ಬಾಯ್‌ಫ್ರೆಂಡ್‌ನ ಆಸೆಗಾಗಿ ಅತ್ತೆಯನ್ನು ಕೊಂದು ಚಿನ್ನಾಭರಣ ದೋಚಿದ ಸೊಸೆ; ಚಿಕ್ಕಮಗಳೂರಿನಲ್ಲಿ ಘಟನೆ

ಚಿಕ್ಕಮಗಳೂರು: ಬಾಯ್‌ಫ್ರೆಂಡ್‌ನ ಅಸೆಗಾಗಿ ಅತ್ತೆಯ ಪ್ರಾಣ ತೆಗೆದಿದ್ದಲ್ಲದೆ, ಆಕೆಯ ಚಿನ್ನಾಭರಣವನ್ನೂ ಕದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ತಡಗ ಗ್ರಾಮದಲ್ಲಿ ನಡೆದಿದೆ. ಸೊಸೆ ಅಶ್ವಿನಿ ತನ್ನ ಅತ್ತೆ, 75 ವರ್ಷದ ದೇವಿರಮ್ಮ ಅವರನ್ನು ಕೊಲೆ ಮಾಡಿರುವ ಆರೋಪದ ಮೇಲೆ ಬಂಧಿತಳಾಗಿದ್ದಾಳೆ. ಅತ್ತೆಯನ್ನು ಸ್ವತಃ ಸೊಸೆಯೇ ಕೊಲೆ ಮಾಡಿರುವ ವಿಚಾರ, ಚಿನ್ನಾಭರಣ ನಾಪತ್ತೆಯಾಗಿದ್ದರಿಂದ ಗೊತ್ತಾಗಿದೆ.

ಆಗಸ್ಟ್ 10 ರಂದು ಈ ಘಟನೆ ನಡೆದಿದ್ದು, ಅತ್ತೆ ದೇವಿರಮ್ಮ ಅವರಿಗೆ ಅಶ್ವಿನಿ ಮುದ್ದೆಯಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ನೀಡಿದ್ದಳು. ಮಾತ್ರೆ ಸೇವಿಸಿದ ಬಳಿಕ ದೇವಿರಮ್ಮ ಅವರಿಗೆ ವಾಂತಿಯಾಗಿ, ದೇಹಸ್ಥಿತಿ ಹದಗೆಟ್ಟಿತ್ತು. ಮರುದಿನ, ಅಂದರೆ ಆಗಸ್ಟ್ 11 ರಂದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ದೇವಿರಮ್ಮ ಮೃತಪಟ್ಟಿದ್ದರು. ಅತ್ತೆಯ ಸಾವಿನ ಬಗ್ಗೆ ಕಥೆ ಕಟ್ಟಿದ ಅಶ್ವಿನಿ, ಕುಟುಂಬ ಸದಸ್ಯರನ್ನು ನಂಬಿಸಿ ಅಂತ್ಯಸಂಸ್ಕಾರವನ್ನೂ ಮಾಡಿಸಿದ್ದಳು.
ಆದರೆ, ಮೂರು ದಿನಗಳ ನಂತರ ದೇವಿರಮ್ಮ ಅವರ ಚಿನ್ನಾಭರಣ ನಾಪತ್ತೆಯಾಗಿರುವುದು ಕುಟುಂಬಸ್ಥರ ಗಮನಕ್ಕೆ ಬಂದಿದೆ. ಈ ಬಗ್ಗೆ ಸೊಸೆ ಅಶ್ವಿನಿಯನ್ನು ಪ್ರಶ್ನಿಸಿದಾಗ, ಆಕೆ ಕಳ್ಳತನದ ಬಗ್ಗೆ ಒಪ್ಪಿಕೊಂಡಿದ್ದಾಳೆ. ಕೂಡಲೇ ಕುಟುಂಬಸ್ಥರು ಅಜ್ಜಂಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಶ್ವಿನಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ. ಕಳ್ಳತನ ಮಾಡಿರುವ ಚಿನ್ನಾಭರಣ ಹಾಗೂ ಹಣವನ್ನು ತನ್ನ ಬಾಯ್‌ಫ್ರೆಂಡ್ ಆಂಜನೇಯನಿಗೆ ನೀಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಆಂಜನೇಯನನ್ನು ಸಹ ಬಂಧಿಸಿ, ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
