ಇಸ್ಲಾಮಾಬಾದ್ ದರ್ಗಾದಲ್ಲಿ ಭೀಕರ ಆತ್ಮಾಹುತಿ ದಾಳಿ: 31 ಮಂದಿ ಸಾ*ವು, 169 ಜನರಿಗೆ ಗಾಯ!

ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ (Islamabad) ದರ್ಗಾವೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 31 ಮಂದಿ ಸಾವಿಗೀಡಾಗಿದ್ದಾರೆ.

ತರ್ಲೈ ಇಮಾಮ್‌ಬರ್ಗಾದಲ್ಲಿ ಈ ದಾಳಿ ನಡೆದಿದೆ. ಸ್ಫೋಟದ ತೀವ್ರತೆಗೆ 31 ಜನ ಮೃತಪಟ್ಟಿದ್ದು, 169ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಫೋಟದ (Explosion) ಬಳಿಕ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಗಾಯಾಳುಗಳನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಮತ್ತು ಪಾಲಿಕ್ಲಿನಿಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಈ ದಾಳಿಯನ್ನು ಖಂಡಿಸಿದ್ದಾರೆ.

ಬಲೂಚಿಸ್ತಾನದಲ್ಲಿ ಪಾಕ್ ಕಾರ್ಯಾಚರಣೆ
ಪಾಕಿಸ್ತಾನಿ ಪಡೆಗಳು ಬಲೂಚಿಸ್ತಾನ ಪ್ರಾಂತ್ಯದಲ್ಲಿ ರದ್ದ್-ಉಲ್-ಫಿಟ್ನಾ-1 ಎಂಬ ಬೃಹತ್ ಕಾರ್ಯಾಚರಣೆ ವೇಳೆಯೇ ಇಸ್ಲಾಮಾಬಾದ್‌ನಲ್ಲಿ ಈ ದಾಳಿ ನಡೆದಿದೆ. ಜನವರಿ 26 ರಂದು ಪ್ರಾರಂಭಿಸಲಾದ ಕಾರ್ಯಾಚರಣೆಯಲ್ಲಿ, ಪಾಕಿಸ್ತಾನಿ ಪಡೆಗಳು 216 ಬಲೂಚ್ ಬಂಡುಕೋರರನ್ನು ಹತ್ಯೆಗೈದಿದ್ದರು. ಈ ಕಾರ್ಯಾಚರಣೆಯಲ್ಲಿ 22 ಭದ್ರತಾ ಸಿಬ್ಬಂದಿ ಮತ್ತು 36 ನಾಗರಿರು ಪ್ರಾಣ ಕಳೆದುಕೊಂಡಿದ್ದಾರೆ.
ಇತ್ತೀಚೆಗೆ ನಡೆದ 4ನೇ ದೊಡ್ಡ ದಾಳಿ
ಕಳೆದ ಮೂರು ತಿಂಗಳಲ್ಲಿ ಪಾಕ್‌ನಲ್ಲಿ ನಡೆದ 4ನೇ ದೊಡ್ಡ ಆತ್ಮಹತ್ಯಾ ಬಾಂಬ್ ದಾಳಿ ಇದಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಇಸ್ಲಾಮಾಬಾದ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿತ್ತು. ಈ ಅವಘಡದಲ್ಲಿ 12 ಜನರು ಸಾವನ್ನಪ್ಪಿ, 27 ಜನರು ಗಾಯಗೊಂಡಿದ್ದರು.
ಜ.24 ರಂದು ಪಾಕಿಸ್ತಾನದ (Pakistan) ವಾಯವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಾಂತಿ ಸಮಿತಿ ಸದಸ್ಯರೊಬ್ಬರ ನಿವಾಸದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದ (Wedding Ceremony) ವೇಳೆ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಇದರಲ್ಲಿ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದರು.