ಸಾಲದ ಕಿರುಕುಳ: ಬಂಗಾರ ಹಾಗೂ ಹಣ ಕಳೆದುಕೊಂಡು ಮನನೊಂದು ಮಹಿಳೆ ಆತ್ಮಹತ್ಯೆ

ಮೂಡುಬಿದಿರೆ: ತೋಡಾರು ಗ್ರಾಮದ ಅಪಾರ್ಟ್‌ಮೆಂಟ್ ಒಂದರಲ್ಲಿ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ಶಫ್ರೀನಾ ಬಾನು (31) ಆ. 26ರಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವಾಝ್ ಹಾಗೂ ಶಪ್ರೀನಾ ಬಾನು ಅವರಿಗೆ ಪರಿಚಯವಿರುವ ಆಟೋ ಚಾಲಕ ಪುತ್ತಿಗೆ ನಿವಾಸಿ ಅಶ್ರಫ್ 7 ತಿಂಗಳ ಹಿಂದೆ ಶಫ್ರೀನಾ ಅವರಿಂದ 2 ಲಕ್ಷ ರೂ. ನಗದು ಹಾಗೂ 3 ಲಕ್ಷ ರೂ. ಮೌಲ್ಯದ ಬಂಗಾರವನ್ನು ಪಡೆದುಕೊಂಡಿದ್ದ. ನಗದು ಮತ್ತು ಬಂಗಾರವನ್ನು ವಾಪಸ್ ಕೊಡುವಂತೆ ಶಫೀನಾ ಬಾನು ಅಶ್ರಫ್‌ನಲ್ಲಿ ಪದೇ ಪದೇ ಕೇಳಿದರೂ ಆತ ಇವತ್ತು ಕೊಡುತ್ತೇನೆ-ನಾಳೆ ಕೊಡುತ್ತೇನೆ ಎಂದು ಸತಾಯಿಸುತ್ತ ಬಂದಿದ್ದ.
ಆ.26ರಂದು ಖಂಡಿತಾ ಕೊಡುತ್ತೇನೆ ಎಂದಿದ್ದವನು ಬೆಳಗ್ಗೆ 6 ಗಂಟೆಗೆ ಶಫೀನಾ ಬಾನು ಅವರಿಗೆ ಕರೆ ಮಾಡಿ “ಒಂದೋ ನನಗೆ ಇನ್ನೂ ಕಾಲಾವಕಾಶಬೇಕು ಇಲ್ಲವಾದಲ್ಲಿ ನೀನು ನೀಡಿದ ಹಣ ಮತ್ತು ಒಡವೆಗೆ ಏನು ಆಧಾರ ಇದೆ’ ಎಂದು ಉಡಾಫೆಯಾಗಿ ಮಾತನಾಡಿದ್ದ. ಆತನ ಈ ವರ್ತನೆಯಿಂದ ಮನನೊಂದು ಹತಾಶಳಾಗಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ, ಶಫ್ರೀನಾ ಬಾನು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ನವಾಝ್ ನೀಡಿದ ದೂರಿನಂತೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ದುಪ್ರೇರಣೆ ಪ್ರಕರಣ ದಾಖಲಾಗಿದ್ದು ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
