ಮಹಿಳಾ ಗ್ರಾಹಕರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಡೆಲಿವರಿ ಬಾಯ್ ಬಂಧನ!

ಹುಬ್ಬಳ್ಳಿ : ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮಹಿಳಾ ಗ್ರಾಹಕರ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಂಡು, ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಡೆಲಿವರಿ ಬಾಯ್ನನ್ನು ಹುಬ್ಬಳ್ಳಿಯ ಗೋಕುಲ್ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಮೇಶ್ ರೆಡ್ಡಿ ಆಗಾಗ ಕೆಲ ಕೋರಿಯರ್ ಕಂಪನಿಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದ.
ಕೋರಿಯರ್ ಕಂಪನಿಗಳು ಕೂಡಾ ತಮ್ಮ ಸಿಬ್ಬಂದಿ ರಜೆ ಇದ್ದಾಗ, ಈತನನ್ನು ಕೋರಿಯರ್ ಡೆಲಿವರಿ ಮಾಡಲು ಕಳುಹಿಸುತ್ತಿದ್ರಂತೆ. ಆದರೆ, ಈತ ಕಂಪನಿಗಳು ಹೇಳಿದಷ್ಟು ಕೆಲಸ ಮಾಡದೆ ನೀಚ ಕೃತ್ಯ ಎಸಗಿದ್ದಾನೆ.
ಆರೋಪಿ ರಮೇಶ್ ರೆಡ್ಡಿ ಮಹಿಳಾ ಗ್ರಾಹಕರ ಮೊಬೈಲ್ ನಂಬರ್ಗಳನ್ನು ಸೇವ್ ಮಾಡಿಕೊಂಡು, ಬಳಿಕ ಅವರಿಗೆ ಹಾಯ್ ಬೇಬಿ, ಐ ವಾಂಟ್ ಟು ಮೀಟ್ ಯು, ಐ ಲವ್ ಯು ಸೇರಿದಂತೆ ಅನೇಕ ಅಶ್ಲೀಲ ಮೆಸೆಜ್ಗಳನ್ನು ಕಳುಹಿಸುತ್ತಿದ್ದನಂತೆ. ಆರೋಪಿ ರಮೇಶ್ ರೆಡ್ಡಿ ಕಾಟವನ್ನು ತಾಳಲಾರದೆ, ಅನೇಕರು ಈತನ ನಂಬರ್ ಬ್ಲಾಕ್ ಮಾಡಿದ್ದಾರೆ.

ಆದರೆ, ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬಡಾವಣೆಯೊಂದರಲ್ಲಿ ವಾಸವಾಗಿರುವ ಇಬ್ಬರು ಮಹಿಳೆಯರು ಈತನಿಗೆ ತಕ್ಕ ಪಾಠ ಕಲಿಸಿದ್ದಾರೆ. ಕಾಟ ವಿಪರೀತವಾದಾಗ ಇಬ್ಬರು ಮಹಿಳೆಯರು ಗೋಕುಲ್ ರೋಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ರಮೇಶ್ ರೆಡ್ಡಿಯನ್ನು ಪತ್ತೆ ಮಾಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
‘ಅವಳಿ ನಗರದಲ್ಲಿ ಕೊರಿಯರ್ ಸರ್ವಿಸ್ಗೆ ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಪೂರ್ವಾಪರ ವಿಚಾರಣೆ ಮಾಡಿ, ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಮಹಿಳೆಯರು ಕೂಡಾ ತಮ್ಮ ಮೊಬೈಲ್ ನಂಬರ್ ನೀಡುವಾಗ ಜಾಗೃತಿ ವಹಿಸಬೇಕು ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮನವಿ ಮಾಡಿದ್ದಾರೆ.
