ದತ್ತಪೀಠ ವಿವಾದ: ನಿಷೇಧಿತ ಸ್ಥಳದಲ್ಲಿ ಮಾಂಸಾಹಾರ ಸೇವನೆ ; ಹಿಂದೂ ಸಂಘಟನೆಗಳ ಆಕ್ರೋಶ

ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಆವರಣದಲ್ಲಿ ಮತ್ತೆ ವಿವಾದ (bababudangiri inam datta peetha) ಎದ್ದಿದೆ. ನಿಷೇಧಿತ ಹೋಮ ಮಂಟಪದ ಪಕ್ಕದಲ್ಲೇ ಮುಸ್ಲಿಂ ಕುಟುಂಬ ಮಾಂಸಾಹಾರ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಜಿಲ್ಲಾಡಳಿತ ಈ ವಿವಾದಿತ ಪ್ರದೇಶದ 200 ಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರ ಸೇವನೆಗೆ ಪೂರ್ವದಲ್ಲೇ ನಿಷೇಧ ಹೇರಿತ್ತು. ಆದರೂ ನಿಯಮ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿದ ಈ ದೃಶ್ಯಗಳು ಆಕ್ರೋಶಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಅಧಿಕಾರಿಗಳು ವಿಷಯವನ್ನು ಪರಿಶೀಲಿಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿ ಶಾಂತವಾಗಿದೆ ಎಂದು ತಿಳಿಸಲಾಗಿದೆ.
ನಿಷೇಧಿತ ಪ್ರದೇಶದಲ್ಲಿ ಮಾಂಸ ಸೇವಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ
ಕಾರ್ತಿಕ ಮಾಸದಲ್ಲಿ ನಡೆಯುವ ದತ್ತಮಾಲಾ ಅಭಿಯಾನಕ್ಕೆ ಈ ವರ್ಷ ಅನುಮತಿ ನೀಡಿಲ್ಲ ಎಂದು ದತ್ತಪೀಠ ಸೇವಾ ಸಮಿತಿಯ ಅಧ್ಯಕ್ಷ ರಂಜಿತ್ ಶೆಟ್ಟಿ ಆರೋಪಿಸಿದ್ದಾರೆ. ಹಿಂದೂ ಆಚರಣೆಗಳಿಗೆ ತಡೆ, ಆದರೆ ನಿಷೇಧಿತ ಪ್ರದೇಶದಲ್ಲಿ ಮಾಂಸ ಸೇವಿಸಿದವರಿಗೆ ಕ್ರಮವಾಗದೇ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಹೋಮ ಮಂಟಪದ ಪಕ್ಕದಲ್ಲೇ ಮಾಂಸಾಹಾರ ನಡೆದಿದ್ದು, ಇದಕ್ಕೆ ವೀಡಿಯೋ ಸಾಕ್ಷಿ. ಆದರೆ ಜಿಲ್ಲಾಡಳಿತ ಇದನ್ನು ಚಿತ್ರಾಹ್ನವೆಂದು ಹೇಳುತ್ತಿದೆ ಎಂದು ಶೆಟ್ಟಿ ಹೇಳಿದರು. ಶ್ರೀ ರಾಮ ಸೇನೆ, ವಿಹೆಚ್ಪಿ ಹಾಗೂ ಭಜರಂಗ ದಳದ ನೇತೃತ್ವದಲ್ಲಿ ದತ್ತಜಯಂತಿ ಆಚರಣೆ ಜರುಗುವುದಾಗಿ ತಿಳಿಸಿದರು.
ಈ ಹಿಂದೆಯೂ ಹಲವು ವಿವಾದಕ್ಕೆ ಸಿಲುಕಿದ್ದ ಬಾಬಾ ಬುಡನ್ ಸ್ವಾಮಿ ದರ್ಗಾ
ಬಾಬಾಬುಡನ್ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಯಾರಿಗೆ ಸೇರಿದ್ದು ಎಂಬ ಬಗ್ಗೆ ವಾದ ವಿವಾದಗಳು ಹಲವು ಬಾರಿ ಕೇಳಿ ಬಂದಿತ್ತು. ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎನ್ನುವುದು ಮೂಲ ಸರ್ಕಾರಿ ದಾಖಲಾತಿಗಳಲ್ಲಿ ಇರುವ ಹೆಸರಾಗಿದ್ದು, ಈ ಸ್ಥಳವನ್ನು ಬಾಬಾ ಬುಡನ್ ಗಿರಿ ಎಂದೂ ಮತ್ತು ಇನಾಂ ದತ್ತಾತ್ರೇಯ ಪೀಠ ಎಂದೂ ಕರೆಯುತ್ತಾರೆ. 2022 ರಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದ ಈ ಧಾರ್ಮಿಕ ಕೇಂದ್ರ ನಮ್ಮದು ಎಂದು ಎರಡೂ ಧರ್ಮದವರ ಮಧ್ಯೆ ವಿವಾದ ಸೃಷ್ಟಿಯಾಗಿತ್ತು.
ಹಾಗೆಯೇ 2025ರ ಆಗಸ್ಟ್ ಅಲ್ಲಿ ದತ್ತಪೀಠದಲ್ಲಿ ನಕಲಿ ಗೋರಿ ನಿರ್ಮಿಸಲಾಗಿದೆ ಎಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಈ ಬಗ್ಗೆ ಸತ್ಯ ತಿಳಿಯಲು ಎಸ್ಐಟಿ ರಚನೆ ಮಾಡಿ, ಜಿಪಿಎಸ್ ಆಧುನಿಕ ತಂತ್ರಜ್ಞಾನ ಬಳಸಿ ಉತ್ಖನನ ಮಾಡುವಂತೆ ಹಿಂದೂ ಸಂಘಟನೆಗಳು ಸರ್ಕಾರಕ್ಕೆ ಮನವಿಯನ್ನು ಸಹ ಮಾಡಿತ್ತು.