Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಂಪ್ ಭೇಟಿಯಿಂದ ಬಿಜೆಪಿ ಯುವ ಸಂಸದನಿಗೆ ಆಯ್ತಾ ಮುಖಭಂಗ?

Spread the love

ಇತ್ತೀಚೆಗೆ ಭಾರತೀಯ ಸಂಸದರ ನೇತೃತ್ವದಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ನಿಯೋಗದಲ್ಲಿದ್ದ, ಯುವ ಬಿಜೆಪಿ ಸಂಸದರೊಬ್ಬರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ ತೀವ್ರ ಮುಜುಗರಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ
ಈ ಘಟನೆಗೆ ಸಂಬಂಧಿಸಿದಂತೆ ಪಕ್ಷದ ನಾಯಕತ್ವವು ಸಂಸದರನ್ನು ದಿಲ್ಲಿಗೆ ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು ‘ಪಾರ್ಲಿಮೆಂಟರಿಯನ್’ ವೆಬ್‌ಸೈಟ್ ನ ಸಂಪಾದಕ ಹಾಗು ಹಿರಿಯ ಪತ್ರಕರ್ತ ತ್ರಿದಿಬ್ ರಮಣ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದಾರೆ.

ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯಿಂದಾಗಿ, ಭಾರತೀಯ ನಿಯೋಗನಲ್ಲಿದ್ದ ಯುವ ಬಿಜೆಪಿ ಸಂಸದರು ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ” ಎಂದು ವರದಿ ಹೇಳಿದೆ.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯಿಂದ ಇರುವ ಬೆದರಿಕೆಗಳ ಬಗ್ಗೆ ಜಾಗತಿಕ ಗಮನ ಸೆಳೆಯಲು ಭಾರತ ಕಳಿಸಿದ್ದ ಸಂಸದೀಯ ನಿಯೋಗದಲ್ಲಿದ್ದ ಈ ಯುವ ಬಿಜೆಪಿ ಸಂಸದ ಅನಗತ್ಯ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ ಎಂದು ಈಗ ಚರ್ಚೆಯಾಗುತ್ತಿದೆ.

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ನಿಯೋಗದ ಸಂಸದರೊಬ್ಬರ ಜೊತೆ ಈ ಘಟನೆ ನಡೆದಿದೆ ಎಂದು ವರದಿ ಹೇಳಿದೆ. ‘ಪಾರ್ಲಿಮೆಂಟರಿಯನ್’ ವೆಬ್ ಸೈಟ್ ಪ್ರಕಾರ, ನಿಯೋಗದಲ್ಲಿದ್ದ ಯುವ ಬಿಜೆಪಿ ಸಂಸದರೊಬ್ಬರು, ಸಹೋದ್ಯೋಗಿ ಹಾಗು ಶಿವಸೇನೆಯ ಸಂಸದ ಮಿಲಿಂದ್ ದೇವ್ರಾರವರು ಡೊನಾಲ್ಡ್ ಟ್ರಂಪ್ ಜೂನಿಯರ್ ಅವರೊಂದಿಗೆ ಯಶಸ್ವಿ ಭೇಟಿ ಮಾಡಿದ್ದನ್ನು ತಿಳಿದು ಸ್ವಲ್ಪ ಇರಿಸು ಮುರುಸಿಗೆ ಒಳಗಾಗಿದ್ದರು. ತಾನೇನು ಕಡಿಮೆಯಲ್ಲ ಎಂದು ತೋರಿಸಿಕೊಳ್ಳಲು ಬಯಸಿದ ಯುವ ಬಿಜೆಪಿ ಸಂಸದರು, ಟ್ರಂಪ್ ಜೂನಿಯರ್ ಅವರೊಂದಿಗೆ ಇದೇ ರೀತಿಯ ಭೇಟಿ ಏರ್ಪಡಿಸಲು ಸ್ವತಂತ್ರ ಪ್ರಯತ್ನಗಳನ್ನು ಮಾಡಿದರು, ಆದರೆ ವಿಫಲರಾದರು. ಇಂತಹ ಸಂಪರ್ಕವನ್ನು ಪಡೆಯಲು ಸಾಧ್ಯವಾಗದಿದ್ದರಿಂದ ಹತಾಶೆಗೊಂಡ ಸಂಸದರು, “ಈಗ ನಾನು ಜೂನಿಯರ್ ಟ್ರಂಪ್ ಅನ್ನಲ್ಲ, ನೇರವಾಗಿ ಡೊನಾಲ್ಡ್ ಟ್ರಂಪ್ ಅವರನ್ನೇ ಭೇಟಿಯಾಗುತ್ತೇನೆ” ಎಂದು ಸಹೋದ್ಯೋಗಿಗಳಲ್ಲಿ ಹೇಳಿ ಬಿಟ್ಟರು ಎಂದು ವರದಿಯಾಗಿದೆ.

