ದೇವಾಲಯದಲ್ಲಿ ಪಾನಕ ಕುಡಿಯಲು ಹೋದ ಭಕ್ತರಿಗೆ ಜೇನ್ನೊಣ ದಾಳಿ!

ಚಿಕ್ಕಬಳ್ಳಾಪುರ : ಶ್ರೀರಾಮ ನವಮಿ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತಾದಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಹೆಜ್ಜೇನು ದಾಳಿ ನಡೆಸಿದ ಘಟನೆ ಚಿಕ್ಕಬಳ್ಳಾಪುರದ ರಂಗಸ್ಥಳ ದೇಗುಲದಲ್ಲಿ ನಡೆದಿದೆ. 20 ಕ್ಕೂ ಹೆಚ್ಚು ಪ್ರವಾಸಿಗರು ಹಾಗು 4 ಮಂದಿ ಗ್ರಾಮಸ್ಥರು ಹೆಜ್ಜೇನಿನ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾನುವಾರ ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ದೇಗುಲದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಇತಿಹಾಸ ಪ್ರಸಿದ್ಧ ರಂಗಸ್ಥಳ ದೇವಸ್ಥಾನಕ್ಕೆ ದೂರದೂರುಗಳಿಂದ ಭಕ್ತಾದಿಗಳು ಆಗಮಿಸಿದ್ದರು. ಇದ್ದಕ್ಕಿದ್ದಂತೆಯೇ ಉದ್ರಿಕ್ತಗೊಂಡ ಜೇನ್ನೊಣಗಳು ಭಕ್ತಾದಿಗಳ ಮೇಲೆ ದಾಳಿ ನಡೆಸಿ ಮುಖ ಮೂತಿ ಎನ್ನದೆ ಕಚ್ಚಿದೆ. ಭಕ್ತಾದಿಗಳು ಆತಂಕದಿಂದ ಓಡಿ ಹೋಗಿದ್ದಾರೆ. ಹಲವರು ಗಾಯಕ್ಕೀಡಾದರೆ 30 ಕ್ಕೂ ಹೆಚ್ಚು ಮಂದಿ ಓಡಿ ಹೋಗಿ ಹೆಜ್ಜೇನಿನ ಕಡಿತದಿಂದ ತಪ್ಪಿಸಿಕೊಂಡಿದ್ದಾರೆ.
ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ಯಾವುದೇ ರೀತಿಯ ಗಂಭೀರ ಅಪಾಯದ ಭಯವಿಲ್ಲ ಎಂದು ತಿಳಿಸಿದ್ದಾರೆ.
