5 ವರ್ಷಗಳ ನಂತರ ಭಾರತ-ಚೀನಾ ನೇರ ವಿಮಾನ ಸೇವೆ ಆರಂಭ; ಇಂಡಿಗೋದಿಂದ ಕೋಲ್ಕತ್ತಾ-ಗುವಾಂಗ್ಝೌ ಹಾರಾಟ

ನವದೆಹಲಿ: ಭಾರತ (India) ಮತ್ತು ಚೀನಾ (China) ಮಧ್ಯೆ 5 ವರ್ಷದ ಬಳಿಕ ನೇರ ವಿಮಾನ (Direct Flights) ಸೇವೆ ಆರಂಭಗೊಂಡಿದೆ. ಕೋಲ್ಕತ್ತಾ-ಗುವಾಂಗ್ಝೌ ನಡುವಿನ ಇಂಡಿಗೋ (Indigo) ವಿಮಾನ ಭಾನುವಾರ ರಾತ್ರಿ 10 ಗಂಟೆಗೆ ಟೇಕಾಫ್ ಆಗಿದೆ.

ಶಾಂಘೈನಿಂದ ನವದೆಹಲಿಗೆ ವಿಮಾನಗಳು ನವೆಂಬರ್ 9 ರಿಂದ ಪುನರಾರಂಭಗೊಳ್ಳಲಿವೆ. ವಾರಕ್ಕೆ ಮೂರು ದಿನ ಈ ವಿಮಾನ ಸಂಚಾರ ಇರಲಿದೆ. ದೆಹಲಿಯಿಂದ ಗುವಾಂಗ್ಝೌಗೆ ಇಂಡಿಗೋ ವಿಮಾನ ನವೆಂಬರ್ 10 ರಿಂದ ಪ್ರಾರಂಭವಾಗಲಿದೆ.
ನಾಗರಿಕ ವಿಮಾನಯಾನ ಅಧಿಕಾರಿಗಳ ನಡುವಿನ ನಿರಂತರ ಚರ್ಚೆಗಳ ನಂತರ ನೇರ ವಿಮಾನ ಸೇವೆಗಳನ್ನು ಪುನರಾರಂಭಿಸಲು ಭಾರತ ಮತ್ತು ಚೀನಾ ಈ ತಿಂಗಳ ಆರಂಭದಲ್ಲಿ ಒಪ್ಪಿಗೆ ನೀಡಿತ್ತು.
ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping) ನಡುವೆ ನಡೆದ ಮಹತ್ವದ ಸಭೆಯ ಬಳಿಕ ವಿಮಾನ ಹಾರಾಟಕ್ಕೆ ಎರಡೂ ದೇಶಗಳು ಒಪ್ಪಿಗೆ ನೀಡಿವೆ.
ಡೋಕ್ಲಾಮ್ ಘರ್ಷಣೆಯ ಬಳಿಕ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ನಂತರ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಮತ್ತೇ ಆರಂಭಗೊಂಡಿರಲಿಲ್ಲ.