ಹಲ್ಲಿನ ಚಿಕಿತ್ಸೆ ದುಬಾರಿ ಎಂದು ಟೈಲ್ಸ್ ಪಾಲಿಶ್ ಯಂತ್ರದಿಂದ ಹಲ್ಲು ಸರಿಪಡಿಸಿದ ಗೆಳೆಯ

ಇಂದಿನ ದಿನಗಳಲ್ಲಿ ಹಲ್ಲಿನ ಚಿಕಿತ್ಸೆ ಬಹಳ ದುಬಾರಿ. ಹೊರರೋಗಿಗಳಾಗಿ ಈ ಚಿಕಿತ್ಸೆಗೆ ದಾಖಲಾಗಿರವುದರಿಂದ ಯಾವುದೇ ಆರೋಗ್ಯ ವಿಮೆಯ ಕೆಳಗೆ ಹಲ್ಲಿನ ಚಿಕಿತ್ಸೆ ಬರುವುದಿಲ್ಲ. ಹೀಗಾಗಿ ಹಲ್ಲಿನ ಸಮಸ್ಯೆ ಎದುರಿಸುವವರು ದುಬಾರಿ ವೆಚ್ಚ ಮಾಡಬೇಕಾಗುತ್ತದೆ. ಒಂದು ಹುಳುಕು ಹಲ್ಲಿಗೆ ಫಿಲ್ಲಿಂಗ್ ಮಾಡಿ ರೂಟ್ ಕೆನಾಲ್ ಮಾಡಿಸಿ ಕ್ಯಾಪ್ ಹಾಕುವುದಕ್ಕೆ ಮಹಾನಗರಿಗಳಲ್ಲಿ ಕನಿಷ್ಟ 7-8 ಸಾವಿರದಿಂದ ದರ ನಿಗದಿ ಮಾಡುತ್ತಾರೆ.

ಇನ್ನು ಹುಳುಕು ಹಲ್ಲನ್ನು ಕೀಳಿಸುವುದಕ್ಕೆ ಸಾವಿರಾರು ರೂಪಾಯಿಗಳನ್ನು ವಸೂಲಿ ಮಾಡಲಾಗುತ್ತದೆ. ಹೀಗಾಗಿ ಹಲ್ಲಿನ ಚಿಕಿತ್ಸೆ ಬಹಳ ದುಬಾರಿಯಾಗಿ ಪರಿಣಮಿಸಿದೆ. ಹೀಗಿರುವಾಗ ಯುವಕನೋರ್ವ ಟೈಲ್ಸ್ ಪಾಲಿಶ್ ಮಾಡುವ ಯಂತ್ರವನ್ನು ಬಳಸಿ ಗೆಳೆಯನ ಹಲ್ಲನ್ನು ನೇರವಾಗಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವೀಡಿಯೋ ನೋಡಿದ ಅನೇಕರು ಎಲ್ಲಾದರೂ ಸ್ವಲ್ಪ ಹೆಚ್ಚು ಕಡಿಮೆ ಆದರೂ ಹಲ್ಲಿನ ಜೊತೆ ಕೆನ್ನೆಯೂ ಕುಯ್ದು ಹೋಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಲ್ಲಿನ ಓರೆಕೋರೆ ಸರಿಪಡಿಸಲು ಟೈಲ್ಸ್ ಪಾಲಿಶ್ ಮೆಷಿನ್ ಬಳಕೆ:
ಹಲ್ಲು ಚೆನ್ನಾಗಿದ್ದರ ಮುಖಕ್ಕೊಂದು ಒಳ್ಳೆಯ ಲಕ್ಷಣವಾಗಿ ಕಾಣುತ್ತದೆ. ನಗುವುದಕ್ಕೂ ಯಾವುದೇ ಅಂಜಿಕೆ ಇರಲ್ಲ, ಹೀಗಾಗಿ ಅನೇಕರು ಹಲ್ಲಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಹಲ್ಲು ದಾಳಿಂಬೆ ಹಣ್ಣಿನಂತೆ ಇರಬೇಕೆಂದು ಬಯಸುತ್ತಾರೆ. ಆದರೆ ಇಲ್ಲಿಬ್ಬರು ಹುಡುಗರು ಹಲ್ಲಿನ ಓರೆಕೋರೆ ಸರಿಪಡಿಸುವುದಕ್ಕೆ ಟೈಲ್ಸ್ ಪಾಲಿಶ್ ಮಾಡುವ ಮೆಷಿನ್ ಮೊರೆ ಹೋಗಿದ್ದು ಆತಂಕ ಸೃಷ್ಟಿಸಿದೆ.
ಅಂದಹಾಗೆ ಈ ವೀಡಿಯೋವನ್ನು @Akshunnofficial ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ‘ಭಾರತ ಹೊಸಬ್ಬರಿಗೆ ಅಲ್ಲ ವೈರಲ್ ವೀಡಿಯೊದಲ್ಲಿ ಟೈಲ್ ಪಾಲಿಶಿಂಗ್ ಯಂತ್ರವನ್ನು ಬಳಸಿಕೊಂಡು ಸ್ನೇಹಿತನ ಹಲ್ಲುಗಳನ್ನು ಹರಿತಗೊಳಿಸುವ ವ್ಯಕ್ತಿ’ ಎಂದು ಬರೆಯಲಾಗಿದೆ. ವೀಡಿಯೋದಲ್ಲಿ ಟೈಲ್ಸ್ ಪಾಲಿಶ್ ಮಾಡುವ ಮೆಷಿನ್ ಹಿಡಿದುಕೊಂಡಿರುವ ಯುವಕ ತನ್ನ ಗೆಳೆಯನ ತಲೆಯನ್ನು ಹಿಡಿದುಕೊಂಡು ಆತನ ಹಲ್ಲಿನ ಓರೆಕೋರೆಯನ್ನು ಈ ಮೆಷಿನ್ ಮೂಲಕ ನಿಧಾನವಾಗಿ ಸರಿಪಡಿಸುತ್ತಿದ್ದಾನೆ. ಸ್ವಲ್ಪ ಕೈ ಅತ್ತಿತ್ತ ಹೋದರು ಹಲ್ಲು ಸರಿಪಡಿಸಿಕೊಳ್ಳುತ್ತಿರುವ ಮುಖಕ್ಕೆ ಸ್ಟಿಚ್ ಹಾಕಬೇಕಾಗುತ್ತದೆ. ಆದರೂ ಆತ ರಿಸ್ಕ್ ತೆಗೆದುಕೊಂಡು ಗೆಳೆಯನನ್ನು ಬಲವಾಗಿ ನಂಬಿ ಆತನ ಕೈಗೆ ಈ ಹಲ್ಲು ಸರಿಪಡಿಸುವ ಜವಾಬ್ದಾರಿ ನೀಡಿರುವುದನ್ನು ಮೆಚ್ಚಲೇಬೇಕು.
ವೈರಲ್ ವೀಡಿಯೊದಲ್ಲಿ ಕಾಣುವಂತೆ, ಒಬ್ಬ ವ್ಯಕ್ತಿ ಟೈಲ್ಸ್ ಪಾಲಿಶ್ ಮಾಡುವ ಯಂತ್ರವನ್ನು ಕೈಯಲ್ಲಿ ಹಿಡಿದಿದ್ದಾನೆ. ಇನ್ನೊಬ್ಬ ವ್ಯಕ್ತಿ ತನ್ನ ಬಾಯಿಯನ್ನು ಅಗಲವಾಗಿ ತೆರೆದು ಕುಳಿತಿದ್ದು, ತನ್ನ ಗೆಳೆಯನಿಗೆ ಅಪಾಯಕಾರಿ ಕೆಲಸವನ್ನು ಮಾಡಲು ಅವಕಾಶ ನೀಡಿದ್ದಾನೆ. ಆ ವ್ಯಕ್ತಿ ಟೈಲ್ಸ್ ಯಂತ್ರವನ್ನು ರನ್ ಮಾಡಿ ತನ್ನ ಗೆಳೆಯನ ಹಲ್ಲುಗಳಿಗೆ ತಾಗಿಸುತ್ತಾ ಹಲ್ಲಿಗೊಂದು ಒಳ್ಳೆಯ ರೂಪ ನೀಡುವುದಕ್ಕೆ ಮುಂದಾಗಿದ್ದಾನೆ. ಕೆಲವು ಸೆಕೆಂಡುಗಳ ಕಾಲ ಮುಂಭಾಗದ ಹಲ್ಲುಗಳನ್ನು ಹರಿತಗೊಳಿಸಿದ ನಂತರ ಟೈಲ್ಸ್ ಮೆಷಿನ್ ಆಪ್ ಮಾಡಲಾಗುತ್ತದೆ. ಇದರಲ್ಲಿ ಆ ಹಲ್ಲು ಸರಿಪಡಿಸಿಕೊಂಡ ಹುಡುಗನಿಗೆ ಯಾವುದೇ ಹಾನಿಯಾಗಿಲ್ಲ, ಆಥ ಕ್ಯಾಮರಾಗೆ ವಿಕ್ಟರಿ ಚಿಹ್ನೆಯನ್ನು ತೋರಿಸುವುದನ್ನು ವೀಡಿಯೋದಲ್ಲಿ ನೋಡಹುದು.
ಈ ವೀಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನೋಡಿಯೇ ನನ್ನ ಹಲ್ಲಿನಲ್ಲಿ ಒಂತರ ಸೆಳೆತ ಶುರುವಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಗೆಳೆಯನನ್ನು ನಂಬಿದ ಯುವಕನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸ್ನೇಹ ಎಂದರೆ ಇಷ್ಟೊಂದು ನಂಬಿಕೆ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಸ್ವಲ್ಪ ಹೆಚ್ಚು ಕಡಿಮೆ ಆದರೂ ಉಳಿದ ಹಲ್ಲನ್ನು ಕಳೆದುಕೊಳ್ಳಬೇಕಾದಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಇದರಿಂದ ಹಲ್ಲಿನ ನರಗಳಿಗೆ ಹಾನಿಯಾಗಬಹುದು, ಹಲ್ಲಿಗೂ ನರಗಳಿರುತ್ತವೆ ಎಂದು ಹೇಳಿದ್ದಾರೆ.