ಬಿಗ್ ಬಾಸ್ ಕನ್ನಡ ಸೀಸನ್ 12ಗೆ ಡಾ. ಬ್ರೋ ಎಂಟ್ರಿ? ವಿಡಿಯೋ ಅಪ್‌ಲೋಡ್ ಮಾಡದೇ ಇರುವುದರ ಹಿಂದಿನ ಕಾರಣ ಇಲ್ಲಿದೆ

ಬಿಗ್ ಬಾಸ್ ಕನ್ನಡ ಸೀಸನ್ 12 ಯಾವಾಗ ಶುರು ಆಗತ್ತೆ? ಯಾರು ಯಾರು ಬರುತ್ತಾರೆ ಎಂಬ ಕುತೂಹಲ ಇದೆ. ಈ ಮಧ್ಯೆ ಡಾ ಬ್ರೋ ಅವರು ( Dr Bro ) ಯಾಕೆ ಯುಟ್ಯೂಬ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಳ್ತಿಲ್ಲ ಎಂಬ ಕುತೂಹಲವೂ ಇದೆ. ಇದಕ್ಕೀಗ ಉತ್ತರ ಸಿಕ್ಕಿದೆ.

ಯಾಕೆ ವಿಡಿಯೋ ಅಪ್‌ಲೋಡ್ ಮಾಡ್ತಿಲ್ಲ?
ಕಳೆದ ಐದು ತಿಂಗಳುಗಳಿಂದ ಡಾ ಬ್ರೋ ಅವರು ಒಂದೂ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿಲ್ಲ. ಇನ್ನು ಡಾ ಬ್ರೋ ( Dr Bro ) ಅವರು ಕೆಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಐದು ತಿಂಗಳ ಹಿಂದೆ ಅವರು ನೇಪಾಳಕ್ಕೆ ಹೋಗಿ ಅಲ್ಲಿ ವಿಡಿಯೋ ಮಾಡಿದ್ದರು. ಅದಾದ ನಂತರ ಅವರು ಬೇರೆ ದೇಶಗಳ ಪ್ರವಾಸ ಮಾಡಿಲ್ಲವೋ ಅಥವಾ ಯುಟ್ಯೂಬ್‌ಗೆ ಅಪ್‌ಲೋಡ್ ಮಾಡಿಲ್ಲವೋ ಈ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕಿದೆ.
ಉದ್ಯಮಿಯಾಗಿರೋ ಡಾ ಬ್ರೋ
ಅಂದಹಾಗೆ ಕೇವಲ 25ರ ಹರೆಯದಲ್ಲಿ Dr. Bro ಅವರು ಯೂಟ್ಯೂಬ್ ಮೂಲಕ ಮನೆಮಾತಾಗಿ, ಆ ಟ್ರಾವೆಲ್‌ನ್ನು ಉದ್ಯಮವನ್ನಾಗಿ “ಗೋ ಪ್ರವಾಸ” ಎಂಬ ಉದ್ಯಮ ರೂಪಿಸಿಕೊಂಡಿದ್ದಾರೆ. ಇದು ಒಬ್ಬ ವ್ಯಕ್ತಿಯ ಯಶಸ್ಸಿನ ಕಥೆಯಲ್ಲ, ಇದು ಪ್ರತಿಯೊಬ್ಬ ಕನ್ನಡಿಗನ ಕನಸಿಗೆ ಬೆಲೆಕೊಡುವ ಹಾದಿ! ಬೇರೆಯವರ ಕೈಕೆಳಗಡೆ ಉದ್ಯೋಗ ಮಾಡಲು ಇಷ್ಟವಿಲ್ಲದೆ, ಗಗನ್ ಶ್ರೀನಿವಾಸ್ ಅವರು ಉದ್ಯೋಗ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾವನ್ನೇ ಬಳಸಿಕೊಂಡು, ಅದನ್ನೇ ಸಾಧನೆಯ ವೇದಿಕೆಯಾಗಿಸಿಕೊಂಡು, ಹೊಸ ಬಿಸಿನೆಸ್ ಮಾದರಿಯನ್ನೇ ಕನ್ನಡಿಗರ ಮುಂದಿಟ್ಟಿದ್ದಾರೆ. ಈ ಉದ್ಯಮದಲ್ಲಿ ಬ್ಯುಸಿ ಆಗಿರೋ ಅವರು ಬೇರೆ ದೇಶಗಳಿಗೆ ಹೋಗ್ತಿಲ್ಲ, ವಿಡಿಯೋ ಮಾಡ್ತಿಲ್ಲ ಎಂದು ಕೂಡ ಹೇಳಲಾಗ್ತಿದೆ.
