Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆದಾಯ ಪ್ರಮಾಣಪತ್ರ ವಿಳಂಬ: ಹಾಸನ ಜಿಲ್ಲಾಧಿಕಾರಿ ಸೇರಿ ಅಧಿಕಾರಿಗಳಿಗೆ ₹2 ಲಕ್ಷ ದಂಡ ವಿಧಿಸಿದ ಹೈಕೋರ್ಟ್!

Spread the love

ಬೆಂಗಳೂರು: ‘ಅಜ್ಞಾನದ ಕೂಪದಲ್ಲಿ ಮುಳುಗಿರುವ ಅಧಿಕಾರಿ ವರ್ಗದ ಕರ್ತವ್ಯಲೋಪವನ್ನು ಕಡೆಗಣಿಸುವುದಾದರೂ ಹೇಗೆ’ ಎಂದು ಪ್ರಶ್ನಿಸಿರುವ ಹೈಕೋರ್ಟ್, ಆದಾಯ ಪ್ರಮಾಣ ಪತ್ರ ನೀಡಿಕೆಯಲ್ಲಿ ವಿಳಂಬ ಧೋರಣೆ ಪ್ರದರ್ಶಿಸಿದ ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಸೇರಿ ಅಧಿಕಾರಿ ವರ್ಗಕ್ಕೆ ₹2 ಲಕ್ಷ ದಂಡ ವಿಧಿಸಿದೆ.

ಈ ಸಂಬಂಧ ಚನ್ನರಾಯಪಟ್ಟಣದ ಬಿ.ಎನ್‌.ಮುತ್ತುಲಕ್ಷ್ಮಿ ಸಲ್ಲಿಸಿದ್ದ ರಿಟ್‌ ಅರ್ಜಿ (ಡಬ್ಲ್ಯು.ಪಿ.10897/2024) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಸ್ಪಷ್ಟವಾದ ಕಾನೂನುಗಳಿದ್ದರೂ ಅವುಗಳನ್ನು ಪಾಲನೆ ಮಾಡದ ಅಧಿಕಾರಿ ವರ್ಗ ಅರಿವಿನ ಕೊರತೆಯಿಂದ ಬಳಲುತ್ತಿದೆ. ಇಂತಹ ನಡೆ ಅಕ್ಷಮ್ಯ. ಹಾಗಾಗಿ, ಸಾರ್ವಜನಿಕ ಹುದ್ದೆಯನ್ನು ಹೊಂದಿರುವ ಎಲ್ಲರಿಗೂ ಎಚ್ಚರಿಕೆಯಾಗಲಿ ಎಂದು ಈ ದಂಡ ವಿಧಿಸಲಾಗುತ್ತಿದೆ’ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

‘ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಸದಸ್ಯರೂ ಆದ ಚನ್ನರಾಯಪಟ್ಟಣ ತಹಶೀಲ್ದಾರ್‌, ಸದಸ್ಯ ಕಾರ್ಯದರ್ಶಿಯಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ, ಹಾಸನ ಜಿಲ್ಲಾ ಪಂಚಾಯಿತಿ ಆಡಳಿತ ಉಪ ಕಾರ್ಯದರ್ಶಿ ಹಾಗೂ ಹಾಸನ ಜಿಲ್ಲಾಧಿಕಾರಿ ದಂಡದ ಮೊತ್ತವನ್ನು ಈ ಆದೇಶ ತಲುಪಿದ ನಾಲ್ಕು ವಾರಗಳ ಒಳಗಾಗಿ ತಮ್ಮ ಸ್ವಂತ ನಿಧಿಯಿಂದ ಅರ್ಜಿದಾರರಿಗೆ ಪಾವತಿ ಮಾಡತಕ್ಕದ್ದು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.

ಏನಿದು ಪ್ರಕರಣ?: ರಾಜ್ಯ ಪ್ರಾಸಿಕ್ಯೂಷನ್‌ ನಿರ್ದೇಶನಾಲಯ 181 ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ 2019ರ ಸೆಪ್ಟೆಂಬರ್‌ನಲ್ಲಿ ಅರ್ಜಿ ಆಹ್ವಾನಿಸಿತ್ತು. ಇದಕ್ಕೆ ಮುತ್ತುಲಕ್ಷ್ಮಿ ಕೂಡಾ 3ಎ ಪ್ರವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇವರ ಜಾತಿ-ಆದಾಯ ಪ್ರಮಾಣ ಪತ್ರದ ಪರಿಶೀಲಿಸಿದ್ದ ಅಧಿಕಾರಿಗಳು, ‘ಅರ್ಜಿದಾರರ ಪತಿ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಿದ್ದಾರೆ. ಇವರಿಬ್ಬರ ಕುಟುಂಬದ ವಾರ್ಷಿಕ ಆದಾಯ ₹8 ಲಕ್ಷ ಮೀರಿರುವ ಕಾರಣ ಮುತ್ತುಲಕ್ಷ್ಮಿ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ಅನರ್ಹರಾಗಿದ್ದಾರೆ’ ಎಂದು ಇವರ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದರು.

ಇದನ್ನು ಪ್ರಶ್ನಿಸಿದ್ದ ಮುತ್ತುಲಕ್ಷ್ಮಿ, ‘ಕಾನೂನು ಪ್ರಕಾರ ಪೋಷಕರ ಆದಾಯ ಪರಿಗಣಿಸಬೇಕು. ನನ್ನ ಗಂಡನ ಆದಾಯ ಪರಿಗಣಿಸಬಾರದು. ಇದಕ್ಕೆ ಪೂರಕವಾಗಿ ಕಾನೂನಿನ ಸಾಕಷ್ಟು ಪೂರ್ವ ನಿದರ್ಶನಗಳಿವೆ. ಆದ್ದರಿಂದ, ನನ್ನ ತಂದೆಯ ಆದಾಯವನ್ನು ಪರಿಗಣಿಸಿ ನನಗೆ ಸಿಂಧುತ್ವ ಪ್ರಮಾಣ ಪತ್ರ ವಿತರಿಸಬೇಕು’ ಎಂದು ಕೋರಿ ಸಕ್ಷಮ ಪ್ರಾಧಿಕಾರ ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರ ನೇತೃತ್ವದ ಸಮಿತಿಗೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ಹೈಕೋರ್ಟ್‌ ವಕೀಲೆ ಎ.ಆರ್.ಶಾರದಾಂಬ ವಾದ ಮಂಡಿಸಿದ್ದರು.


Spread the love
Share:

administrator

Leave a Reply

Your email address will not be published. Required fields are marked *