ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಯಮುನಾ ನದಿಯಲ್ಲಿ ಮೃತದೇಹ ಪತ್ತೆ, ಡೆತ್ ನೋಟ್ ಲಭ್ಯ!

ನವದೆಹಲಿ: ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೃತದೇಹ ಯಮುನಾ ನದಿಯಲ್ಲಿ ಭಾನುವಾರ (ಜು.13) ಸಂಜೆ ಪತ್ತೆಯಾಗಿದೆ.

ಉತ್ತರ ದೆಹಲಿಯ ಗೀತಾ ಕಾಲೋನಿ ಬಳಿ ಇರುವ ಯಮುನಾ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಮೃತ ವಿದ್ಯಾರ್ಥಿನಿಯನ್ನು ತ್ರಿಪುರ ಮೂಲದ ಸ್ನೇಹಾ ದೇಬ್ನಾಥ್ (19) ಎಂದು ಗುರುತಿಸಲಾಗಿದೆ.
ಸ್ನೇಹಾ ದಕ್ಷಿಣ ದೆಹಲಿಯ ಪರ್ಯಾವರಣ್ ನಲ್ಲಿ ವಾಸವಾಗಿದ್ದು ಜುಲೈ 7ರಂದು ಬೆಳಿಗ್ಗೆ 5.56 ಕ್ಕೆ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿ, ಸ್ನೇಹಿತೆಯನ್ನು ರೈಲು ನಿಲ್ದಾಣಕ್ಕೆ ಬಿಡಲು ಸರೈ ರೋಹಿಲ್ಲಾ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿರುವುದಾಗಿ ತಿಳಿಸಿದರು. ಇದಾದ ಕೆಲ ಸಮಯದ ಬಳಿಕ ಸ್ನೇಹಾಳ ಫೋನ್ ಸ್ವಿಚ್ ಆಫ್ ಆಗಿತ್ತು. ಈ ವೇಳೆ ಸ್ನೇಹಾ ಸಹೋದರಿ ಸ್ನೇಹಾಳ ಸ್ನೇಹಿತೆಗೆ ಕರೆ ಮಾಡಿ ಸ್ನೇಹಾಳ ಬಗ್ಗೆ ವಿಚಾರಿಸಿದ್ದಾರೆ ಈ ವೇಳೆ ಆಕೆ ನನ್ನ ಜೊತೆ ಇಲ್ಲ ಎಂದು ಹೇಳಿದ್ದಾಳೆ ಇದಾದ ಬಳಿಕ ಸ್ನೇಹಾ ರೈಲ್ವೆ ನಿಲ್ದಾಣಕ್ಕೆ ಹೋಗಿರುವುದಲ್ಲ ಬದಲಾಗಿ ಸಿಗ್ನೇಚರ್ ಸೇತುವೆ ಬಳಿಗೆ ಎಂಬುದು ತಿಳಿದುಬಂದಿದೆ.
ಘಟನೆ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದರು.
ಡೆತ್ ನೋಟ್ ಪತ್ತೆ:
ಈ ನಡುವೆ ಸ್ನೇಹಾ ವಾಸವಿದ್ದ ಮನೆಯಲ್ಲಿ ಡೆತ್ ನೋಟ್ ಒಂದು ಪತ್ತೆಯಾಗಿದ್ದು ಅದರಲ್ಲಿ ಇನ್ನೊಬ್ಬರಿಗೆ ಹೊರೆಯಾಗಿ ಜೀವಿಸುವುದು ಕಷ್ಟ ಇಂತಹ ಜೀವನ ನಡೆಸುವುದು ಬಹಳ ಕಷ್ಟ ಹಾಗಾಗಿ ಸಿಗ್ನೇಚರ್ ಸೇತುವೆಯಿಂದ ಹಾರಿ ತನ್ನ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾಗಿ ಪತ್ರದಲ್ಲಿ ಬರೆಯಲಾಗಿದೆ. ಜೊತೆಗೆ ಆತ್ಮಹತ್ಯೆ ತನ್ನದೇ ಆದ ನಿರ್ಧಾರ ಮತ್ತು ಬೇರೆ ಯಾರೂ ಇದಕ್ಕೆ ಜವಾಬ್ದಾರರಲ್ಲ ಎಂದು ಸ್ನೇಹಾ ಬರೆದಿದ್ದರು.
ಸಿಗ್ನೇಚರ್ ಸೇತುವೆ ಬಳಿ ಹುಡುಕಾಟ:
ದೂರು ದಾಖಲಿಸಿಕೊಂಡ ಪೊಲೀಸರು ಸಿಗ್ನೇಚರ್ ಸೇತುವೆಯ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಆದರೆ ಯಾವುದೇ ಕುರುಹು ಸಿಗಲಿಲ್ಲ. ಆದರೆ ಜುಲೈ 9 ರಂದು, ದೆಹಲಿ ಪೊಲೀಸರು, NDRF ಸಹಾಯದಿಂದ, ಸಿಗ್ನೇಚರ್ ಸೇತುವೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ನೇಹಾಳನ್ನು ಹುಡುಕಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಯಮುನಾ ನದಿಯಲ್ಲಿ ಶವ ಪತ್ತೆ:
ಪೊಲೀಸರು ಹುಡುಕಾಟ ಆರಂಭಿಸಿ ಸುಮಾರು ಆರು ದಿನಗಳ ಬಳಿಕ ಸಿಗ್ನೇಚರ್ ಸೇತುವೆಯಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಯಮುನಾ ನದಿಯ ದಡದಲ್ಲಿರುವ ಗೀತಾ ಕಾಲೋನಿಯ ಫ್ಲೈಓವರ್ ಬಳಿ ಮೃತದೇಹ ಪತ್ತೆಯಾಗಿದೆ.
ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು ಹೆಚ್ಚಿನ ಆತ್ಮಹತ್ಯೆಗೆ ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.
