ಮಾಡಲು ಹೊರಡಿದೆ. ಕೂಡಿ ಹಾಕಿದ ಭ್ರಷ್ಟಾಚಾರದ ಹಣದಿಂದ ಮಾಂಸದ ಊಟ ಹಾಕುತ್ತಾರಾ? ದುಡ್ಡೇನು ಇವರ ಅಜ್ಜನದ. ಮಾಂಸ ತಿಂದ ನಾಯಿಗಳು ಮಾಂಸ ಇಲ್ಲದಾಗ ವ್ಯಗ್ರವಾಗಿ ವರ್ತಿಸಿ ಸಿಕ್ಕವರನ್ನು ಕಚ್ಚುತ್ತೆ’’ ಎಂದು ಪಾರ್ವತಿ ಶ್ರೀರಾಂ ಎಂಬವರು ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
‘ಮನುಷ್ಯರಂತೆ ಬದುಕುವ ಹಕ್ಕು ಪ್ರತಿ ಜೀವಿಗೂ ಇದೆ. ನೀವು ಬದುಕಿ, ಪ್ರಾಣಿಗಳಿಗೂ ಬದುಕಲು ಬಿಡಿ. ನಿಮ್ಮ ಕೈಲಾದರೆ ನೀವು ಮಾಡುವ ಊಟದಲ್ಲಿ ಪ್ರಾಣಿಗಳಿಗೂ ಸ್ವಲ್ಪ ಹಾಕಿ. ಪ್ರಾಣಿಗಳು ನಿಮ್ಮನ್ನು ಆಸ್ತಿ ಕೇಳಲು ಬರುವುದಿಲ್ಲ. ಇತ್ತೀಚಿನ ಜನಗಳಲ್ಲಿ ಮನುಷ್ಯತ್ವವೇ ಇಲ್ಲದಂತಾಗಿದೆ’ ಎಂದು ಉಮೇಶ್ ಉಮೇಶ್ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