ಬಿಗ್ ಬಾಸ್ ಶೋನಲ್ಲಿ ಡಾ ಬ್ರೋ
ಅಂದಹಾಗೆ ಕಳೆದ ಎರಡು-ಮೂರು ಸೀಸನ್‌ಗಳಿಂದಲೂ ಗಗನ್ ಶ್ರೀನಿವಾಸ್ ಅವರು ಬಿಗ್ ಬಾಸ್ ಶೋಗೆ ( Bigg Boss Kannada Season 12 ) ಹೋಗ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಬಾರಿ ಅವರು ಬಿಗ್ ಬಾಸ್‌ಗೆ ಹೋಗೋದು ಪಕ್ಕಾ ಎನ್ನಲಾಗಿದೆ. ಸೆಪ್ಟೆಂಬರ್ ತಿಂಗಳು ಅಂತ್ಯದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಶುರುವಾಗಲಿದೆ. ಈ ಬಾರಿ ಡಾ ಬ್ರೋ ಅವರು ಪಕ್ಕಾ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಪ್ರತಿ ಬಾರಿ ಈ ಶೋ ರಿಜೆಕ್ಟ್ ಮಾಡ್ತಿದ್ದ ಅವರು ಈ ಸೀಸನ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಿಂದ ಹೊರಗಡೆ ಜನಪ್ರಿಯತೆ ಪಡೆದವರು, ಸದ್ದು ಮಾಡಿದವರು ದೊಡ್ಮನೆಯಲ್ಲಿ ಸೈಲೆಂಟ್ ಆಗಿ ಕೆಲವೇ ವಾರಗಳಲ್ಲಿ ಹೊರಗಡೆ ಬಂದ ಉದಾಹರಣೆಯೂ ಇದೆ.
ಗಗನ್ ಶ್ರೀನಿವಾಸ್ ಅವರು ಪಾಕಿಸ್ತಾನದಿಂದ ನೇಪಾಳದವರೆಗೆ ಬೇರೆ ಬೇರೆ ದೇಶಗಳಿಗೆ ಹೋಗುತ್ತಾರೆ, ಅಷ್ಟೇ ಅಲ್ಲದೆ ಅಲ್ಲಿನ ವಿಶೇಷಗಳ ಬಗ್ಗೆ ಮಾಹಿತಿ ಕೊಡ್ತಾರೆ. ಸಾಕಷ್ಟು ಜನನಿಬಿಡ, ಅಪಾಯಕಾರಿ ಸ್ಥಳಗಳಿಗೂ ಅವರು ಭೇಟಿ ನೀಡಿದ್ದುಂಟು. ಯುಟ್ಯೂಬ್‌ನಲ್ಲಿ 2.8 ಮಿಲಿಯನ್ ಸಬ್‌ಸ್ಕ್ರೈಬರ್ ಹೊಂದಿರುವ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಕಿಚ್ಚ ಸುದೀಪ್ ನಿರೂಪಣೆ!
ಈ ಬಾರಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಶೋ ನಿರೂಪಣೆ ಮಾಡುತ್ತಿದ್ದಾರೆ. ಈ ಹಿಂದೆ ಶೋ ನಿರೂಪಣೆ ಮಾಡೋದಿಲ್ಲ ಎಂದು ಹೇಳಿದ್ದರು. ಆದರೆ ವೀಕ್ಷಕರು, ವಾಹಿನಿಯ ನಿರ್ಧಾರಕ್ಕೆ ಮಣಿದು ಅವರು ಇನ್ನು ನಾಲ್ಕು ಸೀಸನ್ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದಾರಂತೆ. ಅಂದಹಾಗೆ ಈ ಬಾರಿ ಯಾರೆಲ್ಲ ಸ್ಪರ್ಧಿಗಳಾಗಿ ಬರಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ. ಒಟ್ಟಿನಲ್ಲಿ ಬಹುತೇಕರು ಈ ಶೋಗೋಸ್ಕರ ಕಾಯುತ್ತಿದ್ದಾರೆ.