ಆಮೇಲೆ ಮಿಲಿಂದ್ ದೇವ್ರಾ ಅವರನ್ನು ಮೀರಿಸಲು ಡೊನಾಲ್ಡ್ ಟ್ರಂಪ್ ಅವರೊಂದಿಗೇ ಭೇಟಿ ಮಾಡಲು ಪ್ರಯತ್ನಿಸಿದ್ದಾರೆ. ಅಮೆರಿಕ ಮೂಲದ, “ನಿಗೂಢ ನಡತೆಯ ವ್ಯಕ್ತಿ” ಎಂದು ‘ಪಾರ್ಲಿಮೆಂಟರಿಯನ್’ ವರದಿಯಲ್ಲಿ ವಿವರಿಸಲಾದ ದೀರ್ಘಕಾಲದ ಪರಿಚಯಸ್ಥರೊಬ್ಬರ ಸಹಾಯದಿಂದ, ಯುವ ಸಂಸದರು ಫ್ಲೋರಿಡಾದಲ್ಲಿನ ಟ್ರಂಪ್ ಅವರ ಖಾಸಗಿ ಎಸ್ಟೇಟ್ ಮಾರ್-ಎ-ಲಾಗೊಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾದರು. ಸಾವಿರಾರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ 126 ಕೊಠಡಿಗಳ ಭವ್ಯವಾದ ಮಹಲು, ವಿಶೇಷ ಖಾಸಗಿ ಕ್ಲಬ್ ಆಗಿ ಮಾರ್ಪಟ್ಟಿರುವ ಟ್ರಂಪ್ ಅವರ ಮಾರ್-ಎ-ಲಾಗೊ, ಈ ಹಿಂದೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಉನ್ನತ ಮಟ್ಟದ ನಾಯಕರಿಗೆ ಆತಿಥ್ಯ ವಹಿಸಿತ್ತು. ವರದಿಯ ಪ್ರಕಾರ ಅಲ್ಲಿಗೆ ಈ ಯುವ ಸಂಸದರು ತಲುಪಿಯೇ ಬಿಟ್ಟರು.

ಈ ಯುವ ಭಾರತೀಯ ಸಂಸದರನ್ನು “ದೇಶದ ಮುಖ್ಯಸ್ಥರಿಗೆ ಅತ್ಯಂತ ಆಪ್ತರು” ಎಂದು ಟ್ರಂಪ್ ಗೆ ಪರಿಚಯಿಸಲಾಗಿತ್ತು. ಆದರೆ ಅದರಿಂದ ಟ್ರಂಪ್ ಗೇನೂ ವ್ಯತ್ಯಾಸವಾಗಲಿಲ್ಲ. ‘ಪಾರ್ಲಿಮೆಂಟರಿಯನ್’ ವರದಿಯ ಪ್ರಕಾರ, ತಮ್ಮನ್ನು ಭೇಟಿ ಮಾಡಿದ ಯುವ ಬಿಜೆಪಿ ಸಂಸದರಿಗೆ ಟ್ರಂಪ್ ಅವರ ಪ್ರತಿಕ್ರಿಯೆ ಸೌಹಾರ್ದಯುತವಾಗಿರತಮ್ಮ ಎಂದಿನ ಉಡಾಫೆ ರೀತಿಯಲ್ಲೇ , ಟ್ರಂಪ್ ಅವರು ಭಾರತೀಯ ಸಂಸದರ ಜೊತೆಗಿನ ಭೇಟಿಯಲ್ಲಿ ಅಸಡ್ಡೆ ಮತ್ತು ಅವಮಾನಕರ ಹೇಳಿಕೆಗಳನ್ನು ನೀಡಿದ್ದು, ಯುವ ಸಂಸದರು ಇದರಿಂದ ಸ್ಪಷ್ಟವಾಗಿ ಅವಮಾನಕ್ಕೊಳಗಾಗಿದ್ದರು.

