ಒಪ್ಪಿಗೆಯಿಲ್ಲದೇ ಡಿಎನ್ಎ ಪರೀಕ್ಷೆ: ಅತ್ತೆಯಿಂದ 17 ವರ್ಷದ ಶಾಂತಿ ಪುಡಿಪುಡಿ…!

ಕೆಲವೊಬ್ಬರ ಜೀವನದಲ್ಲಿ ಯಾವುದೋ ಸಂದರ್ಭದಲ್ಲಿ ಏನೋ ಒಂದು ಕಹಿ ಘಟನೆ ನಡೆದಿರುತ್ತದೆ. ಅದನ್ನು ಮರೆಯಲು ಅವರು ಪ್ರಯತ್ನಿಸುತ್ತಿರುವಾಗ ಅದನ್ನು ಮತ್ತೆ ನೆನಪಿಸುವುದು ಗಾಯದ ಮೇಲೆ ಉಪ್ಪು ಸುರಿದಂತಾಗುತ್ತದೆ. ಇಂತಹ ಘಟನೆ ಈಗ ಮಹಿಳೆಯೊಬ್ಬಳ ಜೀವನದಲ್ಲಿ ನಡೆದಿದ್ದು, ತನ್ನ ಕಥೆಯನ್ನು ಆಕೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
17 ವರ್ಷಗಳ ಹಿಂದೆ ಸಮಾಧಿ ಮಾಡಿದ್ದ ತನ್ನ ಜೀವನದ ರಹಸ್ಯವೊಂದನ್ನು ಆಕೆಯ ಅತ್ತೆ ಊಟಕ್ಕೆ ಕರೆವ ನೆಪದಲ್ಲಿ ಆಕೆಗೆ ಮತ್ತೆ ನೆನಪಿಸಿದ್ದಾಳಂತೆ. ಅತ್ತೆ ನಡೆಸಿದ ಡಿಎನ್ಎ ಪರೀಕ್ಷೆಯಿಂದ ಆಕೆಯ ಕುಟುಂಬದ ಶಾಂತಿ ಹೇಗೆ ಕದಡಿತು ಎಂಬುದನ್ನು ಕೂಡ ಆಕೆ ಇಲ್ಲಿ ಬಹಿರಂಗಪಡಿಸಿದ್ದಾಳೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಕೆಯ ಪೋಸ್ಟ್ ಪ್ರಕಾರ, ಊಟಕ್ಕೆ ಕರೆದ ಅತ್ತೆ ಅವರ ಕೈಗೆ ಒಂದು ಕಾಗದವನ್ನು ನೀಡಿದ್ದಾಳಂತೆ. ಇದರಲ್ಲಿ ಇವರ ಒಪ್ಪಿಗೆ ಇಲ್ಲದೇ ಆಕೆ ಮಾಡಿಸಿದ ಡಿಎನ್ಎ ರಿಪೋರ್ಟ್ ಇತ್ತಂತೆ. ಯಾವುದನ್ನೂ ಈ ದಂಪತಿ ಮರೆಯಬೇಕು ಎಂದುಕೊಂಡಿದ್ದರೂ ಅದನ್ನು ಅತ್ತೆ 17 ವರ್ಷಗಳ ಬಳಿಕ ಮತ್ತೆ ನೆನಪು ಮಾಡಿದ್ದಾಳಂತೆ. ಮಹಿಳೆಯ 17 ವರ್ಷದ ಮಗಳ ಮೇಲೆ ಡಿಎನ್ಎ ಪರೀಕ್ಷೆ ಮಾಡಿಸಿ ಆ ಹುಡುಗಿಗೂ ತನ್ನ ಮಗನಿಗೂ ಯಾವುದೇ ರಕ್ತಸಂಬಂಧವಿಲ್ಲ ಎಂಬುದನ್ನು ಅತ್ತೆ ಸಾಬೀತುಪಡಿಸಿದ್ದಳಂತೆ.
ಅಷ್ಟಕ್ಕೂ ನಡೆದಿದ್ದೇನು?
ಮಹಿಳೆ ತನ್ನ ಪೋಸ್ಟ್ನಲ್ಲಿ ಮಗಳ ಹುಟ್ಟಿನ ಹಿಂದಿನ ಸತ್ಯವನ್ನು ಕೂಡ ಬಹಿರಂಗಪಡಿಸಿದ್ದಾಳೆ.ಮನೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಘಟನೆಯೊಂದು ನಡೆದಿತ್ತಂತೆ. ಈ ಘಟನೆಯ ನಂತರ ಆಕೆ ಗರ್ಭಿಣಿಯಾಗಿದ್ದಾಳಂತೆ. ಆದರೆ ಆ ಸಮಯದಲ್ಲಿ, ಆಕೆ ಮತ್ತು ಆಕೆಯ ಪತಿ ಮಗುವಿಗಾಗಿ ಪ್ರಯತ್ನಿಸುತ್ತಿದ್ದರಿಂದ ಆ ಮಗು ಅವನದೋ ಅಥವಾ ಅತ್ಯಾಚಾರದ ಪರಿಣಾಮವೋ ಎಂದು ತಿಳಿಯಲು ಸಾಧ್ಯವಾಗಲಿಲ್ಲವಂತೆ. ಆಕೆ ಈ ವಿಷಯದ ಕುರಿತು ತನ್ನ ಗಂಡನ ಬಳಿ ಹೇಳಿ ಡಿಎನ್ಎ ಪರೀಕ್ಷೆ ಮಾಡಿಸುವುದರ ಬಗ್ಗೆ ಕೂಡ ತಿಳಿಸಿದ್ದಳಂತೆ. ಆದರೆ ಅವನು ಅವಳನ್ನು ಪ್ರೀತಿಸುತ್ತಿದ್ದರಿಂದ ಅದರ ಅಗತ್ಯವಿಲ್ಲ ಮತ್ತು ಮಗುವನ್ನು ತನ್ನ ಸ್ವಂತ ಮಗು ಎಂದು ಪ್ರೀತಿಸುತ್ತೇನೆ ಎಂದು ಹೇಳಿ ಡಿಎನ್ಎ ಪರೀಕ್ಷೆ ನಡೆಸುವುದನ್ನು ನಿರಾಕರಿಸಿದ್ದನಂತೆ.
ಹಾಗಾಗಿ ದಂಪತಿ ಹಿಂದಿನದನ್ನು ಮರೆತು ಸಂತೋಷವಾಗಿದ್ದರಂತೆ. ಆದರೆ ಆ ಮಹಿಳೆಯ ಅತ್ತೆ ಮಾತ್ರ ಎಂದಿಗೂ ಅದನ್ನು ಮರೆಯಲಿಲ್ಲವಂತೆ. ಮಗು ತನ್ನ ಮಗನನ್ನು ಹೋಲುತ್ತಿಲ್ಲ ಎಂದು ಅವಳು ಅನುಮಾನಪಟ್ಟು, ಯಾರಿಗೂ ಹೇಳದೆ, ಅವಳು ಡಿಎನ್ಎ ಪರೀಕ್ಷೆ ಮಾಡಿಸುವ ನಿರ್ಧಾರ ಮಾಡಿ ಕುಟುಂಬದ ನೆಮ್ಮದಿಯನ್ನು ಕೆಡಿಸಿದ್ದಳಂತೆ.
ಮಹಿಳೆ ತನ್ನ ಹದಿಹರೆಯದ ಮಗಳಿಗೆ ಆಕೆ ಅತ್ಯಾಚಾರದಿಂದ ಹುಟ್ಟಿರುವುದಾಗಿ ಹೇಳಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾಳೆ.ಆಕೆಯ ಪತಿ ತನ್ನ ಸ್ವಂತ ಮಗಳಲ್ಲಿದಿದ್ದರೂ ಆಕೆಯನ್ನೂ ಮಗಳಂತೆ ಕಾಳಜಿ, ಪ್ರೀತಿ ತೋರಿಸುವುದಾಗಿ ಹೇಳಿದ್ದಾನಂತೆ.
ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಈ ಘಟನೆಯ ಬಗ್ಗೆ ನೆಟ್ಟಿಗರು ಆಕೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಜ್ಜಿಯ ಕೃತ್ಯವನ್ನು ಹಲವರು ಖಂಡಿಸಿದ್ದಾರೆ. ಇತರರು ತಂದೆಯ ಕಾಳಜಿಯನ್ನು ಹೊಗಳಿದ್ದಾರೆ