Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಧಾರವಾಡ: ರೈತರಿಗೆ ಕಡಿಮೆ ವೆಚ್ಚದ ಕೃಷಿ ತಂತ್ರಜ್ಞಾನ-ಸಾಧನಗಳ ಪರಿಚಯ

Spread the love

ಧಾರವಾಡ: ಕೃಷಿಯಲ್ಲಿ ಆಳು ಸಿಗದೆ ಕಂಗಾಲಾಗಿರುವ ರೈತರಿಗೆ ಕೃಷಿ ನಿರ್ವಹಣೆಗೆ ಕಡಿಮೆ ಖರ್ಚಿನಲ್ಲಿ ಸುಲಭ ಮಾರ್ಗೋಪಾಯ, ಸಾಧನಗಳೊಂದಿಗೆ ನೂತನ ತಂತ್ರಜ್ಞಾನಗಳ ಅನಾವರಣ. ಇದರೊಂದಿಗೆ ಈ ಸಲ ಬೆಳೆಗಳಿಗೆ ತೀವ್ರ ಬಾಧಿಸಿರುವ ಕೀಟ-ರೋಗ ಬಾಧೆಗಳ ನಿರ್ವಹಣೆಯ ವಿಧಾನ, ಕ್ರಮಗಳ ಸಮಗ್ರ ಚಿತ್ರಣ..!

ಇದು ಕೃಷಿ ಮೇಳದ ಮುಖ್ಯ ವೇದಿಕೆ ಪಕ್ಕದಲ್ಲಿಯೇ ಇರುವ ಕೃಷಿ ವಿವಿ ಧಾರವಾಡದ ಕೃಷಿ ಮಹಾವಿದ್ಯಾಲಯದ 50 ವಿದ್ಯಾರ್ಥಿಗಳ ತಂಡದ ನಿರ್ವಹಣೆಯ ಮಳಿಗೆಯೊಂದರಲ್ಲಿ ರೈತರಿಗೆ ಸಿಗುತ್ತಿರುವ ಸಮಗ್ರ ಮಾಹಿತಿ. ಈ ಮಳಿಗೆಯತ್ತ ಬರುತ್ತಿರುವ ರೈತರಿಗೆ ವಿದ್ಯಾರ್ಥಿಗಳೇ ಇಲ್ಲಿ ಕೃಷಿಯಲ್ಲಿನ ಸಮಸ್ಯೆಗಳಿಗೆ ಮಾರ್ಗೋಪಾಯ, ಆವಿಷ್ಕರಿಸುವ ನೂತನ 12 ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಸಣ್ಣ ಹಿಡುವಳಿದಾರರಿಗೆ ಅನುಕೂಲ ಆಗುವಂತಹ, ಆಳಿನ ಕೊರತೆ ನೀಗುವಂತಹ ನೂತನ ಸಾಧನಗಳನ್ನು ಇಲ್ಲಿ ಪ್ರಚುರಪಡಿಸಲಾಗಿದೆ. ಕೈ ಚಾಲಿತ ಎಡೆಕುಂಟೆ ಮಾದರಿಯ ಬೀಜ ಮತ್ತು ಗೊಬ್ಬರ ಹಾಕುವ ಸಾಧನ, ಬಹುಪಯೋಗಿ ಬಿತ್ತನೆ ಹಾಗೂ ಕಳೆನಾಶಕ ಸಿಂಪರಣೆ ಮಾಡುವ ಸಾಧನ, ಬಾಳೆ ಇಳುವರಿ ಹೆಚ್ಚಿಸಲು ಬಾಳೆಮರಿಗಳನ್ನು ತೆಗೆಯುವ ಸುಲಭ ಸಾಧನ ಗಮನ ಸೆಳೆದಿವೆ.

