ಸಂಬಂಧ ಹದಗೆಟ್ಟರೂ ಬಾಂಗ್ಲಾಗೆ ಕಲ್ಲು ಸಾಗಾಟ: ಮೇಘಾಲಯ ಗಡಿಯಲ್ಲಿ ನಿರಂತರ ವ್ಯಾಪಾರ!

ಶಿಲ್ಲಾಂಗ್: ಪ್ರಸ್ತುತ ರಾಜಕೀಯ ಕಾರಣದಿಂದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಕಂಡುಬಂದಿದ್ದರೂ, ಭಾರತದಿಂದ ಬಾಂಗ್ಲಾದೇಶಕ್ಕೆ ಪೂರೈಕೆಯಾಗುತ್ತಿರುವ ಕಲ್ಲು ಸಾಗಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.
ಮೇಘಾಲಯ ಮತ್ತಿತರ ಕಡೆ ಪ್ರವಾಸವಿರುವ ಮಾಧ್ಯಮ ಪ್ರತಿನಿಧಿಗಳು ಗುರುವಾರ ಈ ಭಾಗಕ್ಕೆ ಭೇಟಿ ನೀಡಿದಾಗ ಕಂಡು ಬಂದ ಅಂಶವಿದು.
ಗಡಿ ವ್ಯಾಪಾರ ಎಂದಿನಂತೆ ನಡೆಯುತ್ತಿದ್ದು, ನಿರ್ಮಾಣ ಕ್ಷೇತ್ರಕ್ಕೆ ನಿತ್ಯವೂ ಸುಮಾರು 800 ಲೋಡ್ ಲಾರಿಗಳು ಬಾಂಗ್ಲಾದೇಶಕ್ಕೆ ಕಲ್ಲು ರವಾನಿಸುತ್ತಿವೆ. ಭಾರತದ ಕಲ್ಲುಗಳನ್ನು ಬಾಂಗ್ಲಾ ದೇಶಕ್ಕೆ ಪೂರೈಸುವ ವ್ಯವಸ್ಥೆ ಬಹಳ ಹಿಂದಿನದು ಎನ್ನುತ್ತಾರೆ ಸ್ಥಳೀಯರು.
ಗಡಿ ನಿಯಮಾವಳಿಗಳ ಪ್ರಕಾರ, ಭಾನುವಾರ ಭಾರತೀಯ ಗಡಿ ಹಾಗೂ ಶುಕ್ರವಾರ ಬಾಂಗ್ಲಾ ಗಡಿ ಮುಚ್ಚಿರುವುದರಿಂದ ಆ ದಿನ ಯಾವುದೇ ವಹಿವಾಟು ಇರದು. ಉಳಿದ ದಿನಗಳಲ್ಲಿ ಯಾವುದೇ ತೊಂದರೆ ಇಲ್ಲ. ಭದ್ರತಾ ದೃಷ್ಟಿಯಿಂದ ಲಾರಿಗಳಲ್ಲಿ ಡ್ರೈವರ್ ಹೊರತು ಪಡಿಸಿದಂತೆ ಬೇರಾರೂ ಪ್ರಯಾಣಿಸುವಂತಿಲ್ಲ ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಯಲ್ಲಿದೆ.
ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗಡಿಯಲ್ಲಿನ ಚಟುವಟಿಕೆಗಳ ಮೇಲೆ ನಿರಂತರ ನಿಗಾ
ವಹಿಸುತ್ತಿದ್ದು, ವಿಶೇಷ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿದೆ. ಪ್ರತಿಯೊಂದು ಲಾರಿಯನ್ನೂ ಪರಿಶೀಲಿಸಿ,
ದಾಖಲೆಗಳ ಶುದ್ಧತೆ ಮತ್ತು ಭದ್ರತಾ ಕ್ರಮಗಳನ್ನು ಖಚಿತಪಡಿಸಲಾಗುತ್ತದೆ. ಈ ಭಾಗಕ್ಕೆ ಪ್ರವಾಸಿಗರು ಹೆಚ್ಚಿನ
ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅಕ್ರಮ ನುಸುಳುವಿಕೆ ಇಲ್ಲಿ ಸುಲಭವಿಲ್ಲ ಮೇಘಾಲಯದಲ್ಲಿ 3 ಪ್ರಮುಖ
