ಸ್ವಾಮಿನಿಷ್ಠೆ ಮೆರೆದ ಶ್ವಾನ: ಗಾಯಗೊಂಡ ಅಜ್ಜಿಯ ಬಳಿಗೆ ಪೊಲೀಸರನ್ನು ಕರೆದೊಯ್ದ ನಾಯಿ

ಪ್ರಾಣಿಗಳು ಅದರಲ್ಲೂ ಶ್ವಾನಗಳು ಸ್ವಾಮಿನಿಷ್ಠೆಗೆ ಹೆಸರಾದ ಪ್ರಾಣಿಗಳು, ನಾಯಿಗಳು ತಮ್ಮ ಮಾಲೀಕರ ಜೀವ ಉಳಿಸಿದಂತಹ ಹಲವು ಘಟನೆಗಳು ಈಗಾಗಲೇ ನಡೆದಿವೆ. ಅದೇ ರೀತಿ ಇಲ್ಲೊಂದು ಕಡೆ ಶ್ವಾನವೊಂದು ಗಾಯಗೊಂಡಿದ್ದ ಮಹಿಳೆಯೊಬ್ಬರ ಬಳಿಗೆ ಪೊಲೀಸರನ್ನು ಕರೆದೊಯ್ಯುವ ಮೂಲಕ ಬುದ್ಧಿವಂತಿಕೆ ಹಾಗೂ ನಿಯತ್ತು ಮೆರೆದಿದೆ. ಅಮೆರಿಕಾದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದೆ.

ವಾಕಿಂಗ್ ತೆರಳಿ ಹಿಂದಿರುಗದ ವೃದ್ಧೆ
ನಿಷ್ಠಾವಂತ ನಾಯಿಯು ಡೆಸ್ಟಿನ್‌ನಲ್ಲಿ ಸಂಜೆ ಸಮಯದಲ್ಲಿ ವಾಕಿಂಗ್ ತೆರಳಿದ ನಂತರ ಕಾಣೆಯಾದ ತನ್ನ 86 ವರ್ಷದ ಅಜ್ಜಿಯ ಬಳಿಗೆ ಡೆಪ್ಯೂಟಿ ಡೆವೊನ್ ಮಿಲ್ಲರ್ ಅವರನ್ನ ಕರೆದೊಯ್ಯುವ ಮೂಲಕ ನಿಷ್ಠೆಯು ನಾಯಿಗಳ ಅತ್ಯಂತ ಪ್ರಸಿದ್ಧ ಲಕ್ಷಣಗಳಲ್ಲಿ ಒಂದಾಗಿದೆ ಎಂಬುದನ್ನು ಮ್ತತೆ ಸಾಬೀತುಪಡಿಸಿದೆ. ಅಧಿಕಾರಿಗಳು ಬಿಡುಗಡೆ ಮಾಡಿದ ಬಾಡಿಕ್ಯಾಮ್ ಕ್ಯಾಮರಾಗಳಿಂದ ಈ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 25 ರಂದು ರಾತ್ರಿ 10:30 ರ ಸುಮಾರಿಗೆ (ಸ್ಥಳೀಯ ಸಮಯ) ಈಯೋರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೃದ್ಧ ಮಹಿಳೆ ಬಿದ್ದು ಗಾಯಗೊಂಡಿದ್ದರು. ಅವರು ಮನೆಗೆ ಹಿಂತಿರುಗದ ಕಾರಣ ಅವರ ಪತಿ ಅವರು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಆದರೆ ಸೋಮವಾರ ಒಕಲೂಸಾ ಕೌಂಟಿ ಶೆರಿಫ್ ಕಚೇರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ವೃದ್ಧೆಯ ಬಳಿಗೆ ಶ್ವಾನ ರಕ್ಷಣಾ ತಂಡವನ್ನು ಕರೆದೊಯ್ಯುವುದನ್ನು ಕಾಣಬಹುದು.
ಆ ವೀಡಿಯೋದಲ್ಲಿ ಮಹಿಳೆಯ ಪತಿ ತನ್ನ ಧ್ವನಿಯಲ್ಲಿ ಭಯದಿಂದ ಮಾತನಾಡುತ್ತಿರುವುದನ್ನು ಕೇಳಬಹುದು. ಅವಳು ವಾಕ್ ಹೋಗುವಾಗ ಯಾವಾಗಲೂ ಆ ನಾಯಿಯನ್ನು ಕರೆದುಕೊಂಡು ಹೋಗುತ್ತಾಳೆ, ಆದರೆ ಅವಳು ಎಂದಿಗೂ 10 ಅಥವಾ 15 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈಗ ಸುಮಾರು ಒಂದು ಗಂಟೆಯಾಗಿದೆ. ಈಗ ಒಂದು ಗಂಟೆಗೂ ಹೆಚ್ಚು ಸಮಯವಾಗಿದೆ ಎಂದು ಅವರು ಹೇಳುವುದು ಕೇಳುತ್ತಿದೆ.
ವೃದ್ಧ ಮಹಿಳೆಯ ಬಳಿ ಪೊಲೀಸರ ಕರೆದೊಯ್ದ ಶ್ವಾನ
ವೀಡಿಯೋದಲ್ಲಿ ಪೊಲೀಸ್ ಅಧಿಕಾರಿ ತಮ್ಮ ಕಾರಿಗೆ ಹಿಂತಿರುಗುವುದನ್ನು ಈ ವೀಡಿಯೊ ತೋರಿಸಿದೆ. ಅವರು ಕಾರು ಚಾಲನೆ ಮಾಡುವಾಗ ನಾಯಿಯನ್ನು ಗಮನಿಸಿದರು. ಕಾರು ನಿಲ್ಲಿಸುತ್ತಿದ್ದಂತೆ ಕಾರಿನ ಬಳಿ ಬಂದ ನಾಯಿ ಡೆಪ್ಯೂಟಿ ಮಿಲ್ಲರ್ ಅವರ ಬಳಿ ಬಂದಿದೆ. ಈ ವೇಳೆ ಅವರು ಹಾಯ್ ಬೇಬಿ, ನಿನ್ನ ತಾಯಿ ಎಲ್ಲಿದ್ದಾರೆ? ನನಗೆ ತೋರಿಸು ಎಂದು ಕೇಳಿದ್ದಾರೆ. ಈ ವೇಳೆ ಶ್ವಾನವೂ ಮಿಲ್ಲರ್ ಅವರನ್ನು ಮುಂಭಾಗದ ಅಂಗಳದ ಮೂಲಕ ಕರೆದೊಯ್ದು ಗಾಲ್ಫ್ ಕೋರ್ಸ್‌ಗೆ ಕರೆದೊಯ್ದಿದೆ. ಅಲ್ಲಿ ಮಹಿಳೆ ಗಾಯಗೊಂಡು ಪಾದಚಾರಿ ಮಾರ್ಗದಲ್ಲಿ ಮಲಗಿದ್ದು, ಅವರಿಗೆ ಪ್ರಜ್ಞೆ ಇತ್ತು.
ಈ ಶ್ವಾನ ನಮ್ಮನ್ನು ಬಿಡಲಿಲ್ಲ, ಅವನು ನಮ್ಮ ಬಳಿಗೆ ಬರುತ್ತಲೇ ಇದ್ದ. ಅವನು ನನ್ನ ಕಾರಿನ ಬಳಿಗೆ ಓಡಿಬಂದ ನಾನು ಅವನಿಗೆ ಅವನ ತಾಯಿಯ ಬಳಿ ಕರೆದುಕೊಂಡು ಹೋಗುವಂತೆ ಹೇಳಿದೆ ಹಾಗೂ ನಂತರ ಅವನು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದನು ಎಂದು ಗಾಯಗೊಂಡು ಬಿದ್ದಿದ್ದ ವೃದ್ಧ ಮಹಿಳೆಯ ಬಳಿ ಅಧಿಕಾರಿ ಹೇಳುವುದನ್ನು ವೀಡಿಯೋದಲ್ಲಿ ಕೇಳಬಹುದು.
ನಾಯಿಯ ಕಾರ್ಯಕ್ಕೆ ಭಾವುಕಳಾದ ವೃದ್ಧೆ
ಶ್ವಾನದ ಸ್ವಾಮಿನಿಷ್ಠೆಗೆ ವೃದ್ಧೆ ಕೃತಜ್ಞತೆ ವ್ಯಕ್ತಪಡಿಸಿದ್ದು, ನೀನು ಒಳ್ಳೆಯ ಹುಡುಗ. ತುಂಬಾ ಒಳ್ಳೆಯ ಹುಡುಗ. ನಾನು ಅವನ ಮಾಲೀಕಳೂ ಅಲ್ಲ. ನಾನು ಅವನ ಅಜ್ಜಿ. ಓಹ್, ನೀನು ತುಂಬಾ ಒಳ್ಳೆಯ ಹುಡುಗ ಎಂದು ಹೇಳಿದ್ದಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಶ್ವಾನದ ನಿಷ್ಠೆಗೆ ತಲೆಬಾಗಿದ್ದಾರೆ. ಹಾಗೆಯೇ ಒಕಲೂಸಾ ಕೌಂಟಿ ಶೆರಿಫ್ ಕಚೇರಿಯೂ ಕೂಡ ಶ್ವಾನದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದೆ. ಕೆಲವೊಮ್ಮೆ ಹೀರೋಗಳು ನಾಲ್ಕು ಕಾಲುಗಳು ಮತ್ತು ಅಲ್ಲಾಡಿಸುವ ಬಾಲದೊಂದಿಗೆ ಬರುತ್ತಾರೆ ಎಂದು ಅದು ಶ್ವಾನವನ್ನು ಶ್ಲಾಘಿಸಿದೆ.