ನೂತನ ಸಾಧನಗಳಿವು: ಕೃಷಿಯಲ್ಲಿ ಯಂತ್ರೋಪಕರಣ ಭರಾಟೆ ಹೆಚ್ಚಿದಂತೆ ಸರಿಯಾದ ಸಮಯಕ್ಕೆ ಎತ್ತುಗಳ ಲಭ್ಯತೆ ಇಲ್ಲದಂತಾಗಿದ್ದು, ಸಣ್ಣ ಹಿಡುವಳಿದಾರರು ಬಿತ್ತನೆ ಸಮಯದಲ್ಲಿ ತೊಂದರೆ ಅನುಭವಿಸುವುದು ಸಾಮಾನ್ಯ ಆಗಿಬಿಟ್ಟಿದೆ. ಇನ್ನು ಟ್ರ್ಯಾಕ್ಟರ್‌ ಬಳಕೆ ಮಾಡಿದರೆ ಹೆಚ್ಚಿನ ಖರ್ಚಿನೊಂದಿಗೆ ಮಣ್ಣು ಸಂಕುಚಿತವಾಗಲಿದೆ. ಹೀಗಾಗಿ ಸಣ್ಣ ಹಿಡುವಳಿದಾರರಿಗಾಗಿಯೇ ಬೀಜ ಮತ್ತು ಗೊಬ್ಬರ ಬಿತ್ತುವಂತಹ ಕೈ ಚಾಲಿತ ಎಡೆಕುಂಟೆ ಮಾದರಿಯ ಬೀಜ ಮತ್ತು ಗೊಬ್ಬರ ಹಾಕುವ ಸಾಧನ ತಯಾರಿಸಿ ಪ್ರದರ್ಶಿಸಲಾಗಿದೆ. ಇದರಿಂದ ಜೋಳ, ಗೋವಿನಜೋಳ, ಉದ್ದು, ಹೆಸರು, ಶೇಂಗಾ ಮತ್ತು ಸೋಯಾಬಿನ್‌ ಬೀಜಗಳನ್ನು ಬಿತ್ತಬಹುದಾಗಿದೆ. ಈ ಸಾಧನವನ್ನು ಮನೆಯಲ್ಲಿಯೇ ಕಡಿಮೆ ಖರ್ಚಿನಲ್ಲಿ (2500 ರೂ. ಒಳಗೆ) ತಯಾರಿಸಬಹುದಾಗಿದೆ. ಇದು ಅಂತರ ಬೆಳೆಯಲ್ಲಿ ಬಿತ್ತನೆಗೆ ಸಹಕಾರಿ ಆಗಲಿದ್ದು, ಇದರಿಂದ ಎಡೆ ಹೊಡೆಯುವ ಕಾರ್ಯವನ್ನೂ ಮಾಡಬಹುದು.

ಬಹುಉಪಯೋಗಿ ಬಿತ್ತನೆ ಹಾಗೂ ಕಳೆನಾಶಕ ಸಿಂಪರಣೆ ಮಾಡುವ ಸಾಧನದಿಂದ ಸಮಯ ಉಳಿತಾಯ ಹಾಗೂ ಆಳುಗಳ ಕೊರತೆ ನೀಗಿಸಬಹುದಾಗಿದೆ. ಇದಲ್ಲದೇ ಇಂಧನದ ಉಳಿತಾಯ ಕಾಣಲಿದೆ. ಪ್ರಚಲಿತ ಇರುವ ಬಿತ್ತನೆಯ ಕೂರಿಗೆಯ ಕಾರ್ಯದ ಜತೆಗೆ ಅದರ ಹಿಂಬದಿಯಲ್ಲಿ ಬಿತ್ತನೆಯ ನಂತರ-ಪೂರ್ವ ಕಳೆನಾಶಕ ಸಿಂಪರಣೆ ಮಾಡುವ ಕಾರ್ಯವನ್ನು ಈ ಸಾಧನ ಮಾಡಲಿದೆ. ಇದರಿಂದ ಖುರ್ಚು ಕಡಿಮೆ ಮಾಡಬಹುದಲ್ಲದೇ ಒಟ್ಟಿಗೆ ಎರಡೂ ಕಾರ್ಯ ಮಾಡಬಹುದಾಗಿದೆ. ಅದೇ ರೀತಿ ಬಾಳೆಗಿಡದಲ್ಲಿ ಬಾಳೆಮರಿಯ(ಕಂದುಗಳ) ಅನಿಯಂತ್ರಿತ ಮತ್ತು ಬೇಡವಾದ ಬೆಳವಣಿಗೆಯಿಂದಾಗಿ ಇಳುವರಿ ಕಡಿಮೆ ಆಗುತ್ತದೆ. ಹೀಗಾಗಿ ಬಾಳೆಮರಿಗಳನ್ನು ತೆಗೆಯುವುದರ ಜತೆಗೆ ಅದು ಮತ್ತೆ ಚಿಗುರುವುದನ್ನು ತಪ್ಪಿಸಲು ಒಂದು ಹೊಸ ಸಾಧನ ಪ್ರಸ್ತುತಪಡಿಸಲಾಗಿದೆ. ಇದರಿಂದ ಶೇ.10-15 ಕೂಲಿ ವೆಚ್ಚ ಉಳಿಸಬಹುದು.

