ಕಾಣಿಕೆಗೆ ಮೋಸದ ಕಪಟ – ಉತ್ತರಾಖಂಡದಲ್ಲಿ ನಕಲಿ ಬಾಬಾಗಳ ವಿರುದ್ಧ ಬಿಗಿ ಕ್ರಮ

ಡೆಹ್ರಾಡೂನ್: ಉತ್ತರಾಖಂಡ ಸರ್ಕಾರ ಆರಂಭಿಸಿರುವ ‘ಆಪರೇಷನ್ ಕಲಾನೇಮಿ’ಯ ಭಾಗವಾಗಿ, ಜನರನ್ನು ವಂಚಿಸಲು ಸಾಧುಗಳು ಮತ್ತು ಸಂತರ ವೇಷ ಧರಿಸಿದ 34 ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಇತ್ತೀಚಿನ ಬಂಧನದೊಂದಿಗೆ, ಡೆಹ್ರಾಡೂನ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 82 ನಕಲಿ ಬಾಬಾಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಆಪರೇಷನ್ ಕಲಾನೇಮಿ ಆರಂಭವಾಯಿತು ಎನ್ನಲಾಗಿದೆ. ಧರ್ಮದ ನೆಪದಲ್ಲಿ ಸಾರ್ವಜನಿಕ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಗುರುವಾರ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಅಜಯ್ ಸಿಂಗ್ ತಿಳಿಸಿದ್ದಾರೆ. “ಬಹು ತಂಡಗಳನ್ನು ರಚಿಸಲಾಗಿದ್ದು, ಜನರ ಭಾವನೆಗಳೊಂದಿಗೆ ಆಟವಾಡುವ ಇಂತಹ ವಂಚಕರ ಬಗ್ಗೆ ಮಾಹಿತಿ ಬಂದ ಸ್ಥಳಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಸಿಂಗ್ ಹೇಳಿದರು.ಭಾನುವಾರ ಬಂಧಿಸಲಾದ 34 ಜನರಲ್ಲಿ 23 ಮಂದಿ ಇತರ ರಾಜ್ಯಗಳ ನಿವಾಸಿಗಳು ಎಂದು ಅವರು ಹೇಳಲಾಗಿದೆ. ಕಳೆದ ಮೂರು ದಿನಗಳಲ್ಲಿ ಜಿಲ್ಲೆಯ ವಿವಿಧ ಪ್ರದೇಶಗಳಿಂದ 82 ಜನರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.ಬಂಧಿತರಲ್ಲಿ ಬಾಂಗ್ಲಾದೇಶಿ ಪ್ರಜೆ ರುಕ್ನ್ ರಕಮ್ ಅಲಿಯಾಸ್ ಶಾ ಆಲಂ ಕೂಡ ಸೇರಿದ್ದಾನೆ, ಆತನನ್ನು ಶುಕ್ರವಾರ ಡೆಹ್ರಾಡೂನ್ ಜಿಲ್ಲೆಯ ಸಹಸ್ಪುರ್ ಪ್ರದೇಶದಿಂದ ಬಂಧಿಸಲಾಯಿತು. ಅಭಿಯಾನ ಮುಂದುವರಿಯುತ್ತದೆ ಎಂದು ಪೊಲೀಸರು ಹೇಳುತ್ತಾರೆ. ಚಾರ್ ಧಾಮ್ ಯಾತ್ರೆ ಮತ್ತು ಕನ್ವರ್ ಯಾತ್ರೆ ನಡೆಯುತ್ತಿರುವುದರಿಂದ ನಕಲಿ ಬಾಬಾಗಳು ಹೆಚ್ಚು ಸಕ್ರಿಯರಾಗುತ್ತಿರುವುದರಿಂದ ಈ ಅಭಿಯಾನ ಮುಂದುವರಿಯಲಿದೆ ಎಂದು ಎಸ್‌ಎಸ್‌ಪಿ ಹೇಳಿದ್ದಾರೆ.ಗುರುವಾರ ಅಭಿಯಾನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ, “ಕಾಳನೇಮಿ ಎಂಬ ‘ಅಸುರ’ ಸಂತನಂತೆ ನಟಿಸುವ ಮೂಲಕ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದಂತೆಯೇ, ಇಂದಿನ ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಅಪರಾಧಗಳನ್ನು ಮಾಡುತ್ತಿರುವ ಅನೇಕ ‘ಕಾಳನೇಮಿ’ಗಳಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