ಈ ಘಟನೆಯಿಂದ ಸಂಸದರು ತೀವ್ರ ಮುಜುಗರಕ್ಕೊಳಗಾಗಿ ಹೊರನಡೆದರು ಎಂದು ವರದಿ ವಿವರಿಸಿದೆ. ಈ ಘಟನೆಯನ್ನು ಯುವ ಸಂಸದರು ಸಾರ್ವಜನಿಕವಾಗಿ ಹೇಳಿಕೊಳ್ಳದಿದ್ದರೂ, ಶೀಘ್ರವೇ ದಿಲ್ಲಿಯ ಹಿರಿಯ ಬಿಜೆಪಿ ನಾಯಕರಿಗೆ ವಿಷಯ ತಲುಪಿತು. ಮೂಲಗಳನ್ನು ಉಲ್ಲೇಖಿಸಿ ‘ಪಾರ್ಲಿಮೆಂಟರಿಯನ್’ ವರದಿ ಮಾಡಿದಂತೆ, ಪಕ್ಷದ ನಾಯಕತ್ವವು ಇದರಿಂದ ಕೆಂಡಾಮಂಡಲವಾಗಿ, ಯುವ ಸಂಸದರನ್ನು ಕರೆಯಿಸಿ ಮೂವರು ಹಿರಿಯ ನಾಯಕರ ಮುಂದೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

ಒಂದು ಹಂತದಲ್ಲಿ, ಪಕ್ಷದಿಂದ ಉಚ್ಚಾಟಿಸುವುದನ್ನೂ ಪರಿಗಣಿಸಲಾಗಿತ್ತು, ಆದರೆ ಸಂಸದರು ಹಲವಾರು ಬಾರಿ ಕ್ಷಮೆ ಕೋರಿ, ಮನವಿ ಮಾಡಿಕೊಂಡ ನಂತರ ಅವರನ್ನು ಕಳಿಸಿಬಿಡಲಾಯಿತು.

ಹಲವರು ಈ ವರದಿಯ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್ ನ ನ್ಯಾಯವಾದಿ ಸಂಜಯ್ ಹೆಗ್ಡೆಯವರು “ಟ್ರಂಪ್‌ಜಿ ಏನು ಹೇಳಿದರು ಎಂದು ನನಗೆ ಆಶ್ಚರ್ಯವಾಗಿದೆ” ಎಂದು ಬರೆದಿದ್ದಾರೆ.

ಮಾಜಿ ಕೇಂದ್ರ ಸಚಿವ ಬಿ ಶಂಕರಾನಂದ ಅವರ ಮೊಮ್ಮಗಳು ರೋಹಿಣಿ ಆನಂದ್ ಅವರು , “ಈ ಬಿಜೆಪಿ ಸಂಸದರು ಅಮೆರಿಕದಲ್ಲಿ ಟ್ರಂಪ್ ಅವರನ್ನು ಭೇಟಿಯಾಗಿ, ಅವರಿಂದ ‘ಬೆಲ್ಟ್’ ಚಿಕಿತ್ಸೆ ಪಡೆದು, ತುಂಬಾ ಮುಜುಗರಕ್ಕೊಳಗಾಗಿ ಯಾರಿಗೂ ಹೇಳಲಿಲ್ಲ. ಯಾರೆಂದು ಊಹಿಸಿ? ಸುಳಿವು: ತುರ್ತು ನಿರ್ಗಮನ ತಜ್ಞ” ಎಂದು ಪೋಸ್ಟ್ ಮಾಡಿದ್ದಾರೆ.
ವಿರಾಟ್ ಹಿಂದೂ ಸಂಗಮ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂದು ಎಕ್ಸ್‌ ನಲ್ಲಿ ಪರಿಚಯ ಹೇಳಿರುವ ಜಗದೀಶ್ ಶೆಟ್ಟಿ ಎಂಬವರು ಪಾರ್ಲಿಮೆಂಟೇರಿಯನ್ ವೆಬ್ ಸೈಟ್ ನ ಸುದ್ದಿಯನ್ನು ಎಕ್ಸ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆಲ್ಟ್ ನ್ಯೂಸ್ ನ ಸಹ ಸ್ಥಾಪಕ ಮೊಹಮ್ಮದ್ ಝುಬೇರ್ ಅವರು The young MP ಎಂದು ಬರೆದು ಇದೇ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.

ಇಲ್ಲಿಯವರೆಗೆ, ಈ ಘಟನೆಗೆ ಸಂಬಂಧಿಸಿದಂತೆ ಭಾರತ ಸರಕಾರ, ಭಾರತೀಯ ಜನತಾ ಪಕ್ಷ ಅಥವಾ ಯಾವುದೇ ಸಂಸದರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.


Spread the love
Share:

administrator

Leave a Reply

Your email address will not be published. Required fields are marked *