ಪತಿ ಮನೆಯವರ ವರದಕ್ಷಿಣೆ ಕಿರುಕುಳ, ಸಂಸಾರ ನಿರಾಕರಣೆ; ಉಪನ್ಯಾಸಕಿ ನೀರಿಗೆ ಹಾರಿ ಆತ್ಮಹತ್ಯೆ
ದೇವನಹಳ್ಳಿ: ಪತಿ ಮನೆಯವರಿಂದ ನಿರಂತರವಾಗಿ ವರದಕ್ಷಿಣೆ ಮತ್ತು ನಿವೇಶನಕ್ಕಾಗಿ ಕಿರುಕುಳಕ್ಕೊಳಗಾಗಿ ಬೇಸತ್ತಿದ್ದ ಉಪನ್ಯಾಸಕಿ ಪುಷ್ಪಾವತಿ (30) ಅವರು ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಸಾವಿಗೂ ಮುನ್ನ ಪುಷ್ಪಾವತಿ ಅವರು ಒಂದು ವೀಡಿಯೋ ಮಾಡಿ ತಮ್ಮ ನೋವನ್ನು ಮತ್ತು ಕಿರುಕುಳದ ವಿವರಗಳನ್ನು ದಾಖಲಿಸಿಟ್ಟಿದ್ದಾರೆ.

ಮೃತರಾದ ಪುಷ್ಪಾವತಿ ಅವರು ಉಪನ್ಯಾಸಕಿಯಾಗಿದ್ದು, 11 ತಿಂಗಳ ಹಿಂದೆ ತಪಸ್ಸಿಹಳ್ಳಿಯ ವೇಣು ಎಂಬುವವರ ಜತೆ ವಿವಾಹವಾಗಿದ್ದರು.ಮದುವೆಯಾದಾಗಿನಿಂದ ಪತಿ ಮನೆಯವರು (ಪತಿ, ಅತ್ತೆ, ಮಾವ, ಮೈದುನ) ವರದಕ್ಷಿಣೆ ಮತ್ತು ನಿವೇಶನ ಕೊಡಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದರು.ಪತಿ ವೇಣು ವಿವಾಹದ ನಂತರ ಸರಿಯಾಗಿ ಸಂಸಾರ ಮಾಡದೆ, ಪುಷ್ಪಾವತಿಯಿಂದ ದೂರ ಉಳಿಯುತ್ತಿದ್ದರು.ಮಗು ಮಾಡಿಕೊಳ್ಳೋಣ ಎಂದು ಕೇಳಿದರೆ, ಪತಿ ಈಗ ಬೇಡ ಎಂದು ಬೈಯುತ್ತಿದ್ದರು ಮತ್ತು ಅನುಮಾನಗೊಂಡು ಚಿಕಿತ್ಸೆಗೆ ಹೋಗಲು ಹೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು.ಪತಿಯನ್ನು ಮುಟ್ಟಲು ಹೋದರೆ, ಅವರು ಕಾಲಿನಿಂದ ಎದೆಗೆ ಒದೆಯುತ್ತಿದ್ದರು.
“ಮಗು ಬೇಕಿದ್ದರೆ ನನ್ನ ಚಿಕ್ಕ ಮಗನ ಬಳಿ ಹೋಗು” ಎಂದು ಅತ್ತೆ-ಮಾವ ಮತ್ತು ಮೈದುನ ಮಾನಸಿಕ ಹಿಂಸೆ ನೀಡುತ್ತಿದ್ದರು.
15 ದಿನಗಳ ಹಿಂದೆ ಗಂಡನ ಮನೆಯವರೆಲ್ಲ ಸೇರಿ ಪುಷ್ಪಾವತಿ ಮೇಲೆ ಹಲ್ಲೆ ನಡೆಸಿ, ಎಳೆದಾಡಿ ಗಾಯಗೊಳಿಸಿದ್ದರು. “ನೀನು ದೂರು ಕೊಟ್ಟರೆ ಮತ್ತೆ ಮನೆಗೆ ಬರಲು ಸಾಧ್ಯವಿಲ್ಲ” ಎಂದು ಮಾವ ಬೆದರಿಸಿದ್ದರು.
ಕೊನೆಯ ಬಾರಿಗೆ ಮನೆಯಲ್ಲಿ ಗಲಾಟೆ ನಡೆದಾಗ, ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಕ್ಕೆ, ಪತಿ ಮನೆಯವರು ಪುಷ್ಪಾವತಿಯ ಕತ್ತು ಹಿಸುಕಿ ಮನೆಯಿಂದ ಆಚೆ ಹಾಕಿದ್ದರು. ಇದನ್ನು ಪ್ರಶ್ನಿಸಲು ಬಂದ ತಮ್ಮನ ಮೇಲೆಯೂ ಹಲ್ಲೆ ಮಾಡಿದ್ದರು. ಕಿರುಕುಳದಿಂದ ಬೇಸತ್ತು, ಈ ಎಲ್ಲಾ ಆರೋಪಗಳನ್ನು ವೀಡಿಯೋ ಮಾಡಿಟ್ಟು, ಪುಷ್ಪಾವತಿ ಅವರು ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್‌ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಷ್ಪಾವತಿ ನಾಪತ್ತೆಯ ಬಗ್ಗೆ ಕುಟುಂಬಸ್ಥರು ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೃತರ ವೀಡಿಯೋ ಹೇಳಿಕೆ ಆಧಾರದ ಮೇಲೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.