ಮೇಲ್ಜಾತಿಯವರ ಹಲ್ಲೆಯಿಂದ ಮನನೊಂದು ದಲಿತ ಯುವಕ ಆತ್ಮಹತ್ಯೆ ಆರೋಪ!

ಅಹ್ಮದಾಬಾದ್: ಗುಜರಾತ್‌ನ ಬನಸ್ಕಂತ ಜಿಲ್ಲೆಯಲ್ಲಿ ಮೇಲ್ಜಾತಿಯ ಐವರು ತಮ್ಮಂತೆಯೇ ಬಟ್ಟೆ ಧರಿಸಿದ್ದಕ್ಕೆ ಅವಮಾನಿಸಿ, ಹಲ್ಲೆ ನಡೆಸಿದ್ದರಿಂದ ಮನನೊಂದು ದಲಿತ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಬನಸ್ಕಂತ ಜಿಲ್ಲೆಯ ವಾವ್ ತಾಲೂಕಿನ ವಸರ್ದಾ ಗ್ರಾಮದ ನಿವಾಸಿ ಮಹೇಂದ್ರ ಕಲಾಭಾಯಿ ಪರ್ಮಾರ್(19) ಜುಲೈ 10ರಂದು ನಾಪತ್ತೆಯಾಗಿದ್ದರು.
ಇದಾದ ಎರಡು ದಿನಗಳ ನಂತರ ಜುಲೈ 12ರಂದು ಅವರ ಮೃತದೇಹ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದೆ.
ಮಹೇಂದ್ರ ಅವರ ಚಿಕ್ಕಪ್ಪ ಬಿಜಲ್ಭಾಯ್ ಪರ್ಮಾರ್ ವಾವ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಖೇತಾಭಾಯಿ ರಬಾರಿ, ಸೆಂಧಭಾಯಿ ರಬಾರಿ, ರುದಾಭಾಯಿ ರಬಾರಿ, ಅಮ್ರಭಾಯ್ ರಬಾರಿ ಮತ್ತು ಲಖಭಾಯ್ ರಬಾರಿ ತಮ್ಮ ಸಮುದಾಯದ ಸದಸ್ಯರು ಸಾಮಾನ್ಯವಾಗಿ ಧರಿಸುವ ಬಟ್ಟೆಯನ್ನು ಯಾಕೆ ಧರಿಸಿದ್ದು ಎಂದು ಪ್ರಶ್ನಿಸಿ ಮಹೇಂದ್ರನಿಗೆ ಗ್ರಾಮ ಪಂಚಾಯತ್ ಕಚೇರಿಯ ಬಳಿ ಥಳಿಸಿ ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಐವರು ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯ ನಿಬಂಧನೆಗಳು ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
