ದೆಹಲಿಯಲ್ಲಿ ಪೊಲೀಸ್ ಪ್ರೇಮಿಗಳಿಬ್ಬರಿಂದ ₹2 ಕೋಟಿ ಸೈಬರ್ ಕ್ರೈಂ ಹಣ ಲೂಟಿ: ನಕಲಿ ದಾಖಲೆ ಬಳಸಿ ಮಜಾ!

ಸೈಬರ್ ಕ್ರೈಂ ಪ್ರಕರಣದಲ್ಲಿ ಹಣ ಕಳೆದುಕೊಂಡ ಸಂತ್ರಸ್ತರಿಗೆ ವಾಪಸ್ ಕೊಡಬೇಕಾಗಿದ್ದ 2 ಕೋಟಿ ರೂಪಾಯಿಗಳನ್ನು ನಕಲಿ ದಾಖಲೆ ಬಳಸಿ ಗುಳುಂ ಮಾಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಪೊಲೀಸ್ ಲವರ್ಸ್ ಇಬ್ಬರೂ ಈ ಹಣವನ್ನು ಲೂಟಿ ಮಾಡಿ ಹಲವಾರು ಪ್ರದೇಶಗಳಿಗೆ ಸುತ್ತಾಡಿ ಮಜಾ ಮಾಡಿದ್ದಾರೆ.

ವೈದ್ಯಕೀಯ ರಜೆ ಪಡೆದು, ಈ ಲವರ್ಸ್ ಗೋವಾ, ಮನಾಲಿ ಮತ್ತು ಕಾಶ್ಮೀರ ಸೇರಿದಂತೆ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಮಜಾ ಮಾಡಿದ್ದಾರೆ. ಅಂದಹಾಗೆ ಈ ಇಬ್ಬರೂ ಅಧಿಕಾರಿಗಳು ವಿವಾಹಿತರು. ಅರ್ಥಾತ್ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳಿಗೆ ವಿವಾಹವಾಗಿದ್ದಾರೆ. ಆದರೆ ಅಕ್ರಮ ಸಂಬಂಧ ಹೊಂದಿದ್ದು, ಇಬ್ಬರೂ ಮಜಾ ಮಾಡಲು ಹಣ ಲೂಟಿ ಮಾಡಿದ್ದಾರೆ!
ಅಂದಹಾಗೆ ಈ ಘಟನೆ ನಡೆದಿರುವುದು ದೆಹಲಿಯಲ್ಲಿ. ಸಬ್-ಇನ್‌ಸ್ಪೆಕ್ಟರ್ ಅಂಕುರ್ ಮಲಿಕ್ ಮತ್ತು ಸಬ್-ಇನ್‌ಸ್ಪೆಕ್ಟರ್ ನೇಹಾ ಪುನಿಯಾ ಈ ಆರೋಪ ಮಾಡಿದ್ದು, ಇದೀಗ ಸಿಕ್ಕಿಬಿದ್ದಿದ್ದಾರೆ. ಸೈಬರ್ ಕ್ರೈಂ ಪ್ರಕರಣದಲ್ಲಿ ಹಲವರು ದುಡ್ಡು ಕಳೆದುಕೊಳ್ಳುತ್ತಾರೆ. ಆನ್ಲೈನ್ ಇತ್ಯಾದಿಗಳಿಂದ ವಂಚನೆಗೆ ಒಳಗಾದ ಜನರು ದೂರು ಸಲ್ಲಿಸಿದಾಗ ಸೈಬರ್ ಕ್ರೈಂ ಪೊಲೀಸರು ತನಿಖೆ ಮಾಡಿ ಒಂದಷ್ಟು ಮಂದಿಯ ಹಣವನ್ನು ವಾಪಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಅವರು ನೀಡಿದ ದೂರಿನ ಆಧಾರದ ಮೇಲೆ ಹಣವನ್ನು ವಾಪಸ್ ಮಾಡುವುದು ಈ ಪೊಲೀಸರ ಕರ್ತವ್ಯ. ಆದರೆ ವಶಪಡಿಸಿಕೊಂಡ ಹಣವನ್ನು ಸಂತ್ರಸ್ತರಿಗೆ ಹಿಂದಿರುಗಿಸುವುದರ ಬದಲು, ಈ ಇಬ್ಬರು ಮಹಾನುಭಾವರು 2 ಕೋಟಿ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ.
ಅದು ಹೇಗೆ ಎಂದರೆ, ದೂರು ನೀಡಿದವರ ಹೆಸರನ್ನೇ ಇವರು ತಿರುಚಿದ್ದಾರೆ. ತಮಗೆ ಬೇಕಾದ ಆಪ್ತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆಗೆದು, ಕೋರ್ಟ್ಗೂ ಇವರದ್ದೇ ಹೆಸರು ಕೊಟ್ಟು, ಇವರೇ ಸಂತ್ರಸ್ತರು ಎಂದು ಬಿಂಬಿಸಿ, ವಶಪಡಿಸಿಕೊಂಡ ಹಣವನ್ನು ವರ್ಗಾಯಿಸಿದ್ದಾರೆ. ಅಲ್ಲಿಗೆ ಕೋರ್ಟ್ ದಾಖಲೆಗಳ ಪ್ರಕಾರ ಸಂತ್ರಸ್ತರಿಗೆ ಹಣ ವರ್ಗಾವಣೆ ಆಗಿದೆ ಎಂದೇ ಅರ್ಥ. ಆದರೆ ಅಸಲಿಗೆ ದುಡ್ಡು ವರ್ಗ ಆಗಿದ್ದು, ಅಸಲಿ ಸಂತ್ರಸ್ತರಿಗೆ ಅಲ್ಲ, ಬದಲಿಗೆ ಈ ಸಬ್ ಇನ್ಸ್ಪೆಕ್ಟರ್ ಗೆ ಬೇಕಾದವರ ಖಾತೆಗೆ!
ಇಷ್ಟು ಬೃಹತ್ ಮೊತ್ತವನ್ನು ಲಪಟಾಯಿಸಿದ ಮೇಲೆ ಸಬ್-ಇನ್‌ಸ್ಪೆಕ್ಟರ್ ಅಂಕುರ್ ಮಲಿಕ್ ಏಳು ದಿನಗಳ ವೈದ್ಯಕೀಯ ರಜೆಗೆ ಹೋಗಿ, ಮತ್ತೆ ಕರ್ತವ್ಯಕ್ಕೆ ಹಾಜರಾಗಿಲ್ಲ. ನೇಹಾ ಪುನಿಯಾ ಕೂಡ ಈ ಪ್ರಕರಣದ ನಂತರ ಕಾಣೆಯಾಗಿದ್ದರು. 2021 ರ ಬ್ಯಾಚ್ ಅಧಿಕಾರಿ ಮಲಿಕ್, ಹಾಗೂ 2021 ರ ಬ್ಯಾಚ್‌ನ ಮತ್ತು ಜಿಟಿಬಿ ಎನ್‌ಕ್ಲೇವ್ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾದ ನೇಹಾ ಪುನಿಯಾ ಒಂದೇ ಬಾರಿ ನಾಪತ್ತೆಯಾಗಿರುವುದು ತನಿಖೆಯಿಂದ ತಿಳಿದಿದೆ. ಬಳಿಕ ಸಂದೇಹ ಬಂದು ತನಿಖೆ ನಡೆದಾಗ ಅಸಲಿ ಸಂತ್ರಸ್ತರಿಗೆ ಹಣ ಸಿಗಲಿಲ್ಲ ಎನ್ನುವ ವಿಷಯ ಬೆಳಕಿಗೆ ಬಂದಿದೆ. ಅದಾಗಲೇ ಈ ಇಬ್ಬರೂ 2 ಕೋಟಿ ರೂಪಾಯಿಗಳಿಂದ ಜೀವನಪೂರ್ತಿ ಮಜಾ ಮಾಡುವುದು ಎಂದುಕೊಂಡು ವಿವಿಧ ಸ್ಥಳಗಳಿಗೆ ರಜೆಯ ಮಜಾ ಅನುಭವಿಸಲು ಹೋಗಿರುವುದು ತಿಳಿದಿದೆ.
ಇಬ್ಬರೂ ತಮ್ಮ ಸಂಗಾತಿಗಳಿಂದ ದೂರವಾಗಿ ಒಟ್ಟಿಗೇ ಇರಲು ಬಯಸಿದ್ದರು. ಒಟ್ಟಿಗೆ ಹೊಸ ಜೀವನವನ್ನು ನಿರ್ಮಿಸಲು ಯೋಜಿಸಿದರು. ಇಂದೋರ್ ತಲುಪಿದ ನಂತರ, ಅವರು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ನಗದು ಬಳಸಿ ಖರೀದಿಸಿದ್ದರು. ಸಿಕ್ಕಿಬೀಳಬಾರದು ಎನ್ನುವ ಕಾರಣಕ್ಕೆ ಕ್ಯಾಷ್ ಕೊಟ್ಟಿದ್ದರು! ಮಧ್ಯಪ್ರದೇಶದ ದೂರದ ಗುಡ್ಡಗಾಡು ಪ್ರದೇಶದಲ್ಲಿ ಯಾರ ಕಣ್ಣಿಗೂ ಬೀಳದಂತೆ ಹೋಗಿ ವಾಸಿಸುವ ಪ್ಲ್ಯಾನ್ ಕೂಡ ಮಾಡಿದ್ದರು. ಆದರೆ, ಅವರ ಈ ಯೋಜನೆ ಠುಸ್ ಆಗಿ ಈಗ ಸಿಕ್ಕಾಕಿಕೊಂಡಿದ್ದಾರೆ.
