ಬೆಂಗಳೂರಿನಲ್ಲಿ ‘ಡಿಜಿಟಲ್ ಅರೆಸ್ಟ್’ ಹಗರಣ ಬಯಲು: ಸೈಬರ್ ವಂಚನೆಗಾಗಿಯೇ ನಕಲಿ ಬಿಪಿಒ ಸ್ಥಾಪಿಸಿದ್ದ ಖದೀಮರು; ಹೆಚ್ಎಸ್ಆರ್ ಲೇಔಟ್ ಪೊಲೀಸರಿಂದ 16 ಜನರ ಬಂಧನ!

ನೀವು ಬಿಪಿಒಗಳ ಬಗ್ಗೆ ಕೇಳಿರ್ತಿರಾ ಕೆಲವರಿಗೆ ಬಿಪಿಒದಲ್ಲಿ ಕೆಲಸ ಮಾಡಿದ ಅನುಭವವೂ ಇರಬಹುದು. ಹಲವು ಸಂಸ್ಥೆಗಳ ಪ್ರಾಡಕ್ಟ್ಗಳ ಬಗ್ಗೆ ಗ್ರಾಹಕರಿಗೆ ಸೇವೆ ನೀಡುವುದಕ್ಕಾಗಿ ಹಲವು ಬಿಪಿಒ ಸಂಸ್ಥೆಗಳು ಕೆಲಸ ಮಾಡುತ್ತವೆ. ಅದರಲ್ಲಿ ಗ್ರಾಹಕರು ಮಾಡಿದ ಕರೆಗಳಿಗೆ ಮೇಲ್ಗಳಿಗೆ ಅಲ್ಲಿನ ಗ್ರಾಹಕ ಸೇವಾ ಪ್ರತಿನಿಧಿಗಳು ಪ್ರತಿಕ್ರಿಯಿಸಿ ಸಮಸ್ಯೆ ಸರಿಪಡಿಸುತ್ತಾರೆ. ಆದರೆ ಇಲ್ಲೊಂದು ಕಡೆ ಜನರಿಗೆ ವಂಚನೆ ಮಾಡಿ ಸಮಸ್ಯೆ ಸೃಷ್ಟಿಸುವುದಕ್ಕೆಂದೇ ಬಿಪಿಒ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿತ್ತು ಎಂದರೆ ನೀವು ಶಾಕ್ ಆಗೋದು ಪಕ್ಕಾ. ಇಂತಹ ಘಟನೆ ನಡೆದಿರುವುದು ಬೇರೆಲ್ಲೋ ಅಲ್ಲ. ನಮ್ಮ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ನಲ್ಲಿ.

ಸೈಬರ್ ವಂಚನೆಗಾಗಿಯೇ ಬಿಪಿಒ ಸ್ಥಾಪಿಸಿದ ಖದೀಮರು
ಹೌದು ಕಾಲ ಬದಲಾಗುತ್ತಿದ್ದಂತೆ ಆಧುನಿಕತೆ ತಂತ್ರಜ್ಞಾನ ಬೆಳೆಯುತ್ತಿದ್ದಂತೆ ಮೋಸ ಮಾಡುವ ವಿಧಾನ ಬದಲಾಗ್ತಿದೆ. ಜನ ಮೋಸ ಹೋಗುವ ವಿಧಾನವೂ ಬದಲಾಗ್ತಿದೆ. ಹಾಗೆಯೇ ಈಗ ಸಾಕಷ್ಟು ಪ್ರಚಲಿತದಲ್ಲಿರುವ ಸೈಬರ್ ವಂಚನೆಯಾದ ಡಿಜಿಟಲ್ ಆರೆಸ್ಟ್ ಮೂಲಕ ಜನರನ್ನು ಮುಳುಗಿಸಿ ಬದುಕು ಸರ್ವನಾಶ ಮಾಡುವುದಕ್ಕೆ ಇಲ್ಲಿ ನಕಲಿ ಬಿಪಿಒ ವೊಂದನ್ನು ಸ್ಥಾಪಿಸಲಾಗಿತ್ತು ಎಂದರೆ ನೀವೇ ಊಹಿಸಿಕೊಳ್ಳಿ ಇವರೆಂಥಾ ಜನರಿರಬಹುದು ಅಂಥಾ.
ಹೆಚ್ಎಸ್ಆರ್ ಲೇಔಟ್ ಪೊಲೀಸರ ದಾಳಿ: 16 ಉತ್ತರ ಭಾರತೀಯರ ಬಂಧನ
ಈ ಪ್ರಕರಣವನ್ನು ಬೇಧಿಸಿದ ಬೆಂಗಳೂರಿನ ಪೊಲೀಸರು ಈಗ 16 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಗುಜರಾತ್ 4, ಮಹಾರಾಷ್ಟ್ರ 8, ಒರಿಸ್ಸಾ,ಜಾರ್ಖಂಡ್, ಮಧ್ಯಪ್ರದೇಶ ಮೂಲದ ತಲಾ ಒಬ್ಬರು ಸೇರಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿಯೇ ನಡೆದಿದ್ದರೂ ಆರೋಪಿಗಳೆಲ್ಲರೂ ಉತ್ತರ ಭಾರತೀಯರೇ ಆಗಿದ್ದಾರೆ. ಇವರು ಜನರಿಗೆ ಇಂಟರ್ನೆಟ್ ಮೂಲಕ ಕರೆ ಮಾಡಿ, ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದರು. ಅದಕ್ಕೆ ತಕ್ಕಂತೆ ಎಲ್ಲಾ ನಕಲಿ ಡಾಕ್ಯುಮೆಂಟ್ಗಳನ್ನು ನಿಜವಾದುದು ಎಂಬಂತೆ ರೆಡಿ ಮಾಡಿ ಇಟ್ಟುಕೊಳ್ಳುತ್ತಿದ್ದ ಈ ಖದೀಮರು ತಮ್ಮ ಬಲೆಗೆ ಬಿದ್ದ ಜನರನ್ನು ಡಿಜಿಟಲ್ ಅರೆಸ್ಟ್ ಮಾಡಿ, ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದರು.
ಡಿಜಿಟಲ್ ಅರೆಸ್ಟ್ಗೆ ಒಳಗಾದವರಿಂದ ಲಕ್ಷಾಂತರ ರೂ ಪೀಕುತ್ತಿದ್ದ ಖದೀಮರು
ಈ ಡಿಜಿಟಲ್ ಸ್ಕ್ಯಾಮ್ಗಾಗಿಯೇ ಆರೋಪಿಗಳು ಹೆಚ್ಎಸ್ಆರ್ ಲೇಔಟ್ನ 27ನೇ ಮುಖ್ಯರಸ್ತೆಯಲ್ಲಿ ನಕಲಿ ಕಾಲ್ ಸೆಂಟರ್ ಅಥವಾ ಬಿಪಿಒ ಸಂಸ್ಥೆಯೊಂದನ್ನು ಸ್ಥಾಪಿಸಿದ್ದರು. ಅಲ್ಲಿಂದ ಅವರು ಅನುಮಾನ ಬಾರದ ಮುಗ್ಧ ಜನರಿಗೆ ಕರೆ ಮಾಡಿ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಿದ್ದರು. ಒಮ್ಮೆ ಮಿಕ ಬಲೆಗೆ ಬಿತ್ತು ಎಂಬುದು ಅರಿವಾಗುತ್ತಿದ್ದಂತೆ ಅವರನ್ನು ಬ್ಲಾಕ್ಮೇಲ್ ಮಾಡಲು ಶುರು ಮಾಡಿ ಲಕ್ಷಾಂತರ ಮೊತ್ತದ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಳ್ಳುತ್ತಿದ್ದರು. ಮಾನಕ್ಕೆ ಅಂಜಿದ ಜನ ಇಲ್ಲದ ಹಣವನ್ನು ಅವರಿಗೆ ನೀಡುವುದಕ್ಕೆ ಸಾಲವನ್ನು ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್ಟ್ಪೆಕ್ಟರ್ ಹರೀಶ್ ಕುಮಾರ್ ಅವರು ಸ್ವಯಂ ದೂರು ದಾಖಲಿಸಿಕೊಂಡು ಹೆಚ್ಎಸ್ಆರ್ ಲೇಔಟ್ನ ಕಚೇರಿ ಮೇಲೆ ದಾಳಿ ಮಾಡಿ 16 ಆರೋಪಿಗಳನ್ನು ಬಂಧಿಸಿದ್ದಾರೆ. ಅವರಲ್ಲಿ ನಾಲ್ವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ನಕಲಿ ಬಿಪಿಒ ಕಂಪನಿಯಲ್ಲಿತ್ತು 40 ಕಂಪ್ಯೂಟರ್ಗಳು..!