ಬುಡಕಟ್ಟು ಸಮುದಾಯವಿದೆ. ಖಾಸಿ, ಗಾರೋ, ಜೈನ್ತಿಯ. ಈ 3 ಸಮುದಾಯವು ಪ್ರತ್ಯೇಕ ಆಡಳಿತಾತ್ಮಕ
ವ್ಯವಸ್ಥೆ ಹೊಂದಿವೆ. ಗ್ರಾಮದಿಂದ ಜಿಲ್ಲಾಮಟ್ಟದವರೆಗೂ ಅವರದ್ದೇ ಆದ ಆಡಳಿತ. ಹಾಗಾಗಿ ಊರಿಗೆ ಯಾರೆ
ಹೊಸಬರು ಬಂದರೂ (ಪ್ರವಾಸಿಗರು ಹೊರತುಪಡಿಸಿ) ಆಡಳಿತ ವ್ಯವಸ್ಥೆಯ ಮುಖ್ಯಸ್ಥನನ್ನು ಭೇಟಿ
ಮಾಡಬೇಕು ಅಥವ ಮಾಹಿತಿ ನೀಡಲೇಬೇಕು. ಹೀಗಾಗಿ ಮೇಘಾಲಯದ ಗಡಿಭಾಗದ ಮೂಲಕ ಅಕ್ರಮ
ವಲಸೆ ಕಷ್ಟ. ಜತೆಗೆ ಭಾರತೀಯ ಸೈನ್ಯದ ಭದ್ರತೆಯೂ ಅಷ್ಟೆ ಪ್ರಬಲವಾಗಿದೆ ಎನ್ನುತ್ತಾರೆ ಸ್ಥಳೀಯರು ಹಾಗೂ ಖಾಸಿಯ ಆಡಳಿತದ ಮುಖ್ಯಸ್ಥರು.


- ಪ್ರವಾಸಿಗರ ಕಣ್ಮನ ಸೆಳೆಯುವ ಉಂಗತ್ ನದಿ
ಮೇಘಾಲಯದ ರಿ-ಭೋಯ್ ಮತ್ತು ಜೈಂಟಿಯಾ ಹಿಲ್ಸ್ ಜಿಲ್ಲೆಯ ಗಡಿ ಭಾಗದಲ್ಲಿರುವ ಸುಂದರ ಪ್ರವಾಸಿ ತಾಣ ಶ್ಂಗ್ ಪೆಡೆಂಗ್ ಗ್ರಾಮದ ಧಮ್ಮಿ ಪ್ರದೇಶದ ಉಗಂತ್ ನದಿ. ತನ್ನ ವೈಶಿಷ್ಟ್ಯದ ಕಾರಣಕ್ಕೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಏಷ್ಯಾದ ಅತ್ಯಂತ ಸ್ವಚ್ಛ ನದಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ನದಿಯಲ್ಲಿನ ದೋಣಿ ವಿಹಾರವು ಹೊಸ ಅನುಭವವನ್ನೇ ನೀಡುತ್ತದೆ. ನದಿಯ ತಳಭಾಗದ ಕಲ್ಲುಗಳು ಮತ್ತು ಮೀನುಗಳು ಸ್ಪಷ್ಟವಾಗಿ ಕಾಣಿಸುವ ಅಪರೂಪದ ದೃಶ್ಯ ಇಲ್ಲಿನ ವಿಶೇಷ.
ಗ್ರಾಮ ಸಮಿತಿಗಳ ಆಡಳಿತ
ಭಾರತ ಮತ್ತು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡ ಈ ಗ್ರಾಮವು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಇಲ್ಲಿಯ ಜೀವನಶೈಲಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಅವರು ವಹಿಸುತ್ತಿರುವ ಪಾತ್ರವೂ ದೊಡ್ಡದು. ನದಿ ಎಷ್ಟು ಶುದ್ಧ ಸ್ವಚ್ಛವಾಗಿದೆಯೋ ನದಿ ತೀರವನ್ನು ಸ್ಥಳೀಯರು ಅಷ್ಟೇ ಸ್ವಚ್ಚ, ಸುಂದರವಾಗಿಟ್ಟುಕೊಂಡಿದ್ದಾರೆ. ಇಲ್ಲಿನ ಪ್ರವಾಸಿ ತಾಣವನ್ನು ಸ್ಥಳೀಯ ಆಡಳಿತ ಮತ್ತು ಗ್ರಾಮ ಸಮಿತಿಗಳೇ ನಿರ್ವಹಿಸುತ್ತವೆ. ಪ್ರವಾಸಿಗರಿಗಾಗಿ ನದಿಯ ದಂಡೆಯ ಮೇಲೆ ಟೆಂಟ್ ಗಳು, ಹೋಂ ಸ್ಟೇಗಳ ಸೌಲಭ್ಯಗಳನ್ನೂ ಒದಗಿಸಲಾಗಿದೆ.