ಅನಿಲ್ ಅಂಬಾನಿಗೆ ಇಡಿ ಶಾಕ್: ₹3,084 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು; ಮುಂಬೈ ಪಾಲಿ ಹಿಲ್ ನಿವಾಸ ಜಪ್ತಿ

ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ (Anil Ambani) ಅವರಿಗೆ ಬ್ಯಾಂಕ್ ಸಾಲ ವಂಚನೆ ಪ್ರಕರಣ ಉರುಳಾಗಿ ಪರಿಣಮಿಸುತ್ತಿದೆ. 20,000 ಕೋಟಿ ರೂ ಮೊತ್ತದ ಈ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿ ಅವರ ಕೆಲ ಆಸ್ತಿಗಳನ್ನು ಮುಟ್ಟುಗೋಲು (ED attachment) ಹಾಕಿದೆ. ವರದಿ ಪ್ರಕಾರ, ಮುಂಬೈನ ಪಾಲಿ ಹಿಲ್ನಲ್ಲಿರುವ (Pali Hill) ಅನಿಲ್ ಅಂಬಾನಿ ಅವರ ನಿವಾಸ ಸೇರಿದಂತೆ 3,084 ಕೋಟಿ ರೂ ಮೌಲ್ಯದ ಆಸ್ತಿಗಳನ್ನು ಇಡಿ ಜಫ್ತಿ ಮಾಡಿದೆ.

ಮುಂಬೈ, ದೆಹಲಿ, ನೋಯ್ಡಾ, ಗೋವಾ, ಪುಣೆ, ಹೈದರಾಬಾದ್, ಚೆನ್ನೈ ಮೊದಲಾದ ನಗರಗಳಲ್ಲಿರುವ, ರಿಲಾಯನ್ಸ್ ಕಮ್ಯೂನಿಕೇಶನ್ಸ್ ಮತ್ತು ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಗಳಿಗೆ ಸೇರಿದ್ದಾಗ ಫ್ಲ್ಯಾಟ್, ನಿವೇಶನ, ಕಚೇರಿ ಸ್ಥಳ ಇತ್ಯಾದಿಗಳು ಇಡಿ ಅಟ್ಯಾಚ್ಮೆಂಟ್ಗಳ ಪೈಕಿ ಇವೆ. ಸೆಂಟ್ರಲ್ ಡೆಲ್ಲಿಯಲ್ಲಿರುವ ಹೋಟೆಲ್ ರಂಜಜಿತ್ನಲ್ಲಿರುವ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಸೆಂಟರ್ ಆಫೀಸ್ ಅನ್ನೂ ಇಡಿ ಮುಟ್ಟುಗೋಲು ಹಾಕಿರುವುದು ತಿಳಿದುಬಂದಿದೆ.
ಅನಿಲ್ ಅಂಬಾನಿ ವಿರುದ್ಧದ ಪ್ರಕರಣವೇನು?
ಬ್ಯಾಂಕ್ಗಳಿಂದ ಪಡೆದ ಕಾರ್ಪೊರೇಟ್ ಸಾಲದ ಹಣವನ್ನು ವಿವಿಧ ಶೆಲ್ ಕಂಪನಿಗಳಿಗೆ ಹಾಗೂ ತನ್ನ ಅಂಗ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಿ, ಲಪಟಾಯಿಸಲು ಯತ್ನಿಸಲಾಗಿದೆ ಎಂಬುದು ಅನಿಲ್ ಅಂಬಾನಿ ವಿರುದ್ಧ ಕೇಳಿಬಂದಿರುವ ಪ್ರಮುಖ ಆರೋಪವಾಗಿದೆ.
2017ರಿಂದ 2019ರ ಅವಧಿಯಲ್ಲಿ ಅನಿಲ್ ಅಂಬಾನಿ ಅವರಿಗೆ ಸೇರಿದ ರಿಲಾಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (ಆರ್ಎಚ್ಎಫ್ಎಲ್) ಮತ್ತು ರಿಲಾಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (ಆರ್ಸಿಎಫ್ಎಲ್) ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ಫಂಡ್ಗಳನ್ನು ಒದಗಿಸಿತ್ತು. ಆರ್ಎಚ್ಎಫ್ಎಲ್ನ ಯೋಜನೆಗಳಲ್ಲಿ 2,965 ಕೋಟಿ ರೂ, ಆರ್ಸಿಎಫ್ಎಲ್ ಯೋಜನೆಗಳಲ್ಲಿ 2,045 ಕೋಟಿ ರೂ ಹೂಡಿಕೆ ಮಾಡಿತ್ತು ಯೆಸ್ ಬ್ಯಾಂಕ್
ಆದರೆ, 2019ರ ಡಿಸೆಂಬರ್ನಲ್ಲಿ ಯೆಸ್ ಬ್ಯಾಂಕ್ನ ಆ ಹೂಡಿಕೆಗಳು ಅನುತ್ಪಾದಕವೆನಿಸಿದ್ದವು. ಅಂದರೆ, ಆ ಹಣ ಮರಳಿ ಬರುವುದು ಕಷ್ಟವಾಗಿತ್ತು. ಆರ್ಎಚ್ಎಫ್ಎಲ್ನಿಂದ 1,353.50 ಕೋಟಿ ರೂ, ಆರ್ಸಿಎಫ್ಎಲ್ನಿಂದ 1,984 ಕೋಟಿ ರೂ ಹಣ ಬಾಕಿ ಉಳಿದಿತ್ತು. ರಿಲಾಯನ್ಸ್ ಕಂಪನಿಗಳು ಈ ಹಣವನ್ನು ಅಕ್ರಮವಾಗಿ ಬೇರೆಡೆ ಸಾಗಿಸಿದ್ದವು ಎನ್ನಲಾಗಿದೆ. ರಿಲಾಯನ್ಸ್ ಗ್ರೂಪ್ಗೆ ಸೇರಿದ ವಿವಿಧ ಕಂಪನಿಗಳು ಈ ರೀತಿ ಸಾಲಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದು ಒಟ್ಟು ಮೌಲ್ಯ 20,000 ಕೋಟಿ ರೂ ಎನ್ನಲಾಗಿದೆ.