“ಕಮಲ್ ಹಾಸನ್ ವಿರೋಧದ ನಡುವೆಯೂ ಥಗ್‌ಲೈಫ್ ಪ್ರದರ್ಶನಕ್ಕೆ ಸಿದ್ಧ ವಿಕ್ಟರಿ ಸಿನಿಮಾ

ಕಮಲ್ ಹಾಸನ್ ಕನ್ನಡದ ಕುರಿತಾಗಿ ಆಡಿದ ಮಾಡುಗಳು ಸದ್ಯ ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿದೆ. ಮುಂದಿನ ವಾರ ಬಿಡುಗಡೆಯಾಗಲಿರುವ ಥಗ್‌ಲೈಫ್ ಎಂಬ ಚಿತ್ರದ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಭಾಗಿಯಾಗಿದ್ದ ನಟ ಕಮಲ್ ಹಾಸನ್ ವೇದಿಕೆ ಮೇಲೇರಿ ಕನ್ನಡ ಭಾಷೆ ಹುಟ್ಟಿದ್ದು ಕನ್ನಡದಿಂದ ಎಂಬ ಹೇಳಿಕೆಯನ್ನು ನೀಡಿ ಭಾರೀ ಚರ್ಚೆಗೆ ಕಾರಣರಾಗಿದ್ದಾರೆ.
ಕಮಲ್ ಹಾಸನ್ ಅವರ ಈ ಹೇಳಿಕೆಯಿಂದ ಕೆರಳಿದ ಕನ್ನಡಿಗರು ನಟನ ವಿರುದ್ಧ ಕಿಡಿಕಾರಿದ್ದು, ಕೂಡಲೇ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಥಗ್‌ಲೈಫ್ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಅತ್ತ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಕಮಲ್ ಹಾಸನ್‌ಗೆ ಕ್ಷಮೆಯಾಚಿಸುವಂತೆ ಗಡುವು ನೀಡಿತ್ತು. ಹೀಗಿರುವಾಗ ಬೆಂಗಳೂರಿನ ವಿಕ್ಟರಿ ಸಿನಿಮಾ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಥಗ್‌ಲೈಫ್ ಚಿತ್ರವನ್ನು ಪ್ರದರ್ಶಿಸಲು ಮುಂದಾಗಿರುವುದಾಗಿ ಟ್ವೀಟ್ ಮಾಡಿದೆ.
ʼವಿವಾದವನ್ನು ಪಕ್ಕಕ್ಕಿಟ್ಟು ಸಿನಿಮಾವನ್ನು ಆಚರಿಸೋಣʼ ಎಂದು ಸಾಲನ್ನು ಬರೆದುಕೊಂಡಿರುವ ವಿಕ್ಟರಿ ಸಿನಿಮಾ ಶೀಘ್ರದಲ್ಲೇ ಬುಕಿಂಗ್ ಆರಂಭವಾಗಲಿದೆ ಎಂದು ಬರೆದುಕೊಂಡಿದೆ. ವಿಕ್ಟರಿ ಸಿನಿಮಾದ ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
