ಮಹಾರಾಷ್ಟ್ರದಲ್ಲಿ ನಡುಗಿದ ಭೂಮಿ: ಹಿಂಗೋಲಿಯಲ್ಲಿ 4.7 ತೀವ್ರತೆಯ ಭೂಕಂಪನ

ಮುಂಬೈ: ಶನಿವಾರ ಬೆಳಗ್ಗೆ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಹಿಂಗೋಲಿ ಜಿಲ್ಲೆಯ ಕೆಲವು ಭಾಗಗಳಲ್ಲಿ 4.7 ತೀವ್ರತೆಯ ಭೂಕಂಪನ ಸಂಭವಿಸಿದೆ. ನೆರೆಯ ನಾಂದೇಡ್ ಮತ್ತು ಪರ್ಭಾನಿ ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದೆ. ಈ ಘಟನೆಯಲ್ಲಿ ತಕ್ಷಣಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಭೂಕಂಪನದಿಂದ ಪಾಂಗ್ರ ಶಿಂಧೆ ಗ್ರಾಮದ ಕೆಲವು ಮನೆಗಳು ಹಾಗೂ ಸಮುದಾಯ ಭವನಗಳಲ್ಲಿ ಬಿರುಕು ಕಾಣಿಸಿಕೊಂಡಿವೆ. ಎಂದು ಹಿಂಗೋಲಿ ಜಿಲ್ಲಾಧಿಕಾರಿ ರಾಹುಲ್ ಗುಪ್ತ ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 8.45ರ ವೇಳೆ ಭೂಕಂಪನ ಸಂಭವಿಸಿದೆ. ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದಲ್ಲಿ 4.7 ತೀವ್ರತೆಯ ಭೂಕಂಪನ ದಾಖಲಾಗಿದೆ ಎಂದು ನಾಂದೇಡ್ ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನ ಕೇಂದ್ರವು ಹಿಂಗೋಲಿ ಜಿಲ್ಲೆಯ ವಸ್ತತ್ ತಾಲೂಕಿನ ಶಿರ್ಲಿ ಗ್ರಾಮದ 10 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಹೇಳಿದ್ದಾರೆ.
ನೆರೆಯ ನಾಂದೇಡ್ ನಗರ ಹಾಗೂ ಗ್ರಾಮೀಣ ಪ್ರದೇಶಗಳು, ಅರ್ಧಾಪುರ್, ಹದ್ದಾಂವ್, ಹಿಮಾಯತ್ ನಗರ್ ಹಾಗೂ ಪರ್ಭಾನಿ ಜಿಲ್ಲೆಯ ಕೆಲ ಭಾಗಗಳಲ್ಲೂ ಭೂಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪಕ್ಕೀಡಾಗಿರುವ ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ. ಆದರೆ, ಕೆಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.
