ವರದಕ್ಷಿಣೆಗಾಗಿ ಮಗಳ ಕೊಲೆ: ಶವ ಕಂಡು ಆಘಾತದಿಂದ ತಾಯಿಯೂ ಸಾವು, ಬಿಹಾರದಲ್ಲಿ ಹೃದಯವಿದ್ರಾವಕ ಘಟನೆ

ಬಿಹಾರ: ತಮ್ಮ ಮಗಳು ಎಂದೂ ಗಂಡನ ಮನೆಯಲ್ಲಿ ಸುಖವಾಗಿರಬೇಕು ಎಂಬುದು ತಂದೆ-ತಾಯಿಯ ಆಸೆಯಾಗಿರುತ್ತದೆ. ಆದರೆ ವರದಕ್ಷಿಣೆಗಾಗಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ, ಆ ತಾಯಿಯ ಪರಿಸ್ಥಿತಿ ಹೇಗಾಗಿರಬೇಡ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆ ಕಿರುಕುಳು ಹೆಚ್ಚಾಗಿವೆ. ಕೋಟ್ಯಂತರ ಹಣ ಖರ್ಚು ಮಾಡಿ ಮಗಳ ಮದುವೆ ಮಾಡಿಕೊಟ್ಟರೂ ಆಕೆಗೆ ಅಲ್ಲಿ ಸುಖವಿಲ್ಲ ಎಂಬುದನ್ನು ಕೇಳಿ ಪೋಷಕರು ಕೊರಗುತ್ತಿದ್ದಾರೆ.

ಬಿಹಾರದಲ್ಲಿ ವರದಕ್ಷಿಣೆಗಾಗಿ ಮಹಿಳೆಯ ಕೊಲೆ ಮಾಡಲಾಗಿದ್ದು, ಮಗಳ ಶವ ಕಂಡು ತಾಯಿಯೊಬ್ಬರು ಪ್ರಾಣ ಬಿಟ್ಟಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಮಹಿಳೆಯೊಬ್ಬಳನ್ನು ಆಕೆಯ ಅತ್ತೆ-ಮಾವ ಕತ್ತು ಹಿಸುಕಿ ಕೊಂದ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ಮಗಳ ಶವವನ್ನು ನೋಡಿದ ಕೆಲವೇ ಗಂಟೆಗಳಲ್ಲಿ ಮಹಿಳೆಯ ತಾಯಿಯೂ ಸಾವನ್ನಪ್ಪಿದ್ದಾರೆ.
ಮೃತರನ್ನು ಸುನೈನಾ ದೇವಿ ಮತ್ತು ಅವರ ತಾಯಿ ಬಬ್ಲಿ ದೇವಿ ಎಂದು ಗುರುತಿಸಲಾಗಿದೆ. ಸುನೈನಾ ದೇವಿಯ ಗಂಡನಿಗೆ ಸರಿಯಾದ ಕೆಲಸವಿರಲಿಲ್ಲ ಹೀಗಾಗಿ ಅವರ ನಡುವೆ ನಿತ್ಯವೂ ಜಗಳವಾಗುತ್ತಿತ್ತು.ಹಾಗೆಯೇ ಆಕೆಯ ಅತ್ತೆ-ಮಾವ ವರದಕ್ಷಿಣೆಗಾಗಿ ನಿರಂತರವಾಗಿ ಬೇಡಿಕೆ ಇಡುತ್ತಿದ್ದರು.
ಸುನೈನಾ ಅವರ ಸಾವಿನ ಸುದ್ದಿ ಅವರ ಕುಟುಂಬಕ್ಕೆ ತಲುಪಿದಾಗ, ಅವರ ತಾಯಿ ಭಾಗಲ್ಪುರದ ಜೆಎಲ್ಎನ್ ಆಸ್ಪತ್ರೆಗೆ ಸಂಬಂಧಿಕರೊಬ್ಬರೊಂದಿಗೆ ಇದ್ದರು. ಮಗಳ ಶವವನ್ನು ನೋಡಿದ ಬಬ್ಲಿ ದೇವ್ ಆಘಾತದಿಂದ ಕುಸಿದು ಬಿದ್ದರು. ನಂತರ ವೈದ್ಯರು ಬಬ್ಲಿ ದೇವಿಗೆ ಮೆದುಳಿನಲ್ಲಿ ರಕ್ತಸ್ರಾವವಾಗಿದ್ದು, ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ.
ಏತನ್ಮಧ್ಯೆ, ಸುನೈನಾ ಅವರ ಮರಣೋತ್ತರ ಪರೀಕ್ಷೆಯ ಬಗ್ಗೆ ಎರಡೂ ಕುಟುಂಬಗಳ ನಡುವೆ ವಿವಾದವೂ ಇತ್ತು. ಆದರೆ, ಪೊಲೀಸರು ಮಧ್ಯಪ್ರವೇಶಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
