ಮದ್ಯದ ನಶೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಗಲಾಟೆ; ಕೂಲಿ ಕಾರ್ಮಿಕನ ಕೊಲೆ, ಆರೋಪಿ ಪರಾರಿ

ಬೆಂಗಳೂರು: ಮದ್ಯದ ನಶೆಯಲ್ಲಿ ಕೂಲಿ ಕಾರ್ಮಿಕರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ನವರತ್ನ ಅಗ್ರಹಾರ ಬಳಿ ನಡೆದಿದೆ. ಅಸ್ಸಾಂ ಮೂಲದ ಶಂಭು ತಂತಿ ಮೃತ ಆರೋಪಿಯಾಗಿದ್ದು, ಆರೋಪಿ ರಾಧೆಶ್ಯಾಮ್ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಸ್ನೇಹಿತರಾಗಿದ್ದು, ತಡ ರಾತ್ರಿವರೆಗೂ ಎಣ್ಣೆ ಪಾರ್ಟಿ ಮಾಡಿದ್ದರು. ಆ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.

ನವರತ್ನ ಅಗ್ರಹಾರ ಬಳಿಯ ಖಾಸಗಿ ಅಪಾರ್ಟ್ಮೆಂಟ್ ಕಟ್ಟಡ ಕಾಮಗಾರಿಗೆಂದು ಅಸ್ಸಾಂ ಮತ್ತು ಬಿಹಾರ ಮೂಲದ ಅನೇಕರು ಬಂದಿದ್ದು, ಅಲ್ಲೇ ಪಕ್ಕದ ಶೆಡ್ಗಳನ್ನು ಬಾಡಿಗೆಗೆ ಪಡೆದು ನೆಲೆಸಿದ್ದರು. ಶನಿವಾರದವರೆಗೂ ಕೆಲಸ ಮಾಡಿದ್ದ ತಂಡ ನಿನ್ನೆ ಭಾನುವಾರದ ಹಿನ್ನಲೆ ಪಾರ್ಟಿ ನಡೆಸಿದೆ. ಈ ವೇಳೆ ಮದ್ಯದ ನಶೆಯಲ್ಲಿದ್ದ ಶಂಭು ತಂತಿ ಮತ್ತು ರಾಧೆಶ್ಯಾಮ್ ನಡುವೆ ಯಾವುದೋ ಕ್ಷುಲಕ ವಿಚಾರಕ್ಕೆ ಕಿರಿಕ್ ಆಗಿದ್ದು, ಜಗಳ ವಿಕೋಪಕ್ಕೆ ಹೋಗಿದೆ. ಮಾತಿಗೆ ಮಾತು ಬೆಳೆದ ಪರಿಣಾಮ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ರಾಧೆಶ್ಯಾಮ್ ಜೋರಾಗಿ ಹಲ್ಲೆ ನಡೆಸಿದ್ದು, ಅಲ್ಲೇ ಕುಸಿದು ಬಿದ್ದು ಶಂಭುತಂತಿ ಸಾವನ್ನಪ್ಪಿದ್ದಾರೆ.
ಇಷ್ಟೆಲ್ಲ ನಡೆದರೂ ಅತಿಯಾಗಿ ಮದ್ಯ ಸೇವಿಸಿದ್ದ ರಾಧೆಶ್ಯಾಮ್ಗೆ ಸ್ನೇಹಿತ ಮೃತಪಟ್ಟಿರುವ ಬಗ್ಗೆ ಅರಿವೇ ಇರಲಿಲ್ಲ. ಬೆಳಗಿನ ಜಾವದ ವೇಳೆಗೆ ಆತನಿಗೆಬ ಈ ಬಗ್ಗೆ ಗೊತ್ತಾಗಿದ್ದು, ಸ್ಥಳದಿಂದ ಆರೋಪಿ ಎಸ್ಕೇಪ್ ಆಗಿದ್ದಾನೆ. ಇತ್ತ ಬೆಳಗ್ಗೆ ಎಷ್ಟು ಎಬ್ಬಿಸಿದರೂ ಶಂಭುತಂತಿ ಎದ್ದೇಳದ ಕಾರಣ, ಶೆಡ್ನಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಆತ ಸಾವನ್ನಪ್ಪಿರೋದು ಉಳಿದವರಿಗೆ ಗೊತ್ತಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಈಶಾನ್ಯ ವಿಭಾಗ ಡಿಸಿಪಿ ಸಜಿತ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ತಲೆ ಮರೆಸಿಕೊಂಡಿರೋ ಆರೋಪಿ ರಾಧೆಶ್ಯಾಮ್ಗಾಗಿ ಶೋಧ ಕಾರ್ಯ ಮುಂದುವರಿದಿದೆ.