ಹಾಸನ ದೇವಸ್ಥಾನದ ದರ್ಶನಕ್ಕೆ ಸುಲಭ ಮಾರ್ಗ: ವಾಟ್ಸಾಪ್ ಚಾಟ್ಬಾಟ್ ಸೇವೆ ಆರಂಭ

ಹಾಸನ: ಹಾಸನದ ಅಧಿದೇವತೆ ಹಾಸನಾಂಬೆಯ ವಾರ್ಷಿಕ ದರ್ಶನೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 9ಕ್ಕೆ ಹಾಸನಾಂಬೆ ದೇಗುಲದ (Hasanamba Temple) ಗರ್ಭಗುಡಿಯ ಬಾಗಿಲು ತೆರೆಯಲಿದ್ದು, 23ರ ವರೆಗೂ ದೇವಿ ದರ್ಶನಕ್ಕೆ ಅವಕಾಶ ಸಿಗಲಿದೆ. ಈ ವರ್ಷ ದಾಖಲೆಯ 15 ದಿನ ದೇಗುಲದ ಬಾಗಿಲು ತೆರದಿರಲಿದೆ. 13 ದಿನ ಭಕ್ತರ ದರ್ಶನಕ್ಕೆ ಅವಕಾಶ ಸಿಗಲಿದ್ದು, ಭಕ್ತರಿಗೆ ಅನುಕೂಲವಾಗುವಂತೆ ಟಿಕೆಟ್ ಬುಕಿಂಗ್ ಇತ್ಯಾದಿ ಸೇವೆಗಳನ್ನು ವಾಟ್ಸಪ್ ಮೂಲಕವೇ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಹೈಟೆಕ್ ಸ್ಪರ್ಶ
ಹಾಸನಾಂಬೆ ದರ್ಶನೋತ್ಸವಕ್ಕೆ ಕೌಂಟ್ ಡೌನ್ ಶುರುವಾಗಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ನಾಡಿನ ಶಕ್ತಿ ದೇವತೆ ಹಾಸನಾಂಬೆಯ 2025ರ ದರ್ಶನೋತ್ಸವಕ್ಕೆ ಭರ್ಜರಿ ತಯಾರಿ ಶುರುವಾಗಿದೆ. ದೇವಿಯ ಭಕ್ತರಿಗಾಗಿ ಆಡಳಿತ ಮಂಡಳಿ ವಾಟ್ಸಾಪ್ ಚಾಟ್ ಮೂಲಕ ಆನ್ಲೈನ್ ನೆರವು ನೀಡುವ ಯೋಜನೆ ಹಮ್ಮಿಕೊಂಡಿದೆ. ಟಿಕೆಟ್ ಬುಕಿಂಗ್, ದರ್ಶನ ಸಮಯ, ಸರತಿ ಸಾಲುಗಳ ಸ್ಥಿತಿಗತಿ, ಇ-ಹುಂಡಿ ಸೇರಿ ಹಲವು ಮಾಹಿತಿ ಆನ್ಲೈನ್ ಮೂಲಕ ಲಭ್ಯವಾಗಲಿದೆ. 6366105589 ನಂಬರ್ಗೆ ಮೆಸೇಜ್ ಮಾಡಿದರೆ ಯಾವ್ಯಾವ ದಿನ, ಎಷ್ಟು ಗಂಟೆಗೆ ದರ್ಶನ ಎನ್ನುವ ಮಾಹಿತಿಯೂ ಆನ್ಲೈನ್ನಲ್ಲಿ ತಿಳಿಯಲಿದೆ.
ಈ ಬಾರಿ ಬರೋಬ್ಬರಿ 13 ದಿನ ದೇವಿಯ ದರ್ಶನ ಭಾಗ್ಯ
ಹಾಸನಾಂಬೆ ದರ್ಶನಕ್ಕೆ ಆಗಮಿಸುವ ಲಕ್ಷ ಲಕ್ಷ ಭಕ್ತರಿಗೆ ಯಾವುದೇ ಅನಾನುಕೂಲ ಆಗದಿರಲಿ ಎನ್ನುವ ಕಾರಣಕ್ಕೆ ಟೆಂಟ್ಗಳ ವ್ಯವಸ್ಥೆ, ಗಣ್ಯರಿಗಾಗಿ ವಿಶೇಷ ಸಾಲು, ವಿಶೇಷ ದರ್ಶನಕ್ಕೆ ಹಣ ಕೊಟ್ಟು ಬರುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲು, ಹೀಗೆ ಯಾವ ಭಕ್ತರಿಗೂ ಸಮಸ್ಯೆ ಆಗದಂತೆ ದರ್ಶನ ಮಾಡಲು ಬೇಕಾದ ವ್ಯವಸ್ಥೆಗಳ ನಿರ್ಮಾಣ ಕಾರ್ಯ ಶುರುವಾಗಿದೆ.
ಕಳೆದ ವರ್ಷ ಹಾಸನಾಂಬೆ ದರ್ಶನಕ್ಕೆ ಬರೊಬ್ಬರಿ 20 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದ ಹಿನ್ನೆಲೆಯಲ್ಲಿಈ ವರ್ಷ ಮತ್ತಷ್ಟು ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದ್ದು, ಅದನ್ನು ಗಮನದಲ್ಲಿಟ್ಟುಕೊಂಡೇ ಹಾಸನಾಂಬೆ ಮಹೋತ್ಸವಕ್ಕೆ ತಯಾರಿ ಶುರುವಾಗಿದೆ. ಈ ವರ್ಷ ಅಕ್ಟೋಬರ್ 9ರ ಗುರುವಾದ ಬಾಗಿಲು ತೆರೆದರೆ ಅಕ್ಟೋಬರ್ 23ಕ್ಕೆ ದೇಗುಲದ ಗರ್ಭಗುಡಿಯ ಬಾಗಿಲು ಮುಚ್ಚಲಿದೆ. ಮೊದಲ ಹಾಗೂ ಕೊನೆಯ ದಿನ ಹೊರತು ಪಡಿಸಿ ಇನ್ನುಳಿದ 13 ದಿನಗಳು ದಿನದ 24 ಗಂಟೆಗಳು ಕೂಡ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ಸಿಗಲಿದೆ. ಈಗಾಗಲೆ ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ದೇವಾಲಯದ ಸುತ್ತಲು ಬ್ಯಾರಿಕೇಡ್ ಅಳವಡಿಕೆ , ಟೆಂಟ್ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಕೆಯಂತ ಕಾರ್ಯಗಳನ್ನು ಆರಂಭಿಸಿಲಾಗಿದೆ.