ಕಲಬುರಗಿಯಲ್ಲಿ ಹಾಡಹಗಲೇ ಚಿನ್ನದ ಅಂಗಡಿಗೆ ದರೋಡೆ: ಮಾಲೀಕನಿಗೆ ಗನ್ ತೋರಿಸಿ 3 ಕೆಜಿ ಚಿನ್ನ ಲೂಟಿ

ಕಲಬುರಗಿ: ಕಲಬುರಗಿ ನಗರದ ಸರಾಫ್ ಬಜಾರ್ನಲ್ಲಿರುವ ಮಾಲೀಕ್ ಚಿನ್ನದ ಅಂಗಡಿಗೆ ಹಾಡಹಗಲೇ ಖದೀಮರು ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಸಿನೀಮಿಯ ಶೈಲಿಯಲ್ಲಿ ಅಂಗಡಿಗೆ ನುಗ್ಗಿದ ಖದೀಮರು 2-3 ಕೆಜಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ತಲೆಗೆ ಕ್ಯಾಪ್, ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದಿದ್ದ ನಾಲ್ವರು ಅಂಗಡಿ ಮಾಲೀಕನಿಗೆ ಗನ್ ತೋರಿಸಿ ಬೆದರಿಸಿ, ದರೋಡೆ ಮಾಡಿದ್ದಾರೆ.

ಮಧ್ಯಾಹ್ನ 12.30ರಿಂದ 1 ಗಂಟೆಯ ನಡುವೆ ದರೋಡೆಯಾಗಿದೆ. ಖದೀಮರು ಚಿನ್ನದಂಗಡಿಗೆ ನುಗ್ಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಂಬಂಧ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಮಾತನಾಡಿ, ಮಾಲೀಕನ ತಲೆಗೆ ಗನ್ ಇಟ್ಟು ದರೋಡೆ ಮಾಡಿದ್ದಾರೆ. ದರೋಡೆ ಪ್ರಕರಣದ ತನಿಖೆಗೆ ಐದು ವಿಶೇಷ ತಂಡ ರಚನೆ ಮಾಡಿದ್ದೇವೆ. ಆದಷ್ಟು ಬೇಗ ದರೋಡೆಕೋರರ ಬಂಧನ ಮಾಡುತ್ತೇವೆ. ಅಂಗಡಿಯಲ್ಲಿದ್ದ 2-3 ಕೆಜಿ ಚಿನ್ನ ದರೋಡೆಯಾಗಿದೆ. ಈ ಅಂಗಡಿಯವರು ಪ್ರತಿನಿತ್ಯ 15-20 ಗ್ರಾಂ ಚಿನ್ನಾಭರಣ ಮಾರಟ ಮಾಡುತ್ತಿದ್ದರು ಎಂದು ಹೇಳಿದರು.
ಪ್ರತ್ಯಕ್ಷದರ್ಶಿ ಹೇಳಿದ್ದಿಷ್ಟು
ಘಟನೆ ಕುರಿತು ಪ್ರತ್ಯಕ್ಷದರ್ಶಿ ರಾಜಶೇಖರ್ ಮಾತನಾಡಿ, ದರೋಡೆಯಾದ ಬಳಿಕ ಅಂಗಡಿ ಮಾಲೀಕ ಕಿರುಚಿಕೊಂಡರು. ಕಿರುಚಿದ್ದನ್ನು ಕೇಳಿ ನಾನು ಓಡಿ ಹೋಗಿ ನೋಡಿದೆ. ಅಂಗಡಿ ಮಾಲೀಕರ ಕೈಕಾಲು ಕಟ್ಟಲಾಗಿತ್ತು. ನಾನು ಓಡಿ ಹೋಗವಷ್ಟರಲ್ಲಿ ದರೋಡೆಕೋರರು ಪರಾರಿಯಾಗಿದ್ದರು. ಹಾಡಹಗಲೇ ಈ ರೀತಿಯಾಗಿದ್ದು ನಮ್ಮಲ್ಲಿ ಭಯ ಮೂಡಿಸಿದೆ. ನಮಗಂತೂ ಸಾಕಷ್ಟು ಆತಂಕವಾಗಿದೆ. ಪ್ರತಿನಿತ್ಯ ಇಲ್ಲೇ ಇರುತ್ತಿದ್ದೆವು, ಇಲ್ಲಿಯವರೆಗೂ ಈ ರೀತಿ ಆಗಿರಲಿಲ್ಲ ಎಂದು ಹೇಳಿದರು.