ಆ ನಕಲಿ ಬಿಪಿಒ ಕಚೇರಿಯಲ್ಲಿ 40 ಕಂಪ್ಯೂಟರ್ಗಳು ಹಾಗೂ ಇದಕ್ಕೆ ಸಂಬಂಧಿಸಿದ ಹಲವು ಸಾಧನಗಳಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವನ್ನು ಈಗ ಹೆಚ್ಚಿನ ತನಿಖೆಗಾಗಿ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಈ ವಂಚಕರು ಸುಮಾರು ಎರಡು ವರ್ಷಗಳ ಹಿಂದೆಯೇ ‘ಸೈಬಿಟ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ನಕಲಿ ಸಂಸ್ಥೆಯನ್ನು ಸ್ಥಾಪಿಸಿದ್ದರು. ಕಂಪನಿಯು ಸುಮಾರು 20 ರಿಂದ 25 ಉದ್ಯೋಗಿಗಳೊಂದಿಗೆ ಎರಡು ಮಹಡಿಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅವರು ಕಾನೂನುಬದ್ಧ ಬಿಪಿಒ ಉದ್ಯೋಗಗಳ ನೆಪ ಹೇಳಿ ಆನ್ಲೈನ್ನಲ್ಲಿಯೇ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತಿದ್ದರು. ಹಾಗೂ ತಮ್ಮ ಬಲೆಗೆ ಬಿದ್ದವರನ್ನು ಹೇಗೆ ವಂಚಿಸುವುದು ಎಂದು ಹೇಳಿ ಕೊಡುತ್ತಿದ್ದರು.
ಅಮೆರಿಕಾದ ಪ್ರಜೆಗಳಿಗೆ ವಂಚನೆ
ಈ ವಂಚಕ ಗುಂಪು ಅಮೆರಿಕ ಮತ್ತು ಇತರ ದೇಶಗಳಲ್ಲಿನ ಜನರಿಗೆ ಪೊಲೀಸ್ ಅಧಿಕಾರಿಗಳು ಅಥವಾ ತನಿಖಾ ಸಂಸ್ಥೆಗಳ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುತ್ತಿದ್ದರು. ನಂತರ ಅವರ ಮೇಲೆ ಮಾದಕವಸ್ತು ಕಳ್ಳಸಾಗಣೆ ಅಥವಾ ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳು ಆರೋಪ ಹೊರಿಸಿ ಡಿಜಿಟಲ್ ಬಂಧನಕ್ಕೆ ಬೆದರಿಕೆ ಹಾಕುತ್ತಿದ್ದರು. ನಂತರ ಅವರ ಖಾತೆಯಿಂದ ಡಾಲರ್ ರೂಪದಲ್ಲಿ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿದ್ದರು. ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈ ಕಾರ್ಯಾಚರಣೆ ನಡೆಸಿ ಅಮಾಯಕರ ಬದುಕನ್ನು ಬರ್ಬಾದ್ ಮಾಡ್ತಿದ್ದ ವಂಚಕರನ್ನು ಬಲೆಗೆ ಕೆಡವಿದ್ದಾರೆ. ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.