ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ: ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಏನು ಪರಿಣಾಮ ಬೀರುತ್ತದೆ?

ಅನೇಕರಿಗೆ ಎದ್ದ ತಕ್ಷಣ ಕಾಫಿ (Coffee) ಕುಡಿಯುವ ಅಭ್ಯಾಸವಿರುತ್ತದೆ. ತಮ್ಮ ದಿನವನ್ನು ಒಂದು ಕಪ್ ಕಾಫಿಯೊಂದಿಗೆ ಪ್ರಾರಂಭಿಸುತ್ತಾರೆ. ಇದಲ್ಲದೆ, ಆಫೀಸ್ ಗಳಲ್ಲಿ ಕೆಲಸ ಮಾಡುವವರು ಕಾಫಿ ಕುಡಿಯುವುದಕ್ಕಾಗಿಯೇ ವಿರಾಮ ತೆಗೆದುಕೊಂಡು ಅದನ್ನು ಕುಡಿಯುತ್ತಾ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ.

ಹೌದು. ಕೆಲವರಿಗೆ ಕಾಫಿ ಕೇವಲ ಪಾನೀಯವಲ್ಲ. ಒಂದು ರೀತಿಯ ಚೈತನ್ಯ ತುಂಬುವ ಬೂಸ್ಟ್. ಕಚೇರಿಯಲ್ಲಿ ತುಂಬಾ ಸಮಯಗಳ ಕಾಲ ಕುಳಿತು ಕೆಲಸ ಮಾಡಿದ ನಂತರ ಕಾಫಿ ಕುಡಿಯುವುದರಿಂದ ಆಯಾಸ ಕಡಿಮೆಯಾಗುತ್ತದೆ ಎಂಬ ಭಾವನೆ ಹಲವರಿಗಿದೆ. ಆದರೆ ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ನಿಮ್ಮ ರಕ್ತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಪ್ರತಿದಿನ ಕಾಫಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಮಧುಮೇಹ (Diabetic Patients) ಇರುವವರು ಕಾಫಿ ಸೇವಿಸಬಹುದೇ ಎಂಬುದರ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.
ಕಾಫಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆಯೇ?
ಕಾಫಿಯಲ್ಲಿ ಕೆಫೀನ್ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವು ಅಧ್ಯಯನಗಳು (ಮೇಯೊ ಕ್ಲಿನಿಕ್, ವೆಬ್ಎಂಡಿ) ಈ ಕೆಫೀನ್ ತಾತ್ಕಾಲಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಿವೆ. ಏಕೆಂದರೆ ಕೆಫೀನ್ ಅಡ್ರಿನಾಲಿನ್ ನಂತಹ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸುತ್ತದೆ. ಇದು ತಾತ್ಕಾಲಿಕವಾಗಿ ಸಕ್ಕರೆಯನ್ನು ಸಂಸ್ಕರಿಸುವ ಜೀವಕೋಶಗಳ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯ ಮೇಲೂ ಪರಿಣಾಮ ಬೀರುತ್ತದೆ, ಅಂದರೆ ನಿಮ್ಮ ದೇಹದ ಜೀವಕೋಶಗಳು ಇನ್ಸುಲಿನ್ ಹಾರ್ಮೋನ್ಗೆ ಸೂಕ್ತವಾಗಿ ಪ್ರತಿಕ್ರಿಯಿಸುವುದಿಲ್ಲ. ಈ ವಿಷಯ ಸ್ವಲ್ಪ ಗೊಂದಲಮಯವಾಗಿ ಕಾಣಿಸಬಹುದು. ಕೆಫೀನ್ ಜೊತೆಗೆ, ಕಾಫಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಮೆಗ್ನೀಸಿಯಮ್ ನಂತಹ ಅನೇಕ ಇತರ ಜೈವಿಕ ಸಕ್ರಿಯ ಸಂಯುಕ್ತಗಳಿವೆ. ಈ ಅಂಶಗಳು ದೇಹದಲ್ಲಿ ಉರಿಯೂತದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಕೆಲವು ಅಧ್ಯಯನಗಳು ಇದು ದೀರ್ಘಾವಧಿಯಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ.
ಬ್ಲಾಕ್ ಕಾಫಿ vs ಸಕ್ಕರೆ ಕಾಫಿ
ನೀವು ಯಾವ ರೀತಿಯ ಕಾಫಿ ಕುಡಿಯುತ್ತಿದ್ದೀರಿ ಎಂಬುದರ ಮೇಲೆ ನಿಮ್ಮ ಸಮಸ್ಯೆ ನಿರ್ಧಾರವಾಗುತ್ತದೆ. ಕಾಫಿಗೆ ಸಕ್ಕರೆ, ಕ್ರೀಮ್ ಅಥವಾ ಫ್ಲೇವರ್ಡ್ ಸಿರಪ್ಗಳನ್ನು ಸೇರಿಸುವುದರಿಂದ ಖಂಡಿತವಾಗಿಯೂ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಆದರೆ ಸಕ್ಕರೆ ಮತ್ತು ಹಾಲು ಇಲ್ಲದೆ ಬ್ಲಾಕ್ ಕಾಫಿಯಲ್ಲಿ ಕ್ಯಾಲೊರಿಗಳು ಮತ್ತು ಕಾರ್ಬೋಹೈಡ್ರೇಟ್ಗಳು ಬಹಳ ಕಡಿಮೆ. ಅದಕ್ಕಾಗಿಯೇ ತಜ್ಞರು ಬ್ಲಾಕ್ ಕಾಫಿ ಒಳ್ಳೆಯ ಆಯ್ಕೆ ಎಂದು ಹೇಳುತ್ತಾರೆ.
ಮಧುಮೇಹ ರೋಗಿಗಳಿಗೆ ಇಲ್ಲಿದೆ ಸರಳ ಸಲಹೆ
ಪ್ರತಿಯೊಬ್ಬ ವ್ಯಕ್ತಿಯ ದೇಹವು ಕೆಫೀನ್ಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಕೆಲವು ವ್ಯಕ್ತಿಗಳಿಗೆ ಕೆಫೀನ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳವಾಗಬಹುದು. ಇತರರಿಗೆ ಯಾವುದೇ ರೀತಿಯಲ್ಲಿ ಪರಿಣಾಮ ಬಿರದಿರಬಹುದು. ಆದರೆ ಮಧುಮೇಹ ಇರುವವರು, ಕಾಫಿ ಸೇವಿಸುವ ಸಮಯ ಮತ್ತು ಪ್ರಮಾಣದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಅದಕ್ಕಾಗಿಯೇ ತಜ್ಞರು ಕಾಫಿ ಕುಡಿಯುವಾಗ ಹೆಚ್ಚಿನ ಕಾಳಜಿ ವಹಿಸಿ ಎಂದು ಹೇಳುತ್ತಾರೆ. ಮಧುಮೇಹ ರೋಗಿಗಳು ಸಕ್ಕರೆ ಮತ್ತು ಕೆನೆ ಭರಿತ ಹಾಲಿನಲ್ಲಿ ಮಾಡಿದ ಕಾಫಿಯನ್ನು ತಪ್ಪಿಸುವುದು ಉತ್ತಮ. ಇದರ ಬದಲು ಬ್ಲಾಕ್ ಕಾಫಿ ಸೇವನೆ ಮಾಡಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಮಧುಮೇಹ ರೋಗಿಗಳು ಮಿತವಾಗಿ ಕಾಫಿ ಕುಡಿಯಬೇಕು ಅತಿಯಾದ ಕೆಫೀನ್ ಸೇವನೆ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.