ಕೀಟ-ರೋಗ ಬಾಧೆ ನಿರ್ವಹಣೆಗೆ ಆದ್ಯತೆ
ಮುಂಗಾರು ಬೆಳೆಗಳಲ್ಲಿ ಈ ಸಲವಂತೂ ತೀವ್ರವಾಗಿ ಕೀಟ-ರೋಗಗಳು ಬಾಧಿಸಿದ್ದು, ಇಳುವರಿಗೆ ನೇರ ಹೊಡೆತ ನೀಡಿವೆ. ಹೀಗಾಗಿ ಮೇಳದಲ್ಲಿ ಬೆಳೆಗಳಲ್ಲಿ ಕೀಟ-ರೋಗ ನಿರ್ವಹಣೆಗಳಿಗೆ ಆದ್ಯತೆ ಕೊಟ್ಟು, ಅವುಗಳ ಬಗ್ಗೆಯೇ ರೈತರಿಗೆ ಮಾಹಿತಿ ನೀಡುವ ಕೆಲಸ ಸಾಗಿದೆ. ಈ ಸಲ ಮಹಾರಾಷ್ಟ್ರದಿಂದ ಬೆಳಗಾವಿ ಮೂಲಕ ರಾಜ್ಯಕ್ಕೆ ಪ್ರವೇಶ ಪಡೆದು ಗೋವಿನಜೋಳ ಹಾಗೂ ಕಬ್ಬಿನ ಬೆಳೆಗೆ ತೀವ್ರ ಹಾನಿ ಉಂಟು ಮಾಡಿರುವ ಪೊಕ್ಕಾ ಬೋಯಿಂಗ್‌ (ವಿರೂಪತೆ/ಗಂಡು ಸುಳಿ) ರೋಗದ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ಇಲ್ಲಿದೆ. ಇದರೊಂದಿಗೆ ಸೋಯಾ ಅವರೆ ಪೀಡಿಸಿದ ನ್ಪೋಡೋಪ್ಟೆರಾ ಲಿಟುರಾ (ಎಲೆ ತಿನ್ನುವ ಕೀಡೆ), ಗೋವಿನಜೋಳದಲ್ಲಿ ಮುಳ್ಳಸಜ್ಜೆ ಕಳೆಯ ಸಮಗ್ರ ನಿರ್ವಹಣೆ, ಕೀಟಾಕರ್ಷಕ ಬೆಳಕಿನ ಬಲೆ ಬಳಸಿ ದಾಸ್ತಾನು ಕೀಟಗಳ ನಿರ್ವಹಣೆ, ಜಾನುವಾರುಗಳಿಗೆ ತೊಂದರೆ ಉಂಟು ಮಾಡುವ ಬಾಹ್ಯ/ ಹೊರ ಪರಾವಲಂಬಿ ಜೀವಿಗಳಿಂದ ರಕ್ಷಣಾ ವಿಧಾನಗಳು, ಬಯೋಪ್ಲಾಕ್‌-ಮೀನು ಸಾಕಾಣಿಕೆಯಲ್ಲಿ ಆಧುನಿಕ ತಂತ್ರಜ್ಞಾನ, ನೂಲುಗಳಲ್ಲಿ ನೆಲೆಸಿರುವ ರೇಷ್ಮೆ ಕೃಷಿ ಬಗ್ಗೆ ಮಾಹಿತಿ ಅನಾವರಣ ಮಾಡಲಾಗಿದೆ.

ಮುಂಗಾರಿನಲ್ಲಿ ತೀವ್ರವಾಗಿ ಬಾಧಿಸಿದ ಕೀಟ-ರೋಗಗಳ ನಿರ್ವಹಣೆ ಬಗ್ಗೆ ಈ ಸಲ ಮಾಹಿತಿ ಅನಾವರಣಗೊಳಿಸಲಾಗಿದೆ. ಇದರೊಂದಿಗೆ ಆಳಿನ ಕೊರತೆ ನೀಗಿಸುವಂತಹ ಅದರಲ್ಲೂ ಸಣ್ಣ ಹಿಡುವಳಿದಾರರಿಗೆ ಅನುಕೂಲ ಆಗುವಂತಹ ನೂತನ ಸಾಧನಗಳನ್ನು ಆವಿಷ್ಕರಿಸಿ ಪ್ರಸ್ತುತಪಡಿಸಿದ್ದೇವೆ. ರೈತರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದ್ದು, ಅವರಿಗೆ ಅಗತ್ಯ ಮಾಹಿತಿ ನೀಡುತ್ತಿದ್ದೇವೆ. -ರೋಹಿತ್‌ ಕೊಟಗಿ, ಅಂತಿಮ ವರ್ಷದ ವಿದ್ಯಾರ್ಥಿ,ಕೃಷಿ ಮಹಾವಿದ್ಯಾಲಯ


Spread the love
Share:

administrator

Leave a Reply

Your email address will not be published. Required fields are marked *