ಬೆಂಗಳೂರಿನಲ್ಲಿ ಖತರ್ನಾಕ್ ಹನಿಟ್ರ್ಯಾಪ್ ಕಿಲಾಡಿ ಸಂಜನಾ ಬಂಧನ: ಇನ್ಸ್ಪೆಕ್ಟರ್ ಸೇರಿದಂತೆ ಹಲವರಿಗೆ ವಂಚಿಸಿದ ಕಿರಾತಕಿಯ ಕರಾಳ ಮುಖ ಬಯಲು

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸತೀಶ್ ಅವರನ್ನು ಪ್ರೀತಿಸುವಂತೆ ಪೀಡಿಸಿ, ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ ಪ್ರಕರಣದಲ್ಲಿ ವನಜಾ ಅಲಿಯಾಸ್ ಸಂಜನಾ ಎಂಬ ಖತರ್ನಾಕ್ ವಂಚಕಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆಕೆಯ ಸರಣಿ ವಂಚನೆಗಳ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಈಕೆ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಸ್ನೇಹ ಬೆಳೆಸುತ್ತಿದ್ದಳು.


ಅವರನ್ನು ಮನೆಗೆ ಊಟಕ್ಕೆ ಆಹ್ವಾನಿಸಿ ದೈಹಿಕ ಸಂಪರ್ಕ ಬೆಳೆಸುತ್ತಿದ್ದ ಸಂಜನಾ, ಆ ದೃಶ್ಯಗಳನ್ನು ಗೌಪ್ಯವಾಗಿ ವಿಡಿಯೋ ಮತ್ತು ಫೋಟೋ ಮಾಡಿಕೊಂಡು ಬಳಿಕ ಬ್ಲ್ಯಾಕ್ಮೇಲ್ ಮಾಡಿ ಹಣ ಹಾಗೂ ಚಿನ್ನಾಭರಣಗಳನ್ನು ಕಸಿದುಕೊಳ್ಳುತ್ತಿದ್ದಳು ಎಂಬ ಗಂಭೀರ ಆರೋಪಗಳಿವೆ. ಈ ಹಿಂದೆ ಸತೀಶ್ ರೆಡ್ಡಿ ಎಂಬ ಗುತ್ತಿಗೆದಾರನನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಲಕ್ಷಾಂತರ ರೂಪಾಯಿ ಹಣ, ಚಿನ್ನದ ಆಭರಣಗಳನ್ನು ದೋಚಿದ್ದಲ್ಲದೆ, ಅವರ ಹೆಸರಲ್ಲಿದ್ದ ಎರಡು ಅಂತಸ್ತಿನ ಕಟ್ಟಡವನ್ನೇ ಲಪಟಾಯಿಸಲು ಸಂಚು ರೂಪಿಸಿ ಕೆ.ಆರ್.ಪುರಂ ಠಾಣೆಯಲ್ಲಿ ಕೇಸ್ ದಾಖಲಾಗುವಂತೆ ಮಾಡಿದ್ದಳು.

ಈಕೆಯ ಜಾಲ ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲದೆ ಪೊಲೀಸ್ ಅಧಿಕಾರಿಗಳಿಗೂ ಹಬ್ಬಿತ್ತು; 2018ರಲ್ಲಿ ಹೆಡ್ ಕಾನ್ಸ್ಟೇಬಲ್ ಒಬ್ಬರ ವಿರುದ್ಧ ಮದುವೆ ನೆಪದಲ್ಲಿ ವಂಚನೆ ಮಾಡಿದ್ದಾರೆ ಎಂದು ಸುಳ್ಳು ದೂರು ನೀಡಿ ಕಿರುಕುಳ ನೀಡಿದ್ದಳು. ಇತ್ತೀಚೆಗೆ ಇನ್ಸ್ಪೆಕ್ಟರ್ ಸತೀಶ್ ಅವರಿಗೆ ತಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರ ಆಪ್ತೆ ಎಂದು ರಾಜಕಾರಣಿಗಳ ಜೊತೆಗಿರುವ ಫೋಟೋ ತೋರಿಸಿ ಬೆದರಿಕೆ ಹಾಕಿ, ಪ್ರೀತಿಸುವಂತೆ ಮತ್ತು ಮದುವೆಯಾಗುವಂತೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಿದ್ದಳು. ಸದ್ಯ ಜೈಲು ಪಾಲಾಗಿರುವ ಈ ಕಿಲಾಡಿ ಸಂಜನಾಳಿಂದ ಇನ್ನೂ ಎಷ್ಟು ಜನ ವಂಚನೆಗೊಳಗಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ.