ದುಬೈ: ಸಂಕಷ್ಟದಲ್ಲಿರುವ ಪ್ರವಾಸಿ ಕನ್ನಡಿಗರಿಗೆ ಕನ್ನಡಿಗಾಸ್ ಹೆಲ್ಪ್ಲೈನ್ ಆಸರೆ; ಸಹಾಯಕ್ಕೆ ಸಜ್ಜಾದ ಅನಿವಾಸಿ ತಂಡ

ದುಬೈ: ಖ್ಯಾತ ಅನಿವಾಸಿ ಉದ್ಯಮಿ, ಅನಿವಾಸಿ ಕನ್ನಡಿಗರ ಪೋಷಕ ಡಾ.ರೊನಾಲ್ಡ್ ಕೊಲಾಸೋ ನೇತೃತ್ವದಲ್ಲಿ ಕನ್ನಡಿಗಾಸ್ ಹೆಲ್ಫ್ ಲೈನ್ ತಂಡವು, ಯುಎಇಯಲ್ಲಿ ಪ್ರಸಕ್ತ ಪರಿಸ್ಥಿತಿಯ ಕುರಿತು ಚರ್ಚಿಸಲು ಹಾಗೂ ಇಲ್ಲಿ ಸಿಲುಕಿರುವ ಪ್ರವಾಸಿ ಕನ್ನಡಿಗರ ಮಾಹಿತಿ ಸಂಗ್ರಹಿಸಲು ಮತ್ತು ಕರ್ನಾಟಕ ಸರಕಾರದೊಂದಿಗೆ ಹಂಚಿಕೊಳ್ಳಲು ಝೂಮ್ ಸಭೆ ಆಯೋಜಿಸಿತ್ತು.
ಡಾ. ರೊನಾಲ್ಡ್ ಕೊಲಾಸೋ ಮಾತನಾಡಿ, ಯುಎಇ ಅತ್ಯಂತ ಸುರಕ್ಷಿತ ದೇಶ, ಪರಿಸ್ಥಿತಿ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳುತ್ತದೆ. ಎಲ್ಲರೂ ಯುಎಇ ಸರ್ಕಾರದ ಮಾರ್ಗದರ್ಶನ ಪಾಲಿಸಿ ಸಹಕರಿಸಬೇಕು ಎಂದರು.

ಈಗ ಸಂಕಷ್ಟದಲ್ಲಿರುವ ಪ್ರವಾಸಿಗರ ತುರ್ತು ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾದ ವೆಚ್ಚವನ್ನು ಭರಿಸಲು ನಾನು ತಯಾರಿದ್ದೇನೆ, ಅದೇ ರೀತಿ ಕರ್ನಾಟಕ ಸರಕಾರ ತುರ್ತು ಪರಿಹಾರ ಸಹಾಯಧನ ಘೋಷಣೆ ಮಾಡಲು ಒತ್ತಾಯಿಸುತ್ತೇನೆ ಎಂದು ಡಾ.ಕೊಲಾಸೋ ಹೇಳಿದರು.
ಪ್ರಸಕ್ತ ದುಬೈನಲ್ಲಿ ಸಿಲುಕಿರುವ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ ಮಾತನಾಡಿ, ಪರಿಸ್ಥಿತಿ ಬೇಗನೇ ತಿಳಿಯಾಗಲಿದೆ, ಸಂಕಷ್ಟದಲ್ಲಿರುವ ಪ್ರವಾಸಿ ಕನ್ನಡಿಗರಿಗೆ ಸಹಾಯವಾಗಿ ಎರಡು ಕೋಟಿ ರೂ. ತುರ್ತು ಪರಿಹಾರ ಘೋಷಿಸುವಂತೆ ಸಚಿವ ಕೃಷ್ಣ ಬೈರೇಗೌಡರನ್ನು ಒತ್ತಾಯಿಸಿದ್ದೇವೆ, ಅವರು ಮುಖ್ಯಮಂತ್ರಿ ಜೊತೆ ಕೂಡಲೇ ಮಾತನಾಡಿ ಪರಿಹಾರ ಘೋಷಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಯುಎಇ ಸೇರಿದಂತೆ ಗಲ್ಫ್ ರಾಷ್ಟ್ರಗಳ ಎಲ್ಲಾ ದೂತಾವಾಸಗಳೊಂದಿಗೆ, ಅಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿ ಇದ್ದೇನೆ, ರಾಜ್ಯ ಸರಕಾರದೊಂದಿಗೂ ಮಾಹಿತಿ ಹಂಚಿಕೊಳ್ಳುತ್ತಿರುವೆ, ಕನ್ನಡಿಗಾಸ್ ಹೆಲ್ಸ್ ಲೈನ್ ತಂಡಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಹಾಗೂ ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಹೇಳಿದರು.
ಕರ್ನಾಟಕ ಎನ್ಆರ್ ಐ ಫೋರಂ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ, ಯುಎಇಯಲ್ಲಿರುವ ಎಲ್ಲ ಅನಿವಾಸಿ ಕನ್ನಡಿಗರು ಸುರಕ್ಷಿತವಾಗಿದ್ದು, ಇಲ್ಲಿನ ಸರಕಾರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಯಾವುದೇ ಆತಂಕಕ್ಕೆ ಒಳಗಾಗದೆ, ಅನಧಿಕೃತ ಅಥವಾ ಅಪಪ್ರಚಾರದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಬಾರದು ಎಂದು ಯುಎಇಯ ಅನಿವಾಸಿ ಕನ್ನಡಿಗರಿಗೆ ಎಂದು ಕಿವಿಮಾತು ಹೇಳಿದರು.
ಸಂಕಷ್ಟದಲ್ಲಿದ್ದ ಹಲವಾರು ಪ್ರವಾಸಿ ಕನ್ನಡಿಗರನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು, ತಾಯ್ತಾಡಿಗೆ ಮರಳಲಾಗದೆ ಸಿಲುಕಿರುವ ಕನ್ನಡಿಗರಿಗೆ ವೈದ್ಯಕೀಯ ಸೇವೆ ಅಗತ್ಯಬಿದ್ದಲ್ಲಿ ಕನ್ನಡಿಗಾಸ್ ಹೆಲ್ಫ್ ಲೈನ್ ವ್ಯವಸ್ಥೆ ಮಾಡಿಕೊಡಲಿದೆ ಎಂದು ಕನ್ನಡಿಗಾಸ್ ಹೆಲ್ಸ್ ಲೈನ್ ಸಂಯೋಜಕ, ಬಿಸಿಸಿಐ ಯುಎಇ ಅಧ್ಯಕ್ಷ ಹಿದಾಯತ್ ಅಡ್ಡರು ತಿಳಿಸಿದರು.
ಯುಎಇಯಲ್ಲಿ ಸಿಲುಕಿರುವ ಕನ್ನಡಿಗರು ಕನ್ನಡಿಗಾಸ್ ಹೆಲ್ಸ್ ಲೈನ್ ತಂಡವನ್ನು ಸಂಪರ್ಕಿಸಿ, ನೀವು ದುಬೈ ಶಾರ್ಜಾ, ಅಬುಧಾಬಿ, ಅಜ್ಞಾನ್ ಎಲ್ಲೇ ಇದ್ದರೂ ನಮ್ಮ ತಂಡ ನಿಮ್ಮನ್ನು ಸಂಪರ್ಕಿಸಿ, ಸಹಕರಿಸಲಿದೆ. ಈಗಾಗಲೇ ಈ ಕೆಲಸದಲ್ಲಿ ನಿರತರಾಗಿದ್ದೇವೆ ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ ತಿಳಿಸಿದರು.
ಸಭೆಯಲ್ಲಿ ಹೆಲ್ಸ್ ಲೈನ್ ತಂಡದ ದಯಾ ಕಿರೋಡಿಯನ್, ಚಂದ್ರು ಲಿಂಗದಳ್ಳಿ, ಮಲ್ಲಿಕಾರ್ಜುನ ಗೌಡ, ಇಮ್ರಾನ್ ಖಾನ್, ಶ್ವೇತಾ ಜಾಧವ್, ಮನೋಹರ್ ಹೆಗ್ಡೆ ನಾಗರಾಜ ರಾವ್, ಸಮದ್ ಬಿರಾಲಿ, ಸಲೀಂ ಮೂಡುಬಿದಿರೆ, ಸಂಶುದ್ದೀನ್ ಪಿಲಿಗೂಡು, ರಾಕ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ರಂಗಪ್ಪ ಕನ್ನಡ ಪಾಠಶಾಲೆ ದುಬೈಯ ಗಿರೀಶ್ ವೊರಟೆ, ಗಿರೀಶ್ ಪಟ್ಟಾರಿ, ಗವಾಸ್ಕರ್, ಸಿದ್ಧಲಿಂಗೇಶ್, ರೂಪ ಶಶಿಧರ್, ಫಿರೋಝ್ ಭಾಗವಹಿಸಿದ್ದರು.