ಮುಂಬೈ ಬೆಚ್ಚಿಬೀಳಿಸಿದ ಪೈಶಾಚಿಕ ಕೃತ್ಯ: 10 ಬಾಲಕಿಯರಿಗೆ ತಂಪು ಪಾನೀಯದಲ್ಲಿ ನಿದ್ರಾಜನಕ ನೀಡಿ ಅತ್ಯಾಚಾರವೆಸಗಿದ್ದ ನರಾಧಮ ಬಂಧನ

ಮುಂಬೈನಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ಬೆಳಕಿಗೆ ಬಂದಿದ್ದು, ಅಪ್ರಾಪ್ತ ಬಾಲಕಿಯರಿಗೆ ತಂಪು ಪಾನೀಯದಲ್ಲಿ ನಿದ್ರಾಜನಕ ಔಷಧ ಬೆರೆಸಿ ಅತ್ಯಾಚಾರವೆಸಗುತ್ತಿದ್ದ ಮಹೇಶ್ ರಮೇಶ್ ಪವಾರ್ (45) ಎಂಬ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಬಾಲಕಿಯರಿಗೆ ಆಮಿಷ ಒಡ್ಡಿ ಅವರಿಗೆ ಮಾದಕ ದ್ರವ್ಯ ಮಿಶ್ರಿತ ಪಾನೀಯಗಳನ್ನು ನೀಡುತ್ತಿದ್ದನು. ಪಾನೀಯ ಕುಡಿದು ಬಾಲಕಿಯರು ಪ್ರಜ್ಞೆ ತಪ್ಪಿದ ನಂತರ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನಲ್ಲದೆ, ಆ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿದ್ದನು.


ಬಳಿಕ ಈ ಆಕ್ಷೇಪಾರ್ಹ ವಿಡಿಯೋಗಳನ್ನು ಇಟ್ಟುಕೊಂಡು ಬಾಲಕಿಯರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಪದೇ ಪದೇ ಶೋಷಣೆ ಮಾಡುತ್ತಿದ್ದನು. ಡಿಸೆಂಬರ್ 13 ರಂದು ಕುರಾರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಇನ್‌ಸ್ಪೆಕ್ಟರ್ ಸಂಜಯ್ ತಾವ್ಡೆ ನೇತೃತ್ವದ ತಂಡ, ಕೇವಲ ಆರು ಗಂಟೆಗಳ ಮಿಂಚಿನ ಕಾರ್ಯಾಚರಣೆ ನಡೆಸಿ ವಿರಾರ್‌ನಲ್ಲಿ ಆರೋಪಿಯನ್ನು ಸೆರೆಹಿಡಿದಿದೆ. ತನಿಖೆಯ ವೇಳೆ ಈತ ಅತ್ಯಾಚಾರದ ವಿಡಿಯೋವನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿರುವುದು ಮತ್ತು ವಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ಕೃತ್ಯಗಳನ್ನು ಎಸಗಿರುವುದು ಬಯಲಾಗಿದೆ.

ಸದ್ಯ 10ಕ್ಕೂ ಹೆಚ್ಚು ಬಾಲಕಿಯರು ಈತನ ಪಾಶವೀಯ ಕೃತ್ಯಕ್ಕೆ ಬಲಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಪೊಲೀಸರು ಈತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.