ಅಪ್ರಾಪ್ತೆಯನ್ನು ಭೇಟಿಯಾಗಲು ಬಂದ ಡಚ್ ಪ್ರಜೆ ಪೊಲೀಸರ ವಶಕ್ಕೆ – ‘ಅಪಮಾನವಾಗಿದೆ’ ಎಂದ ವಿದೇಶಿ ಯುವಕ!

ಕೋಲ್ಕತ್ತಾ: ಆನ್ಲೈನ್‌ನಲ್ಲಿ ಪರಿಚಯವಾದ ಭಾರತದ ಅಪ್ರಾಪ್ತೆಯನ್ನು ಭೇಟಿಯಾಗಲು ಬಂದ ವಿದೇಶಿ ಪ್ರಜೆಯೊಬ್ಬ ಅನುಮಾನಾಸ್ಪದ ವರ್ತನೆಯಿಂದ ಪೊಲೀಸರ ಅತಿಥಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಡಚ್ ಪ್ರಜೆ (ನೆದರ್ಲ್ಯಾಂಡ್ಸ್) ಆಗಿರುವ ಹೆನ್ರಿಕ್ಸ್ ಎಂಬಾತನಿಗೆ ಕೆಲ ಸಮಯದ ಹಿಂದೆ ಪಶ್ಚಿಮ ಬಂಗಾಳದ ಅಪ್ರಾಪ್ತೆಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದಾಳೆ.
ದಿನ ಕಳೆದಂತೆ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿದೆ. ಈ ಕಾರಣದಿಂದ ಹೆನ್ರಿಕ್ಸ್ ತನ್ನ ಗೆಳತಿಯನ್ನು ಭೇಟಿಯಾಗಲು ಭಾರತಕ್ಕೆ ಬರಲು ನಿರ್ಧರಿಸಿದ್ದಾನೆ.
ಇತ್ತೀಚೆಗೆ ಹೆನ್ರಿಕ್ಸ್ ನೆದರ್ಲ್ಯಾಂಡ್ಸ್‌ನ ಆಮ್ಸ್ಟರ್‌ಡ್ಯಾಮ್‌ನಿಂದ ಬಂಗಾಳದ ನಾಡಿಯಾಗೆ ಬಂದಿದ್ದಾರೆ. ವಿಮಾನ ನಿಲ್ದಾಣದಿಂದ ನಾಡಿಯಾ ಜಿಲ್ಲೆಯ ಮಾಯಾಪುರಕ್ಕೆ ಬಂದಿದ್ದಾರೆ.
ಗೆಳತಿಯ ಊರಿಗೆ ಬಂದ ಹೆನ್ರಿಕ್ಸ್ ಸರಿಯಾದ ವಿಳಾಸ ಸಿಗದ ಕಾರಣ, ಅತ್ತಿತ್ತ ಓಡಾಡಿದ್ದಾನೆ. ಗೆಳತಿ ಹೇಳಿದ್ದ ತೆಹಟ್ಟಾ ಪ್ರದೇಶದಲ್ಲಿ ಸುಮಾರು ಐದರಿಂದ ಆರು ಗಂಟೆಗಳ ಕಾಲ ಸುತ್ತಾಡಿದ್ದಾನೆ. ಬಾಲಕಿಯ ಶಾಲೆಯ ಬಳಿ ನಿಂತಿದ್ದಾಗ ಅನುಮಾನದ ದೃಷ್ಟಿಯಲ್ಲಿ ಸ್ಥಳೀಯರು ವಿದೇಶಿ ಪ್ರಜೆಯನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳೀಯರ ಮಾಹಿತಿಯಂತೆ, ಸ್ಥಳಕ್ಕೆ ಧಾವಿಸಿ ಹೆನ್ರಿಕ್ಸ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ.
ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಹೆನ್ರಿಕ್ಸ್ ತಾನು ತನ್ನ ಫ್ರೆಂಡ್‌ನನ್ನು ಭೇಟಿಯಾಗಲು ಬಂದಿರುವುದಾಗಿ ಹೇಳಿದ್ದಾರೆ. “ಇಲ್ಲಿ ಜನ ನನಗೆ ಅವಮಾನ ಮತ್ತು ಅಗೌರವ ತೋರಿಸಿದ್ದಾರೆ. ಇಲ್ಲಿನ ಜನರಿಗೆ ಯಾವುದೇ ಕರುಣೆಯಿಲ್ಲ” ಎಂದು ಹೆನ್ರಿಕ್ಸ್ ಹೇಳಿರುವುದಾಗಿ ʼಇಂಡಿಯಾ ಟುಡೇʼ ವರದಿ ಮಾಡಿದೆ.
ಈ ವಿಚಾರ ಬಾಲಕಿಯ ತಂದೆಗೆ ಗೊತ್ತಾಗಿದ್ದು, ಪೊಲೀಸರಿಗೆ ಕ್ರಮಕೈಗೊಳ್ಳುವಂತೆ ಬಾಲಕಿಯ ತಂದೆ ಕೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ವಿಚಾರಣೆ ವೇಳೆ ಹೆನ್ರಿಕ್ಸ್ ವೀಸಾ , ಪಾಸ್‌ಪೋರ್ಟ್ ಸೇರಿದಂತೆ ತಮ್ಮ ಎಲ್ಲಾ ದಾಖಲೆಗಳು ಮತ್ತು ಗುರುತಿನ ದಾಖಲೆಗಳನ್ನು ತೋರಿಸಿದ್ದಾರೆ. ಬಾಲಕಿಯ ಸಾಮಾಜಿಕ ಮಾಧ್ಯಮ ಪ್ರೊಫೈಲ್ ನ್ನು ತೋರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
“ವಿಚಾರಣೆ ವೇಳೆ ಅನುಮಾನಾಸ್ಪದವಾಗಿ ಏನೂ ಕಂಡುಬರಲಿಲ್ಲ. ವಿದೇಶಿ ಪ್ರಜೆಯಾಗಿ, ನಾವು ಅವರಿಗೆ ಸಂಪೂರ್ಣ ಗೌರವವನ್ನು ತೋರಿಸಿದ್ದೇವೆ. ಆದರೆ ಬಾಲಕಿಯ ತಂದೆ ಅವನಿಗೆ ತನ್ನ ಮಗಳನ್ನು ಭೇಟಿಯಾಗಲು ಅವಕಾಶ ನೀಡಲು ಸಿದ್ಧರಿರಲಿಲ್ಲ, ಬಾಲಕಿ ಅಪ್ರಾಪ್ತೆ ವಯಸ್ಕಳಾಗಿದ್ದರಿಂದ ನಾವು ಅವರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ವಿಚಾರಣೆ ಮುಕ್ತಾಯಗೊಳಿಸಿದ ಬಳಿಕ ಅವರು ಹೋಗಲು ಅನುವು ಮಾಡಿಕೊಟ್ಟಿದ್ದೇವೆ” ಎಂದು ಪೊಲೀಸರು ಹೇಳಿದ್ದಾರೆ.
“ನಾನು ಯಾವುದೇ ಖ್ಯಾತಿಯನ್ನು ಗಳಿಸಲು ಇಲ್ಲಿಗೆ ಬಂದಿಲ್ಲ. ನಾನು ನನ್ನ ಸ್ನೇಹಿತೆಯನ್ನು ಭೇಟಿಯಾಗಲು ಬಯಸಿದ್ದೆ ಅಷ್ಟೇ. ಆದರೆ ಅದು ಸಾಧ್ಯವಾಗಿಲ್ಲ. ನಾನು ಶೀಘ್ರ ಭಾರತವನ್ನು ತೊರೆಯುತ್ತಿದ್ದೇನೆ ಮತ್ತು ಭವಿಷ್ಯದಲ್ಲಿ ಇಲ್ಲಿಗೆ ಹಿಂತಿರುಗುವುದಿಲ್ಲ” ಎಂದಿದ್ದಾರೆ.
