ಪಿಎಚ್.ಡಿ ಸಂಖ್ಯೆಯಲ್ಲಿ ಇಳಿಕೆ: ಮಂಗಳೂರು ವಿವಿಯಲ್ಲಿ ಸ್ಥಿತಿಗತಿ ಏನು ಹೇಳುತ್ತೆ?

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿಲ್ಲವೇ? ಪಿಎಚ್. ಡಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಲಭ್ಯ ಮಾಹಿತಿ ಪ್ರಕಾರ ಪಿಎಚ್. ಡಿ ಸಂಶೋಧನೆಗೆ ಒತ್ತು ನೀಡುವಲ್ಲಿ ವಿವಿ ಯು ಕೊಂಚ ಹಿಂದಿದೆ.
1982ರಿಂದ 2017ರವರೆಗೆ ಒಟ್ಟು 1393 ಮಂದಿ ಸಂಶೋಧನೆ ಪೂರೈಸಿ ಪಿಎಚ್.ಡಿ ಪಡೆದಿದ್ದಾರೆ. ಈ ಪೈಕಿ 2013/14ರಲ್ಲಿ 96 ಪಿಎಚ್‌ಡಿ, 2014/15ರಲ್ಲಿ 88 ಪಿಎಚ್‌ಡಿ, 2015/16ರಲ್ಲಿ 99ಪಿಎಚ್‌ಡಿ, 2016/17ರಲ್ಲಿ 79 ಪಿಎಚ್‌ಡಿ, 2017/18ರಲ್ಲಿ 97 ಪಿಎಚ್‌ಡಿ, 2018/19ರಲ್ಲಿ 149 ಪಿಎಚ್‌ಡಿ ಹಾಗೂ 2019/20ರಲ್ಲಿ 105 ಪಿಎಚ್‌ಡಿ ಆಗಿತ್ತು. ಆದರೆ ಬಳಿಕ 2020-21ರಲ್ಲಿ 216, 2022-23ರಲ್ಲಿ 186 ಏರಿಕೆ ಕಂಡರೂ 2023-24ರಲ್ಲಿ ಆಗಿರುವುದು ಬರೀ ತೊಂಬತ್ತೇ. ಕೊರೊನಾ ಬಳಿಕ ಏರಿಕೆಯಾಗಿದ್ದ ಸಂಖ್ಯೆ ಈಗ ಇಳಿಮುಖದಲ್ಲಿದೆ.
ವಿವಿಯಲ್ಲಿ ಬಹುತೇಕ ಪ್ರಾಧ್ಯಾಪಕರು ನಿವೃತ್ತಿಯಾಗುತ್ತಿದ್ದಾರೆ. ಹಿರಿಯ ಉಪನ್ಯಾಸಕರ ಸಂಖ್ಯೆ ಕುಸಿತವಾಗಿದೆ. ಮಂಜೂರಾಗಿರುವ ಹುದ್ದೆಗಳ ಅರ್ಧದಷ್ಟು ಉಪನ್ಯಾಸಕರಿದ್ದಾರೆ. 273 ಹುದ್ದೆಯ ಪೈಕಿ 137 ಖಾಲಿ ಇವೆ. ಇವೆಲ್ಲವೂ ಪಿಎಚ್.ಡಿ ಸಂಶೋಧನೆಗೆ ಬರುವವರ ಮೇಲೆ ಪರಿಣಾಮ ಬೀರಿದೆ. ಹಾಗಾಗಿ ಸಂಖ್ಯೆ ಕುಸಿದಿದೆ. ಒಂದು ಶಿಕ್ಷಣ ಸಂಸ್ಥೆಗೆ ನಾೖಕ್‌ನಲ್ಲಿ ರ್‍ಯಾಂಕ್ ಬರಬೇಕಾದರೆ ಪಿಎಚ್.ಡಿ ಆದವರ ಸಂಖ್ಯೆಯೂ ಒಂದು ಮಾನದಂಡವಾಗಿದೆ.
ವಿಜ್ಞಾನದಲ್ಲೇ ಅಧಿಕ
2020-21ರಲ್ಲಿ ವಿಜ್ಞಾನ ನಿಕಾಯದಲ್ಲಿ 128 ಮಂದಿ ಪಿಎಚ್‌ಡಿ ಪಡೆದಿದ್ದರೆ, 2022-23ರಲ್ಲಿ ಈ ಸಂಖ್ಯೆ 83ಕ್ಕೆ ಇಳಿಕೆಯಾಗಿ, 2023-24ರಲ್ಲಿ 34ರಲ್ಲಿ ಬಂದು ನಿಂತಿದೆ. ಆದರೂ ಇರುವುದರಲ್ಲಿ ವಿಜ್ಞಾನ ನಿಕಾಯದ ಪಿಎಚ್.ಡಿ ಹೆಚ್ಚಿದೆ. ವೈಜ್ಞಾನಿಕ ವಿಷಯಗಳ ಬಗ್ಗೆ ಪಿಎಚ್.ಡಿ ಅಧಿಕವಾಗಿ ನಡೆದಿದ್ದರೂ, ಪ್ರಾದೇಶಿಕ ಸ್ಥಿತಿಗತಿಯನ್ನು ಇಟ್ಟುಕೊಂಡು ಅಧ್ಯಯನ ಮಾಡಿದವರು ಅಧಿಕ. ಅದರಲ್ಲಿಯೂ ತುಳು ಭಾಷೆ, ಯಕ್ಷಗಾನ, ದೈವಾರಾಧನೆ ವಿಷಯಗಳ ಪಿಎಚ್.ಡಿ ಗಳೂ ಹೆಚ್ಚಿವೆ.
