ಹರೆಯದವರಿಗೂ ಸಡ್ಡು ಹೊಡೆಯುವ ಉತ್ಸಾಹ; 90ರ ಹರೆಯದಲ್ಲೂ ಸ್ಟೀರಿಂಗ್ ಹಿಡಿದು ಅಬ್ಬರಿಸಿದ ವೃದ್ಧೆ!

ವಯಸ್ಸು ಆಗುತ್ತಿದ್ದಂತೆ ದೇಹದಲ್ಲಿ ಶಕ್ತಿ ಇರಲ್ಲ. ದಿನನಿತ್ಯದ ಕೆಲಸಗಳಿಗೂ ಇನ್ನೊಬ್ಬರ ಅವಲಂಬಿಸಬೇಕಾದ ಪರಿಸ್ಥಿತಿ. ಆದರೆ ಈ ವೃದ್ಧೆ ಮಹಿಳೆ (old woman) ಮಾತ್ರ ಈ ಮಾತಿಗೆ ತದ್ವಿರುದ್ಧವಾಗಿದ್ದಾರೆ. ವಯಸ್ಸು 90 ಆದ್ರೂ ಈ ಅಜ್ಜಿಯ ಉತ್ಸಾಹಕ್ಕೇನು ಕಮ್ಮಿ ಇಲ್ಲ. ತಮ್ಮ ಇಳಿವಯಸ್ಸಿನಲ್ಲಿಯೂ ಜಮ್ಮುಕಾಶ್ಮೀರದ (Jammu Kashmir) ರಸ್ತೆಗಳಲ್ಲಿ ಆಲ್ಟೋ ಕಾರನ್ನು ಬಿಂದಾಸ್ ಆಗಿ ಓಡಿಸುತ್ತಿದ್ದು, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೃದ್ಧೆಯ ಉತ್ಸಾಹ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
ಟೈಮ್ಸ್ ನೌ (Times Now) ಹೆಸರಿನ ಎಕ್ಸ್ ಖಾತೆಯಲ್ಲಿ 90 ರ ವೃದ್ಧೆ ಮಹಿಳೆಯೊಬ್ಬರು ಕಾರು ಓಡಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬ್ಲಾಗರ್ ವಿಶಾಲ್ ಅವರು ಅಜ್ಜಿ ಕಾರು ಓಡಿಸುವ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ವೃದ್ಧೆಯನ್ನು ಮಾತನಾಡಿಸಿದ ವೇಳೆ ಅವರ 90ಕ್ಕಿಂತ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ರಸ್ತೆಗಳಲ್ಲಿ ಸಲೀಸಾಗಿ ಕಾರು ಓಡಿಸುವುದನ್ನು ನೋಡಿ ಬ್ಲಾಗರ್ ಶಾಕ್ ಆಗಿರುವುದನ್ನು ನೀವು ನೋಡಬಹುದು.ಮಾರ್ಚ್ 4 ರಂದು ಹಂಚಿಕೊಳ್ಳಲಾದ ಈ ವಿಡಿಯೋವು ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಅವರು ಮಿನಿ ಹಾರ್ಟ್ ಅಟ್ಯಾಕ್ ಮಾಡಿ ಎಲ್ಲರ ಹೃದಯ ಗೆದ್ದಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಕಣ್ಣಿನಿಂದಲೇ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಎಕ್ಸ್ಪರ್ಟ್ ಗಳಿಗೂ ಸೆಡ್ಡು ಹೊಡೆಯುವಂತಿದ್ದಾರೆ ಈ ಅಜ್ಜಿ ಎಂದಿದ್ದಾರೆ.
