4 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ: ಉಗಾಂಡಾ ಮೂಲದ ಕಿಲಾಡಿ ಮಹಿಳೆ ಅರೆಸ್ಟ್!

ಮಂಗಳೂರು: ನಗರದ ಪೆಡ್ಲರ್‌ಗಳಿಗೆ ಬೆಂಗಳೂರಿನಿಂದ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಉಗಾಂಡ ಮೂಲದ ಜಲಿಯಾ ಝಲ್ವಾಂಗೊ ಎಂಬ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನ ಜಿಗಣಿ ಸರಹದ್ದಿನಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.


ಈಕೆಯಿಂದ ಸುಮಾರು 4 ಕೋಟಿ ರೂ. ಮೌಲ್ಯದ 4 ಕೆ.ಜಿ. ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರಿನ ಆರು ಮಂದಿ ಮಾದಕ ವಸ್ತು ಪೆಡ್ಲರ್‌ಗಳು ಈಕೆಯಿಂದ ಎಂಡಿಎಂಎ ಖರೀದಿಸಿ ಮಂಗಳೂರಿನ ವಿದ್ಯಾರ್ಥಿಗಳು, ಯುವಕರು, ನಾಗರಿಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಮುಲ್ಕಿ ಠಾಣಾ ಪೊಲೀಸರು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾವುಂದ ಗ್ರಾಮದ ಮುಹಮ್ಮದ್ ಶಿಯಾಬ್ ಯಾನೆ ಶಿಯಾಬ್ (22), ಮಂಜನಾಡಿ ಸಮೀಪದ ನರಿಂಗಾನದ ಮುಹಮ್ಮದ್ ನೌಷಾದ್ ಯಾನೆ ನೌಷಾದ್ (29), ಮಂಗಳೂರು ಕಸಬಾ ಬೆಂಗ್ರೆಯ ಇಮ್ರಾನ್ ಯಾನೆ ಇಂಬು (27), ಬಂಟ್ವಾಳದ ರಾಮಲ್ ಕಟ್ಟೆಯ ನಿಸಾರ್ ಅಹ್ಮದ್ (36) ಎಂಬವರನ್ನು ಬಂಧಿಸಿ 524 ಗ್ರಾಂ. ಎಂಡಿಎಂಎ ವಶ ಪಡಿಸಿಕೊಂಡಿದ್ದರು.