ಮಂಗಳೂರು ವಿವಿಯ ಸಮಾಜ ಕಾರ್ಯ (ಸೋಶಿಯಲ್ ವರ್ಕ್) ವಿಭಾಗದಲ್ಲಿ 2023-24ನೇ ಸಾಲಿನ ಪಿಎಚ್.ಡಿ ಪ್ರವೇಶ ಪ್ರಕ್ರಿಯೆಯಲ್ಲಿ ನಿಯಮಾವಳಿ ಉಲ್ಲಂಘನೆ ಆಗಿದೆ ಎಂದು ಆರೋಪಿಸಿ ಪಿಎಚ್.ಡಿ ಪ್ರವೇಶ ಆಕಾಂಕ್ಷಿಗಳು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದ್ದರು.
ಪಿಎಚ್‌ಡಿ “ಅವಧಿ’ ನಿಯಮಾವಳಿ ಬಿಗಿ
ಮಂಗಳೂರು ವಿವಿಯಲ್ಲಿ ಈ ಹಿಂದೆ ಸಂಶೋಧನಾ ವಿದ್ಯಾರ್ಥಿ 10 ವರ್ಷ ಕಳೆದು ಪ್ರೌಢ ಪ್ರಬಂಧ ಮಂಡಿಸದಿದ್ದರೂ, ವಿವಿ, ಕುಲಪತಿ, ಮಾರ್ಗದರ್ಶಕರು ಅನುಮತಿ ನೀಡಿದರೆ ಪಿಎಚ್.ಡಿ ಮುಂದುವರಿಸಬಹುದಿತ್ತು. ಆದರೆ, ಈಗ ಇದಕ್ಕೆ ಅವಕಾಶ ಇಲ್ಲ. ಪೂರ್ಣಕಾಲಿಕ ಸಂಶೋಧನಾರ್ಥಿ 3 ವರ್ಷ ಹಾಗೂ 2 ವರ್ಷದ ಅವಧಿ ವಿಸ್ತರಣೆ ಸೇರಿ ಒಟ್ಟು 5 ವರ್ಷವನ್ನು ಮಾತ್ರ ಬಳಸಬಹುದು. ಅರೆಕಾಲಿಕ ಸಂಶೋಧನಾರ್ಥಿ ಒಟ್ಟು 6 ವರ್ಷವನ್ನು ಬಳಸಿಕೊಳ್ಳಲು ಮತ್ತು ವಿಶೇಷ ಸಂದರ್ಭದಲ್ಲಿ ಮಾತ್ರ 1 ವರ್ಷದ ಅವಧಿ ವಿಸ್ತರಣೆಗೆ ಅನ್ವಯವಾಗಲಿದೆ. ವಿಶೇಷ ಭಿನ್ನ ಸಾಮರ್ಥಯದ ವಿದ್ಯಾರ್ಥಿಗಳಿಗೆ ಮಾತ್ರ 2 ವರ್ಷ ಅಧಿಕ ಅವಧಿ ವಿಸ್ತರಣೆಗೆ ಅವಕಾಶವಿದೆ.
ಜತೆಗೆ, ಹಿರಿಯ ಉಪನ್ಯಾಸಕರು ನಿವೃತ್ತಿಯಾಗಲು 2 ವರ್ಷ ಇರುವ ಸಂದರ್ಭದಲ್ಲಿ ಪಿಎಚ್.ಡಿಗೆ ಮಾರ್ಗದರ್ಶಕರಾಗುವುದರಿಂದ ಕೆಲವು ವಿದ್ಯಾರ್ಥಿಗಳ ಸಂಶೋಧನೆಗೆ ಅಡ್ಡಿಯಾಗುತ್ತದೆ. ಯಾಕೆಂದರೆ, ಮಾರ್ಗದರ್ಶಕರು ಬದಲಾದ ಬಳಿಕ ಮತ್ತೆ ಹೊಸ ಮಾರ್ಗದರ್ಶಕರು ದೊರಕಿ ಪ್ರಬಂಧ ಮಂಡನೆ ನಿಧಾನವಾಗುತ್ತದೆ. ಹೀಗಾಗಿ ನಿವೃತ್ತರಾಗಲು 2 ವರ್ಷ ಇರುವವರಿಗೆ ಮಾರ್ಗದರ್ಶಕ ಅವಕಾಶ ನೀಡದಿರಲು ವಿವಿ ತೀರ್ಮಾನಿಸಿದೆ.
ಪಿಎಚ್.ಡಿ ಪಡೆಯಲು ವಿವಿಯಲ್ಲಿ ಸಂಪನ್ಮೂಲದ ಕೊರತೆ ಇಲ್ಲ. ಈಗ ಇರುವ ಉಪನ್ಯಾಸಕರಲ್ಲಿ ಬಹುತೇಕ ಮಂದಿ ಪೇಟೆಂಟ್ ಪಡೆದವರಿದ್ದಾರೆ.. ಆದರೆ, ಹಿರಿಯ ಉಪನ್ಯಾಸಕರು ನಿವೃತ್ತಿ ಹೊಂದುವ ಸಂಖ್ಯೆ ಹೆಚ್ಚು. ಮುಂದಿನ ವರ್ಷ ಪಿಎಚ್.ಡಿ ಪಡೆಯಲು ವಿದ್ಯಾರ್ಥಿಗಳಿಗೆ ಇನ್ನಷ್ಟು ಅವಕಾಶ ಒದಗಿಸಲು ಪ್ರಯತ್ನಿಸಲಾಗುವುದು.
ಪ್ರೊ|ಪಿ.ಎಲ್.ಧರ್ಮ, ಕುಲಪತಿ, ಮಂಗಳೂರು ವಿವಿ