ದತ್ತಾತ್ರೇಯ ದರ್ಗಾ ವಿವಾದ- ಗೋರಿ ನಕಲಿ ಎಂದು ಪಟ್ಟು ಹಿಡಿದ ಹಿಂದೂ ಸಂಘಟನೆಗಳು

ಚಿಕ್ಕಮಗಳೂರು : ಚಿಕ್ಕಮಗಳೂರಿನ (chikkamagaluru) ಇನಾಂ ದತ್ತಾತ್ರೇಯ ಬಾಬಾ ಬುಡನ್ (Baba Budangiri )ಸ್ವಾಮಿ ದರ್ಗಾದ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ದತ್ತಪೀಠದಲ್ಲಿ (Dattapeeta) ನಕಲಿ ಗೋರಿ ನಿರ್ಮಿಸಿದ್ದು, ಈ ಬಗ್ಗೆ ಸತ್ಯ ತಿಳಿಯಲು ಜಿಪಿಎಸ್ ಆಧುನಿಕ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ.
ಸದ್ಯ ಪ್ರಕರಣ ಎಸ್ಐಟಿ SIT ರಚನೆ ಮಾಡಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಬಿಗಿಪಟ್ಟು ಹಿಡಿದಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಸದ್ಯ ಇದೇ ವಿಚಾರ ಹಿಂದೂ ಮುಖಂಡರಲ್ಲಿ ಚರ್ಚೆಗೆ ಕಾರಣವಾಗಿದ್ದು, ಭವಿಷ್ಯದ ಹೋರಾಟದ ಬಗ್ಗೆಯೂ ಸಮಗ್ರವಾಗಿ ಚರ್ಚೆ ಮಾಡಲಾಗುತ್ತಿದೆ.

2017ರ ಡಿಸೆಂಬರ್ 3 ರಂದು ದತ್ತ ಜಯಂತಿ ದಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾ ಆವರಣದಲ್ಲಿದ್ದ ಎರಡು ಗೋರಿಗಳನ್ನು ಧ್ವಂಸಗೊಳಿಸಿದ್ದ ಘಟನೆ ನಡೆದಿತ್ತು. ಈ ಕುರಿತಾಗಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಸುಮಾರು 14 ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿತ್ತು.
ಇನ್ನು, ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ಇಂದು ಚಿಕ್ಕಮಗಳೂರಿನಲ್ಲಿ ಸಾರ್ವಜನಿಕವಾಗಿ ಪ್ರಾಯಶ್ಚಿತ ಮೌನ ಪ್ರತಿಭಟನೆ ನಡೆಸಲಾಗಿದೆ.
ಶಾಸಕಿ ವಿರುದ್ಧ ದಲಿತ ಸಂಘರ್ಷ ಸಮಿತಿ, ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘದಿಂದ ಗಂಭೀರ ಆಕ್ರೋಶ ವ್ಯಕ್ತವಾಗುತ್ತಿದ್ದು, ನಗರದ ನ್ಯಾಯಾಲಯದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಎದುರು ಈ ಮೌನ ಪ್ರತಿಭಟನೆ ನಡೆಯಿತು. ಈ ಮೂಲಕ ಶಾಸಕಿಯ ಗೆಲುವಿಗೆ ಶ್ರಮಿಸಿ ತಪ್ಪು ಮಾಡಿದ್ದೇವೆ ಎಂದು ಪ್ರತಿಭಟನಾಕಾರರು ಖಂಡನೆ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ಮೂಡಿಗೆರೆಯಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಶಾಸಕಿ ನಯನಾ ಮೋಟಮ್ಮ ಅವರು ಕೇಸರಿ ಶಾಲು ಧರಿಸಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಜೊತೆ ವೇದಿಕೆ ಹಂಚಿಕೊಂಡಿದ್ದರು. ಇದು ಹಲವರ ಹುಬ್ಬೇರುವಂತೆ ಮಾಡಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ್ದ ಶಾಸಕಿ ನಯನಾ, ಇಂದು ಕೇಸರಿ ಶಾಲು ಹಾಕಿ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರೂ ಬಂದಿದ್ದಾರೆ. ಈ ಬಗ್ಗೆ ಹಲವರಿಗೆ ಪ್ರಶ್ನೆಗಳಿವೆ. ನದಿ ಎಂದರೆ ಕಾಂಗ್ರೆಸ್ಸಾ, ದಡ ಎಂದರೆ ಬಿಜೆಪಿಯಾ ಎಂಬ ಶಂಕೆ ಬೇಡ ಎಂದಿದ್ದರು. ಅಲ್ಲದೇ ಓರ್ವ ಹಿಂದೂವಾಗಿ, ದಲಿತೆಯಾಗಿ ಮೂಡಿಗೆರೆಯಲ್ಲಿ ಜನಿಸಿದ್ದೇನೆ. ಮುಂದೆ ಬಿಜೆಪಿಗೆ ಹೋಗ್ತಿನೊ, ಕಾಂಗ್ರೆಸ್ಸಿನಲ್ಲೇ ಉಳಿತಿನೋ, ಬಿಎಸ್‌ಪಿ ಅಥವಾ ಎಸ್‌ಡಿಪಿಐ ಸೇರುತ್ತೇನೋ ಎಂಬ ಪ್ರಶ್ನೆಗೆ ಮೂರು ವರ್ಷ ಕಾಯೋಣ ಎಂದು ಹೇಳಿದ್ದರು.
ನಾನು ಗಣಪತಿಗಾಗಿ, ಧರ್ಮಕ್ಕಾಗಿ ಬಂದಿದ್ದೇನೆ. ಶಾಸಕಿಯಾಗಿ ಪಕ್ಷ ಪ್ರತಿನಿಧಿಸುವುದು ಆ ನಂತರ, ಈಗ ಗಣಪತಿ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಇಲ್ಲಿಗೆ ಬಂದಿದ್ದೇನೆ. ಆದ್ದರಿಂದ ಯಾವ ಪಕ್ಷದವರಿಗೂ ಪ್ರಶ್ನೆಗಳು ಉಳಿಯಬಾರದು ಎಂದು ಸ್ಪಷ್ಟಪಡಿಸಿದ್ದರು.
