ದೀಪಾವಳಿ ಮಾರ್ಗಸೂಚಿ: ನಿಯಮ ಉಲ್ಲಂಘಿಸಿದರೆ ಪರಿಸರ ಕಾಯಿದೆಯಡಿ ಮೊಕದ್ದಮೆ

ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಪರಿಸರ ಸ್ನೇಹಿ ಆಚರಣೆಗೆ ಒತ್ತು ನೀಡುವ ಸಲುವಾಗಿ, ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಮಂಡಳಿಯ ಆದೇಶದ ಪ್ರಕಾರ, ರಾಜ್ಯದ ಯಾವುದೇ ಭಾಗದಲ್ಲಿ ರಾತ್ರಿ 10 ಗಂಟೆಯ ನಂತರ ಪಟಾಕಿ ಸಿಡಿಸುವಂತಿಲ್ಲ. ಇದಲ್ಲದೆ, ಅಧಿಕ ಹೊಗೆ ಹಾಗೂ ನಿಗದಿತ ಡೆಸಿಬಲ್ ಮಟ್ಟಕ್ಕಿಂತ ಹೆಚ್ಚು ಶಬ್ದ ಮಾಡುವ ಎಲ್ಲ ಬಗೆಯ ಪಟಾಕಿಗಳನ್ನೂ ನಿಷೇಧಿಸಲಾಗಿದೆ. ನಿಗದಿತ ಅವಧಿಯೊಳಗೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಸಿಡಿಸಿ ಪರಿಸರ ಸಂರಕ್ಷಣೆಗೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಈ ಎರಡು ದಿನ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ
ಅಕ್ಟೋಬರ್ 21 ಮತ್ತು 22 ರಂದು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಎಚ್ಚರಿಕೆ ನೀಡಿದೆ
ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ನಿಷೇಧಿತ ಪಟಾಕಿಗಳನ್ನು ಮಾರಾಟ ಮಾಡುವವರು ಮತ್ತು ಕಾನೂನುಬಾಹಿರವಾಗಿ ಸಂಗ್ರಹಿಸಿಡುವವರ ವಿರುದ್ಧ ಪರಿಸರ ಸಂರಕ್ಷಣಾ ಕಾಯಿದೆಯ ಅಡಿಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಮಂಡಳಿಯ ಅಧಿಕಾರಿ ಯಶಸ್, “ನಿಷೇಧಿತ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಸಂಗ್ರಹಣೆಯನ್ನು ತಡೆಯಲು ಅಕ್ಟೋಬರ್ ತಿಂಗಳ ಆರಂಭದಲ್ಲೇ ವಿವಿಧ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಮೊಕದ್ದಮೆ ದಾಖಲಿಸಲಾಗುವುದು,” ಎಂದು ತಿಳಿಸಿದ್ದಾರೆ.
ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಸಿರು ಪಟಾಕಿಯ ಮಹತ್ವ ಮತ್ತು ಪಟಾಕಿ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹಬ್ಬದ ಸಂದರ್ಭದಲ್ಲಿ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುವುದು ಈ ಕ್ರಮಗಳ ಮುಖ್ಯ ಉದ್ದೇಶವಾಗಿದೆ.
ಕ್ರಮ ಕೈಗೊಳ್ಳಲು ಅಧಿಕಾರ
ಪಟಾಕಿ ಸಂಗ್ರಹ ಮತ್ತು ಮಾರಾಟ ನಿಷೇಧಿಸಲು ಹಾಗೂ ಕ್ರಮ ಕೈಗೊಳ್ಳಲು ನಗರಪಾಲಿಕೆಗಳು, ಸ್ಥಳೀಯ ಸಂಸ್ಥೆಗಳ ಆಯುಕ್ತರು, ಡಿಸಿಗಳು, ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ಆಯುಕ್ತರು, ಸಾರಿಗೆ ಆಯುಕ್ತರು, ವಾಣಿಜ್ಯ, ಪಶುಸಂಗೋಪನೆ, ಶಿಕ್ಷಣ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು, ಅಗ್ನಿಶಾಮಕ ಮಹಾ ನಿರ್ದೇಶಕರಿಗೆ ಅಧಿಕಾರವನ್ನು ನೀಡಲಾಗಿದೆ.
ಏನಿದು ಹಸಿರು ಪಟಾಕಿ?
ಹಸಿರು ಪಟಾಕಿ ಎಂದರೆ, ಅದರ ಹೊರಭಾಗಕ್ಕೆ ಸುತ್ತಿದ ಹಾಳೆ ಹಸಿರಾಗಿರುತ್ತದೆ ಎಂದರ್ಥವಲ್ಲ. ಸಾಂಪ್ರದಾಯಿಕ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ವಾಯು ಮತ್ತು ಶಬ್ದ ಮಾಲಿನ್ಯವನ್ನು ಉಂಟುಮಾಡುವ ಪರಿಸರ ಸ್ನೇಹಿ ಪಟಾಕಿಗಳಿವು, ಇವುಗಳನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಹಾಗೂ ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (ಎನ್‌ಇಇಆರ್‌ಐ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.
ಇವು ಸಾಂಪ್ರದಾಯಿಕ ಪಟಾಕಿಗಳಿಗಿಂತ ಸುಮಾರು ಶೇ. 30- 40ರಷ್ಟು ಕಡಿಮೆ ವಾಯು ಮಾಲಿನ್ಯವನ್ನು ಉಂಟುಮಾಡುತ್ತವೆ. ಹಸಿರು ಪಟಾಕಿಗಳಲ್ಲಿ ಲೀಥಿಯಂ, ಆರ್ಸೆನಿಕ್, ಬೇರಿಯಂ ನೈಟ್ರೇಟ್ ಮತ್ತು ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದಿಲ್ಲ.
ಸಾಮಾನ್ಯ ಪಟಾಕಿಗಳು ಸುಮಾರು 160 ಡೆಸಿಬಲ್ ಶಬ್ದ ಮಾಡಿದರೆ, ಹಸಿರು ಪಟಾಕಿಗಳು 110 ರಿಂದ 125 ಡೆಸಿಬಲ್‌ಗಳಷ್ಟು ಕಡಿಮೆ ಶಬ್ದವನ್ನು ಉಂಟುಮಾಡುತ್ತವೆ. ಅಲ್ಲದೆ ಇವು ಸಿಡಿದಾಗ ಅಧಿಕ ಹೊಗೆಯನ್ನು ಸೂಸುವ ಬದಲು ನೀರಿನ ಆವಿಯನ್ನು ಬಿಡುಗಡೆ ಮಾಡುತ್ತವೆ. ಇದು ಧೂಳಿನ ಕಣಗಳನ್ನು ಹೀರಿಕೊಳ್ಳಲು ಸಹಾಯವನ್ನೂ ಮಾಡುತ್ತದೆ.