ಟ್ರಂಪ್‌ಗೆ ಜೀವ ಬೆದರಿಕೆ ಎಚ್ಚರಿಕೆ ನೀಡಿತಾ ಇರಾನ್?

ಪ್ರಸ್ತುತ ಇರಾನ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದೇ ಆದರೂ ಒಳಗಿನ ಕಿಚ್ಚು ಇನ್ನೂ ಆರಿಲ್ಲ. ಸದ್ಯ ಎರಡೂ ದೇಶಗಳ ಮಧ್ಯೆ ಬೂದಿ ಮುಚ್ಚಿದ ಕೆಂಡದಂತಿದೆ ಪರಿಸ್ಥಿತಿ. ಇದಕ್ಕೆ ಇತ್ತೀಚಿನ ಬೆಳವಣಿಗಗಳೇ ಜ್ವಲಂತ ಸಾಕ್ಷಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿಗಳ ಸೊಕ್ಕು ಮತ್ತು ಜಂಭದ ಮಾತುಗಳು ಇರಾನ್‌ನ ಕೆಂಗಣ್ಣಿಗೆ ಗುರಿಯಾಗಿತ್ತು.

ಅಂದಿನಿಂದಲೂ ಇಸ್ರೇಲ್ ಮತ್ತು ಟ್ರಂಪ್ ಮೇಲೆ ಕಣ್ಣಿಟ್ಟಿದ್ದ ಇರಾನ್, ಇದೀಗ ಅಮೆರಿಕ ಅಧ್ಯಕ್ಷರಿಗೆ ಖಡಕ್ ಎಚ್ಚರಿಕೆ ರವಾನಿಸಿದೆ.
ಇತ್ತೀಚೆಗಷ್ಟೇ ಇಸ್ರೇಲ್ ನಡೆಸುತ್ತಿದ್ದ ದಾಳಿಗೆ ಪುಷ್ಠಿ ನೀಡಿದ ಡೊನಾಲ್ಡ್ ಟ್ರಂಪ್ ಮತ್ತು ನೆತನ್ಯಾಹು ವಿರುದ್ಧ ಇರಾನ್‌ನ ಧರ್ಮಗುರು ಫತ್ವಾ ಹೊರಡಿಸಿದ್ದರು. ಇವರಿಬ್ಬರೂ ದೇವರ ಶತ್ರುಗಳು ಎಂದು ಬಣ್ಣಿಸಿದ್ದರು. ಇಸ್ಲಾಮಿಕ್ ಗಣರಾಜ್ಯದ ನಾಯಕತ್ವಕ್ಕೆ ಬೆದರಿಕೆ ಹಾಕುತ್ತಿರುವ ಅಮೆರಿಕ ಮತ್ತು ಇಸ್ರೇಲಿ ನಾಯಕರ ಸಾಮ್ರಾಜ್ಯಗಳನ್ನು ಉರುಳಿಸಲು ಮಕರೆಮ್ ಶಿರಾಜಿ ಒಂದು ಆದೇಶದಲ್ಲಿ ಪ್ರಪಂಚದಾದ್ಯಂತದ ಮುಸ್ಲಿಮರಿಗೆ ಕರೆ ನೀಡಿದ್ದರು. ಇದೀಗ ಇರಾನ್‌ನ ಹಿರಿಯ ಅಧಿಕಾರಿ, ತನ್ನ ನೆಲದಲ್ಲೇ ಟ್ರಂಪ್‌ಗೆ ಜೀವ ಉಳಿಸಿಕೊಳ್ಳುವುದು ಕಷ್ಟವಿದೆ ಎಂದು ಎಚ್ಚರಿಸಿದ್ದಾರೆ.
ಟ್ರಂಪ್ ಇನ್ನು ಮುಂದೆ ತಮ್ಮ ಫ್ಲೋರಿಡಾ ನಿವಾಸವಾದ ಮಾರ್-ಎ-ಲಾಗೊದಲ್ಲಿ ಸುರಕ್ಷಿತವಾಗಿರೋದು ಕಷ್ಟ. ಆಯಾಗಿ ಸ್ನಾನ ಮಾಡುವಾಗ ಬೇಕಾದರೂ ಗುರಿಯಾಗಬಹುದು. ಅಮೆರಿಕ ಅಧ್ಯಕ್ಷ ಮಾಡಿರುವ ತಪ್ಪಿಗೆ ಅವರು ವಿಶ್ರಾಂತಿ ಪಡೆಯುವುದು ಕೂಡ ಅವರ ಸಾವಿಗೆ ಕಾರಣವಾಗಬಹುದು ಎಂದು ಇರಾನ್‌ನ ಹಿರಿಯ ಅಧಿಕಾರಿ ಜಾವದ್ ಲಾರಿಜಾನಿ ಹೇಳಿದ್ದಾರೆ.
ಸೂರ್ಯನ ಬೆಳಕಿನಲ್ಲಿ ಮಲಗಿರುವಾಗ ಸಣ್ಣ ಡ್ರೋನ್ ಕೂಡ ಅಮೆರಿಕ ಅಧ್ಯಕ್ಷರನ್ನು ಹೊಡೆದುರುಳಿಸುವುದು ಸುಲಭ ಎಂದು ಲಾರಿಜಾನಿ ಟ್ರಂಪ್ರನ್ನು ಟೀಕಿಸಿದ್ದಾರೆ. ಈ ಹೇಳಿಕೆ ಇಸ್ರೇಲ್ ಜತೆಗೆ ಟ್ರಂಪ್ ಕೈಜೋಡಿಸಿ, ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯ ಬೆನ್ನಲ್ಲೇ ಮುನ್ನೆಲೆಗೆ ಬಂದಿದೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಟ್ರಂಪ್ ವಿರುದ್ಧ ಸೇಡು ತೀರಿಸಿಕೊಳ್ಳಲು ಇರಾನ್ ಪಣತೊಟ್ಟು ನಿಂತಿರುವುದು ಇಲ್ಲಿ ಸ್ಪಷ್ಟ ಎಂದೇ ಹೇಳಬಹುದು.
