ಬಹುಮಾನದ ಆಸೆ ತೋರಿಸಿ ಓಟದ ಸ್ಪರ್ಧಿಗಳಿಗೆ ವಂಚನೆ: ನೂರಾರು ಜನರಿಗೆ ಮೋಸ

ರಾಯಚೂರು: ನಗರದ ಸ್ಟೇಶನ್ ರಸ್ತೆಯಲ್ಲಿ ಡಾ.ಅಬ್ದುಲ್ ಕಲಾಂ ಫೌಂಡೇಶನ್ ಮಸ್ಕಿ ಹೆಸರಿನಲ್ಲಿ ಒಂದು ಫ್ಲೆಕ್ಸ್ ಹಾಕಲಾಗಿತ್ತು. ಓಟದ ಸ್ಫರ್ಧೆಯ ಕುರಿತಾಗಿದ್ದ ಈ ಫ್ಲೆಕ್ಸ್ ನೋಡಿ ಹಲಾವರು ಸ್ಪರ್ಧಿಗಳು ನಂಬಿ ಹಣ ಕಟ್ಟಿ ಮೋಸ ಹೋಗಿದ್ದಾರೆ. ಫ್ಲೆಕ್ಸ್ನಲ್ಲಿ ರಾಯಚೂರಿನ ಮಸ್ಕಿಯಲ್ಲಿ ಓಟದ ಸ್ಪರ್ಧೆ ಏರ್ಪಡಿಸಲಾಗಿದ್ದು,ಸ್ಪರ್ಧಾಳುಗಳು ಐದು ಸಾವಿರ ಹಣ ಕೊಟ್ಟು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ ಎಂದು ಬರೆಯಲಾಗಿತ್ತು. ಈ ಐದು ಸಾವಿರ ರೂಪಾಯಿ ಪೈಕಿ ಹೆಸರು ನೊಂದಾಯಿಸಿಕೊಳ್ಳಲು ರೂ.1500 ಮುಂಗಡ ಹಣ ಕೊಡಬೇಕೆಂದು ಹೇಳಲಾಗಿತ್ತು.

ಮೊದಲನೇ ಬಹುಮಾನ 6 ಲಕ್ಷ, ಎರಡನೇ ಬಹುಮಾನ 5 ಲಕ್ಷ ಹಾಗೆಯೇ ಏಳನೇ ಬಹುಮಾನ 50 ಸಾವಿರ. ಹೀಗೆ ಸಾರ್ವಜನಿಕರನ್ನು ಅಬ್ದುಲ್ ಕಲಾಂ ಫೌಂಡೇಶನ್ ಹೆಸರಿನ ಆಯೋಜಕರು ನಂಬಿಸಿದ್ದರು. ಇದೇ ಫ್ಲೆಕ್ಸ್ ನಂಬಿ ರಾಜ್ಯದ ನಾನಾ ಕಡೆಗಳಿಂದ ಯುವಕರು ಮತ್ತು ಯುವತಿಯರು ಆಯೋಜಕರಿಗೆ ಹಣ ನೀಡಿದ್ದರು.ಓಟದ ಸ್ಪರ್ಧೆ ನಡೆಯುತ್ತದೆಯೆಂದು ನಂಬಿ ರಾಯಚೂರಿಗೆ ಬಂದಿರುವ ಸ್ಪರ್ಧಾಳುಗಳು ಈಗ ತಲೆಗೆ ಕೈಹೊತ್ತು ಕುಳಿತಿದ್ದಾರೆ.
ಸ್ಪರ್ಧಿಗಳನ್ನು ನಂಬಿಸಿ ಮೋಸ ಮಾಡಿದ್ದು ಹೇಗೆ?
ಆಯೋಜಕರು ಹಾಕಿದ್ದ ಪ್ಲೆಕ್ಸ್ ನೋಡಿ ಹಾಸನ,ಬೆಂಗಳೂರು, ಬೆಳಗಾವಿ,ಬಳ್ಳಾರಿ,ವಿಜಯನಗರ,ಬಾಗಲಕೋಟೆ,ಆಂದ್ರದ ಕರ್ನೂಲ್ ನಿಂದ ಸ್ಪರ್ಧಿಗಳು ರಾಯಚೂರಿಗೆ ಬಂದಿದ್ದರು. ರಾಯಚೂರಿಗೆ ಬಂದಿದ್ದ ಸ್ಪರ್ಧಾಳುಗಳಿಗೆ ತಿಳಿಸಿದ್ದ ಓಟದ ಸ್ಪರ್ಧೆಯ ವಿಳಾಸವೇ ತಪ್ಪಾಗಿತ್ತು. ಇತ್ತ ಸ್ಪರ್ಧಾಳುಗಳಿಂದ ಹಣ ಪಡೆದಿರುವವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ನಿನ್ನೆ ತಡ ರಾತ್ರಿ ಅನೇಕ ಯುವಕರು, ಯುವತಿಯರು ರಾಯಚೂರಿಗೆ ಬಂದು ಕಂಗಾಲಾಗಿದ್ದಾರೆ. ಒಂದು ಕಡೆ ಆಯೋಜಕರು ಪರಾರಿಯಾಗಿ ವಂಚಿಸಿದ್ದರೆ, ಇನ್ನೊಂದು ಕಡೆ ರಾಯಚೂರಿನಲ್ಲಿ ಉಳಿದುಕೊಳ್ಳಲು ಅವರಿಗೆ ಜಾಗವೇ ಗೊತ್ತಿಲ್ಲ. ಈ ಮಧ್ಯೆ ತಡ ರಾತ್ರಿಯಾಗಿದ್ದರಿಂದ ಊರುಗಳಿಗೆ ಮರಳಲು ಬಸ್ಗಳಿಲ್ಲದೇ ಪರದಾಡಿದ್ದಾರೆ. ಹೆಚ್ಚಿನದಾಗಿ ಕೂಲಿ ಮಾಡುವ ಮತ್ತು ಕಡು ಬಡತನದಲ್ಲಿರುವ ಮಕ್ಕಳೇ ಈ ನಕಲಿ ಓಟದ ಸ್ಪರ್ಧೆ ನಂಬಿ ವಂಚನೆಗೊಳಲಾಗಿದ್ದಾರೆ.
ಈ ವಂಚನೆಯ ವಿಷಯ ಜಿಲ್ಲೆಯ ಪೊಲೀಸರ ಗಮನಕ್ಕೂ ಬಂದಿದೆ. ಈ ಕುರಿತು ಪೊಲೀಸರು ಕೂಡ ಆಯೋಜಕರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಸ್ಪರ್ಧಾಳುಗಳಾಗಿ ಬಂದಿದ್ದ ಬಡ ಯುವಕರು ಈ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ಮನವಿ ಮಾಡ್ತಿದ್ದಾರೆ.
