ಮೈಸೂರು ಸೌಂದರ್ಯ ಹಾಳು ಮಾಡಬೇಡಿ: ನಗರದೊಳಗೆ ಫ್ಲೈಓವರ್ ನಿರ್ಮಾಣಕ್ಕೆ ಸಂಸದ ಯದುವೀರ ಒಡೆಯರ್ ತೀವ್ರ ವಿರೋಧ

ಮೈಸೂರು: ಮೈಸೂರು ನಗರದೊಳಗೆ ಎರಡು ಫ್ಲೈಓವರ್ (Flyover) ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ವಿರೋಧ ವ್ಯಕ್ತಪಡಿಸಿದ್ದಾರೆ.

ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವ ಅವರು, ಜೆಎಲ್ಬಿ ರಸ್ತೆ, ವಿನೋಬಾ ರಸ್ತೆಗಳು ಪಾರಂಪರಿಕ ರಸ್ತೆಗಳಾಗಿವೆ. ಈ ರಸ್ತೆಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ಜನಾಭಿಪ್ರಾಯ ಪಡೆಯದೇ ಈ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. ಡಿಪಿಆರ್ ಕೂಡ ಸಿದ್ಧಪಡಿಸುತ್ತಿದ್ದಾರೆ. ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದಿದ್ದಾರೆ.
ವಿನೋಬಾ ರಸ್ತೆಯಲ್ಲಿ ಫ್ಲೈ ಓವರ್ ನಿರ್ಮಿಸಲು ಮುಂದಾದರೆ ಮರಗಳ ಹನನ ಆಗಲಿದೆ. ಹಾಗಾಗಿ ಈ ಮಾರ್ಗದಲ್ಲಿ ಫ್ಲೈಓವರ್ ನಿರ್ಮಾಣ ಮಾಡಬಾರದು. ಅಭಿವೃದ್ಧಿ ನೆಪದಲ್ಲಿ ಮೈಸೂರಿನ ಸೌಂದರ್ಯ ಹಾಳು ಮಾಡಬಾರದು. ಪಾರಂಪರಿಕ ನಗರಿಯ ಗುರುತು ಉಳಿಸಿಕೊಳ್ಳಬೇಕು. ಸಿಎಂ ಕೂಡ ಗ್ರೇಟರ್ ಮೈಸೂರು (Greater Mysuru) ಸಭೆಯಲ್ಲಿ ಮೈಸೂರಿನ ಪಾರಂಪರಿಕತೆ ಉಳಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸಿಎಂ ಅವರ ಸಲಹೆಯಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ
ಫ್ಲೈಓವರ್ ನಿರ್ಮಾಣವೇ ಶಾಶ್ವತ ಪರಿಹಾರವಲ್ಲ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಮುಂಬೈ ಮಾದರಿಯಲ್ಲಿ ಅಂಡರ್ ಗ್ರೌಂಡ್ ನಲ್ಲಿ ಮೆಟ್ರೋ ನಿರ್ಮಾಣ ಮಾಡಲಿ. ಮೈಸೂರಿನ ಜನಸಂಖ್ಯೆಗೆ ಅನುಗುಣವಾಗಿ ಕಾಮಗಾರಿ ಕೈಗೊಳ್ಳಲಿ. ಗ್ರೇಟರ್ ಮೈಸೂರು ನಿರ್ಮಾಣ ಮಾಡುವಾಗ ಸ್ಥಳೀಯರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕಾಮಗಾರಿ ಮಾಡಲಿ. ಜನರ ವಿರೋಧದ ನಡುವೆ ಫ್ಲೈ ಓವರ್ ಕಾಮಗಾರಿ ಕೈಗೆತ್ತಿಕೊಂಡರೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಹಾಗೂ ಜನರ ಸಹಕಾರದೊಂದಿಗೆ ಹೋರಾಟ ರೂಪಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಗ್ರೇಟರ್ ಮೈಸೂರಿನಿಂದ ಒಳಿತಾಗಲಿದೆ. ಆದರೆ ಗ್ರೇಟರ್ ಮೈಸೂರು ನಿರ್ಮಾಣ ಮಾಡುವಾಗ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಬೆಂಗಳೂರು ಮಾದರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಬಾರದು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.